Advertisement

ದೇಶದ ಹಿತಕ್ಕೆ ಪೌರತ್ವ ಕಾನೂನು

09:28 PM Dec 31, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾನೂನುನಿಂದ ಯಾವುದೇ ಜಾತಿ, ಧರ್ಮಕ್ಕೆ ತೊಂದರೆ ಇಲ್ಲ. ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ದೇಶದ ಹಿತಕ್ಕಾಗಿ ಮಾಡುತ್ತಿದ್ದು, ಯೋಜನೆಗಳ ಬಗ್ಗೆ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್‌.ಬಚ್ಚೇಗೌಡ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ಮಂಗಳ ವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಏನೇ ಮಾಡಿದರೂ ದೇಶಕ್ಕಾಗಿಯೇ ಮಾಡುತ್ತಿದ್ದು, ಅವರು ಅನುಷ್ಠಾನ ಮಾಡಿದ ಎಲ್ಲಾ ಯೋಜನೆಗಳು ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿವೆ ಎಂದರು.

ಮೋದಿ ಅವರು ವಿಶ್ವ ಮಟ್ಟದ ನಾಯಕರಾಗಿದ್ದು, ಪ್ರಸ್ತುತ ವಿಶ್ವದ ಎಲ್ಲಾ ದೇಶಗಳಲ್ಲಿಯೂ ಭಾರತದ ಬಗ್ಗೆ ಅಪಾರ ಗೌರವ ಸಿಗಲು ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ರಾಜಕೀಯಕ್ಕಾಗಿ ಗಡಿ ಕ್ಯಾತೆ: ಮಹಾಜನ್‌ ವರದಿಯಂತೆ ಅಖಂಡ ಕರ್ನಾಟಕದ ಎಲ್ಲಾ ಪ್ರದೇಶಗಳು ಈ ರಾಜ್ಯದ ಅವಿಭಾಜ್ಯ ಅಂಗವಾಗಿದ್ದು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಲವರು ಗಡಿ ಖ್ಯಾತೆ ತೆಗೆಯುವ ಮೂಲಕ ವಿನಾಕಾರಣ ರಾಜ್ಯದ ಗಡಿಯಲ್ಲಿ ಸಾಮರಸ್ಯಕ್ಕೆ ಕುಂದು ತರುತ್ತಿದ್ದಾರೆ ಎಂದು ಮಹಾರಾಷ್ಟ್ರ ಗಡಿ ಕ್ಯಾತೆ ಕುರಿತು ಸಂಸದರು ಕಿಡಿಕಾರಿದರು.

ರಾಜ್ಯದಲ್ಲಿರುವ ಮರಾಠಿಗರು ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಶಾಂತಿ ಸೌಹಾರ್ದತೆಗೆ ಕುತ್ತು ತರುವ ಉದ್ದೇಶದ ಜೊತೆಗೆ ರಾಜಕೀಯ ಲಾಭಕ್ಕಾಗಿ ಹಲವರು ಇಂತಹ ಕೃತ್ಯಕ್ಕೆ ಮುಂದಾಗುತ್ತಿದ್ದು, ಇದರಿಂದ ರಾಜ್ಯ ವಿಚಲಿತವಾಗಲು ಸಾಧ್ಯವಿಲ್ಲ ಎಂದರು.

Advertisement

ಪಿಂಚಣಿ, ಮನೆಗಾಗಿ ಮನವಿ ಸಲ್ಲಿಕೆ: ಸಂಸದ ಬಿ.ಎನ್‌.ಬಚ್ಚೇಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸಂಸದರ ನಿಧಿಯಿಂದ ಪರಿಹಾರ ನೀಡಬೇಕು, ಖಾತೆ ಮಾಡಿಕೊಡಲು ಕಂದಾಯ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂಬುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಪರಿಹಾರ ಕೋರಿ ಮನವಿ ಸಲ್ಲಿಕೆಯಾದವು.

ಗ್ರಾಮೀಣ ಬಡವರಿಗೂ ನಿವೇಶನ, ಪಿಂಚಣಿ ಮತ್ತಿತರ ಸೌಕರ್ಯಗಳು ನೀಡುವಂತೆ ಕೋರಿ, ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದರು. ಸಾರ್ವಜನಿಕರ ಮನವಿಗಳಿಗೆ ಸಂಬಂಧಿಸಿ ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ರವಾನಿಸಿ, ಕೂಡಲೇ ಬಗೆಹರಿಸುವಂತೆ ಸಂಸದರು ಸೂಚನೆ ನೀಡಿದರು.

ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸುವ ನೆಪದಲ್ಲಿ ದೇಶದಲ್ಲಿ ಕೆಲವರು ಅಶಾಂತಿ ಉಂಟು ಮಾಡುತ್ತಿದ್ದಾರೆ. ಯಾರು ಕೂಡ ಪ್ರಚೋದನೆಗೆ ಒಳಗಾಗಬಾರದು.
-ಬಿ.ಎನ್‌.ಬಚ್ಚೇಗೌಡ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next