ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ನಾಗರಿಕ ಹಕ್ಕು ನೀಡುವ ಪೌರತ್ವ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಕಳೆದ ಲೋಕಸಭೆಯಲ್ಲಿ ಈ ವಿವಾದಿತ ಮಸೂದೆಯನ್ನು ಮಂಡಿಸಲಾಗಿದ್ದು, ಅದಕ್ಕೆ ಅಂಗೀಕಾರ ದೊರಕಿರಲಿಲ್ಲವಾಗಿತ್ತು. ಆದರೆ ಮುಂದಿನ ವಾರ ಸಂಸತ್ ನಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಮಂಗಳವಾರ ಬಿಜೆಪಿ ಸಂಸದರಿಗೆ ಈ ಬಗ್ಗೆ ಸೂಚನೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಮಸೂದೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವಷ್ಟೇ ಮಹತ್ವದ ಮಸೂದೆ ಇದಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಪೌರತ್ವ ತಿದ್ದುಪಡಿ ಮಸೂದೆ:
ಪೌರತ್ವ ತಿದ್ದುಪಡಿ ಮಸೂದೆ ಪ್ರಕಾರ ಹಿಂದೂಗಳು, ಕ್ರಿಶ್ಚಿಯನ್, ಸಿಖ್ಖ, ಜೈನರು, ಬೌದ್ಧರು ಹಾಗೂ ಪಾರ್ಸಿ ಸಮುದಾಯಕ್ಕೆ ಭಾರತದ ಪೌರತ್ವ ಸಿಗಲಿದೆ. ಆಯ್ದ ಅಕ್ರಮ ವಲಸಿಗರಿಗೆ ನಾಗರಿಕ ಹಕ್ಕು ನೀಡಲು ಮಸೂದೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ ಈ ಮಸೂದೆಯಲ್ಲಿ ಮುಸ್ಲಿಮರನ್ನು ಹೊರಗಿಟ್ಟಿರುವುದು ಸಂವಿಧಾನ ವಿರೋಧಿ ಕ್ರಮ ಎಂದು ವಿಪಕ್ಷಗಳು ಆರೋಪಿಸಿವೆ.
ಪ್ರಸ್ತುತ ಇರುವ ಪೌರತ್ವ ಕಾಯ್ದೆ ಪ್ರಕಾರ ಬಾಂಗ್ಲಾ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳು, ಬೌದ್ಧರು, ಸಿಖ್ಖ, ಜೈನರು, ಕ್ರೈಸ್ತರ ವಲಸಿಗರು ಭಾರತದಲ್ಲಿ 12 ವರ್ಷಕ್ಕಿಂತ ಹೆಚ್ಚು ಭಾರತದಲ್ಲಿ ವಾಸವಿದ್ದರೆ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ. ಆದರೆ ತಿದ್ದುಪಡಿ ಮಸೂದೆಯಲ್ಲಿ ಭಾರತದಲ್ಲಿ ಆರು ವರ್ಷ ವಾಸವಿದ್ದರೆ ಅವರು ದೇಶದ ಪೌರತ್ವ ಪಡೆಯಬಹುದಾಗಿದೆ. ಅದಕ್ಕೆ ಸೂಕ್ತ ದಾಖಲೆಯ ಅಗತ್ಯತೆಯೂ ಇಲ್ಲ ಎಂದು ವರದಿ ತಿಳಿಸಿದೆ.