ಶಿಡ್ಲಘಟ್ಟ: ಪೌರತ್ವ ಕಾನೂನುನಿಂದ ದೇಶದ ಯಾರೊಬ್ಬರಿಗೂ ತೊಂದರೆಯಾಗದು. ಆದರೆ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದ್ದು ಯಾರೊಬ್ಬರೂ ಕಿವಿಗೊಡಬೇಡಿ ಎಂದು ಬಿಜೆಪಿ ಮುಖಂಡ ಚಲವಾದಿ ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ದಿಬ್ಬೂರಹಳ್ಳಿಯಲ್ಲಿ ರಾಷ್ಟ್ರೀಯ ಹಿತರಕ್ಷಣಾ ವೇದಿಕೆಯಿಂದ ಪೌರತ್ವ ಕಾನೂನು ಕುರಿತು ಆಯೋಜಿಸಿದ್ದ ಜನ ಜಾಗೃತಿಯ ಅಭಿಯಾನದಲ್ಲಿ ಮಾತನಾಡಿದ ಅವರು, ದೇಶದ ಹಿಂದೂಗಳು, ಮುಸ್ಲಿಮರು, ಯಾವುದೇ ಧರ್ಮದವರಿಗೆ ತೊಂದರೆಯಾಗದು ಎಂದರು.
ನೆರೆಯ ಬಾಂಗ್ಲದೇಶ, ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ದೌರ್ಜನ್ಯ, ಶೋಷಣೆಗೆ ಒಳಗಾಗಿ 2014ಕ್ಕಿಂತ ಮುಂಚೆ ಭಾರತಕ್ಕೆ ಬಂದಂತಹ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದು ಸಿಎಎ ಉದ್ದೇಶವೇ ಹೊರತು ದೇಶದಲ್ಲಿನ ಯಾರಿಗೂ ತೊಂದರೆ ಕೊಡುವುದಲ್ಲ. ಆದರೆ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡಿ ಮುಸ್ಲಿಮರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪೌರತ್ವ ಕಾನೂನು ಬಗ್ಗೆ ಸಹಮತ ಹೊಂದಿತ್ತು. ಇದೀಗ ಏಕೆ ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದ ಅವರು, ಮುಸ್ಲಿಮರನ್ನು ಕೇವಲ ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿರುವ ಕಾಂಗ್ರೆಸ್‌ನ ನಿಜವಾದ ಬಣ್ಣ ಬಯಲಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮುಖಂಡ ಸತ್ಯನಾರಾಯಣ ಮಹೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಮೇಶ್ ಬಾಯಿರಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಶಿಡ್ಲಘಟ್ಟ ನಗರ ಮಂಡಲ ಅಧ್ಯಕ್ಷ ರಾಘವೇಂದ್ರ, ಭಜರಂಗದಳ ಮುಖಂಡ ನರೇಶ್ ಕುಮಾರ್, ಶಿವಕುಮಾರ್, ಕನ್ನಪ್ಪನಹಳ್ಳಿ ಮಲ್ಲೇಶ್, ನಲ್ಲೋಜನಹಳ್ಳಿ ನಾಗರಾಜ್, ಭಜರಂಗದಳದ ಅಧ್ಯಕ್ಷ ಸದಾನಂದ, ಉಪಾಧ್ಯಕ್ಷ ನಾಗರಾಜು, ವಿಹೆಚ್‌ಪಿ ಮುಖಂಡ ಆರ್.ಕಿರಣ್‌ಕುಮಾರ್, ವಕೀಲ ರವೀಂದ್ರನಾಥ್ ಉಪಸ್ಥಿತರಿದ್ದರು.