ವಾಷಿಂಗ್ಟನ್: ನ.3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ 1.10 ಕೋಟಿ ಅಕ್ರಮ ವಲಸಿಗರಿಗೆ ದೇಶದ ಪೌರತ್ವ ನೀಡುವುದಾಗಿ ಡೆಮಾಕ್ರಾಟ್ ಅಭ್ಯರ್ಥಿ ಜೋ ಬೈಡೆನ್ ಆಶ್ವಾಸನೆ ನೀಡಿದ್ದಾರೆ.
ಕೊರೊನಾವನ್ನು ಸೋಲಿಸುವುದು, ಆರ್ಥಿಕತೆ ಯನ್ನು ಚೇತರಿಸುವುದು ಮತ್ತು ಜಗತ್ತಿನಾದ್ಯಂತ ಅಮೆರಿಕದ ನಾಯಕತ್ವದ ಪ್ರಾಬಲ್ಯವನ್ನು ಮರುಗಳಿಸುವುದರ ಜತೆಗೆ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದು ಕೂಡ ನಮ್ಮ ಆದ್ಯತೆಯಾಗಿದೆ ಎಂದು ವರ್ಚುವಲ್ ನಿಧಿ ಸಂಗ್ರಹ ಅಭಿಯಾನದ ವೇಳೆ ಬೈಡೆನ್ ಹೇಳಿದ್ದಾರೆ.
ಹಾಲಿ ಅಧ್ಯಕ್ಷ ಟ್ರಂಪ್ ಅವರು ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದಾಗಿ ಘೋಷಿಸಿದ್ದರೆ, ಬೈಡೆನ್ ಅವರು ಅದಕ್ಕೆ ತದ್ವಿರುದ್ಧ ಹೇಳಿಕೆ ನೀಡಿರುವುದು ಚುನಾವಣೆ ಮೇಲೆ ಹೇಗೆ ಪ್ರಭಾವ ಬೀರ ಬಹುದು ಎಂಬ ಕುತೂಹಲ ಮೂಡಿಸಿದೆ.
ಟ್ವಿಟರ್ ಖಾತೆ ಬ್ಲಾಕ್: ಡೆಮಾಕ್ರಾಟ್ ಅಭ್ಯರ್ಥಿ ಬೈಡೆನ್ ಪುತ್ರನ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ್ದು ಎನ್ನಲಾದ ಪತ್ರಿಕಾ ವರದಿಯನ್ನು ಹಂಚಿಕೊಂಡ ಬೆನ್ನಲ್ಲೇ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಕೈಲೆಗ್ ಮೆಕ್ಯಾನಿ ಅವರ ವೈಯಕ್ತಿಕ ಟ್ವಿಟರ್ ಖಾತೆಯನ್ನು ಟ್ವಿಟರ್ ಸಂಸ್ಥೆ ಬ್ಲಾಕ್ ಮಾಡಿದೆ. ಬೈಡೆನ್ ಪುತ್ರ ಹಂಟರ್ ಬೈಡೆನ್ ವಿರುದ್ಧ ನ್ಯೂಯಾರ್ಕ್ ಪೋಸ್ಟ್‌ನಲ್ಲಿ ಇತ್ತೀಚೆಗೆ ಸುದ್ದಿ ಪ್ರಕಟವಾಗಿತ್ತು.
ಅಭ್ಯರ್ಥಿಗಳ ನಡುವಿನ ಮುಖಾಮುಖೀ ಚರ್ಚೆ ರದ್ದಾದ ಹಿನ್ನೆಲೆಯಲ್ಲಿ ಟ್ರಂಪ್ ಮತ್ತು ಬೈಡೆನ್ ಟಿವಿ ವೀಕ್ಷಕರ ಮೂಲಕ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಅದರಂತೆ, ಗುರುವಾರ ರಾತ್ರಿ ಮಿಯಾಮಿಯಿಂದ ಎನ್‌ಬಿಸಿ ಯಲ್ಲಿ ಟ್ರಂಪ್, ಫಿಲಡೆಲ್ಫಿಯಾದಿಂದ ಎಬಿಸಿ ಟಿವಿಯಲ್ಲಿ ಬೈಡೆನ್ ವಿವಿಧ ನಗರಗಳ ಜನತೆಯ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.