ಕಾಪು: ಕಾಪು ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ
ಅವಕಾಶಗಳಿದ್ದು, ಪ್ರವಾಸೋದ್ಯಮ ಇಲಾಖೆಯ ಯೋಜನೆಗಳನ್ನು ವ್ಯವಸ್ಥಿತ ವಾಗಿ ಕಾರ್ಯಗತಗೊಳಿಸಬೇಕಾದರೆ ಊರಿನ ನಾಗರಿಕರ ಸಹಕಾರವೂ ಅತ್ಯಗತ್ಯವಾಗಿ ದೊರಕಬೇಕಿದೆ. ಇದಕ್ಕೆ ಪೂರಕವಾಗುವ ಆಡಳಿತಾತ್ಮಕ ವ್ಯವಸ್ಥೆ ಜಾರಿಗೊಳಿಸಲು ಸರಕಾರಿ ಅಧಿಕಾರಿಗಳು ಮುಂದಾಗಬೇಕಿದ್ದು ಕಾಪು ಅಭಿವೃದ್ಧಿ ಸಮಿತಿ ಕೂಡ ಯೋಜನೆ ಅನುಷ್ಟಾನಕ್ಕೆ ತರಲು ಪೂರ್ಣ ಬೆಂಬಲ ನೀಡಲಿದೆ ಎಂದು ಸಮಿತಿ ಅಧ್ಯಕ್ಷ ಮನೋಹರ್ ಎಸ್.ಶೆಟ್ಟಿ ಹೇಳಿದರು.
ಮೇ 18ರಂದು ಕಾಪು ಅಭಿವೃದ್ಧಿ ಸಮಿತಿಯ ಕಾರ್ಯಾಲಯದಲ್ಲಿ ಜರಗಿದ ಅಭಿವೃದ್ಧಿ ಸಮಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವತ್ಛ ಕಾಪು – ಸುಂದರ ಕಾಪು ಘೋಷಣೆಯ ನೆಲೆಯಲ್ಲಿ ಕಾಪು ಪೇಟೆಯಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ, ಕೊಳಚೆ ನೀರಿನ ಶುದ್ಧೀಕರಣ, ಹೂದೋಟದ ನಿರ್ಮಾಣ, ಸಾರಿಗೆ ವ್ಯವಸ್ಥೆ ಅನುಷ್ಠಾನಗೊಳಿಸಲು ಸಾಧ್ಯವಿದೆ. ಕಾಪುವಿನ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಮಾರ್ಗದರ್ಶನ ದಲ್ಲಿ ಚಿಂತಿಸಿ, ಯೋಚಿಸಿ, ಕೆಲಸ ಮಾಡುವ ಅಗತ್ಯತೆಯಿದೆ ಎಂದರು.
ಮಾಜಿ ಸಚಿವ/ ಸಮಿತಿಯ ಗೌರವಾಧ್ಯಕ್ಷ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪು ಅಭಿವೃದ್ಧಿಗಾಗಿ ಸರಕಾರದಿಂದ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು ಪ್ರಾಥಮಿಕ ಹಂತದಲ್ಲೇ ಹಲವು ಸಮಸ್ಯೆಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಯೋಜನೆ ಕಾರ್ಯಗತ ಗೊಳಿಸಲು ತೊಂದರೆಯಾಗುತ್ತಿದೆ. ಅದಕ್ಕಾಗಿ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಸ್ಥಳೀಯರ ಮನವೊಲಿಕೆ ಆಗಬೇಕಿದೆ. ಆ ಬಳಿಕ ಅಭಿವೃದ್ಧಿಯ ನೆಲೆಯಲ್ಲಿ ರೂಪಿಸಲಾದ ಯೋಜನೆ ಅನುಷ್ಟಾನಕ್ಕೆ ತರಲು ಸಾಧ್ಯವಿದೆ ಎಂದರು.
ಕಾಪು ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಕೆ. ವಾಸುದೇವ ಶೆಟ್ಟಿ ವಿವಿಧ ಸಲಹೆ ನೀಡಿದರು. ಸಮಿತಿಯ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಹರೀಶ್ ನಾಯಕ್ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಸಾದ್ ಎಸ್. ಕಾಮತ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು. ಸಮಿತಿಯ ಸದಸ್ಯ ಶಿವಣ್ಣ ಬಾಯಾರ್ ಕಾರ್ಯಕ್ರಮ ನಿರೂಪಿಸಿದರು.