ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ರಾಜ್ಯವ್ಯಾಪಿ ಜನ ಜಾಗೃತಿಗೆ ಮುಂದಾ ಗಿರುವ ಬಿಜೆಪಿ, ಬೂತ್‌ನಿಂದ ರಾಜ್ಯಮಟ್ಟ ದವವರೆಗೂ ವಿವಿಧ ಕಾರ್ಯಕ್ರಮಗಳ ಮೂಲಕ ಡಿ.25ರಿಂದ ಜ.15ರವರೆಗೆ ಜನಜಾಗೃತಿ ಅಭಿಯಾನ ನಡೆಸಲಿದೆ. ಈ ಕುರಿತು ಮಂಗಳವಾರ ಬಿಜೆಪಿ ಕಚೇರಿ ಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ- 2019ರ ಜನಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್. ರವಿಕುಮಾರ್, ಬೆಂಗಳೂರು ಒಳಗೊಂಡಂತೆ 58 ಸಾವಿರ ಬೂತ್‌ಗಳಲ್ಲೂ ಅಭಿಯಾನ ಕಾರ್ಯ ನಡೆಸಲಿದ್ದೇವೆ ಎಂದರು.
ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಸುಮಾರು 30 ಲಕ್ಷ ಮನೆಗಳಿದ್ದು, ಆ ಎಲ್ಲ ಮನೆಗಳನ್ನು ಸಂಪರ್ಕ ಮಾಡಲಿದ್ದೇವೆ. ಸರಿ ಸುಮಾರು ಒಂದು ಕೋಟಿ ಜನರಿಗೆ ಇದರ ಮಾಹಿತಿ ನೀಡಿ, ಜನಜಾಗೃತಿ ಮಾಡಲಿದ್ದೇವೆ. ಇದಕ್ಕಾಗಿ ಪ್ರತಿ ಬೂತ್‌ನಲ್ಲಿ 5 ಜನರ ತಂಡ, ಪ್ರತಿ ಶಕ್ತಿ ಕೇಂದ್ರ, ಪ್ರತಿ ಮಂಡಲ, ಪ್ರತಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತಲಾ 5 ಜನರ ತಂಡ ರಚನೆ ಮಾಡಿದ್ದೇವೆ ಎಂದು ಹೇಳಿದರು.
ಈ ಅಭಿಯಾನದಲ್ಲಿ ಪಕ್ಷದ 25 ಸಾವಿರ ಜನ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ಮನೆ ಮನೆ ಸಂಪರ್ಕದ ಜತೆ ಜತೆಗೆ 300 ಮಂಡಲ ಕೇಂದ್ರದಲ್ಲಿ ಜಾಗೃತಿ ಮಾತ್ತು ಮಾಹಿತಿ ಸಭೆ ಮತ್ತು ಸಂವಾದ ಕಾರ್ಯಕ್ರಮ ನಡೆಸಲಿದ್ದೇವೆ. ರಾಜ್ಯದ 30 ಜಿಲ್ಲೆಗಳಲ್ಲೂ ಜಿಲ್ಲಾಮಟ್ಟದ ರ್ಯಾಲಿ ಆಯೋಜಿಸಲಿದ್ದೇವೆ. ಪ್ರತಿ ರ್ಯಾಲಿಯಲ್ಲಿ 5 ರಿಂದ 10 ಸಾವಿರ ಜನ ಸೇರಲಿದ್ದಾರೆ. ಬೆಂಗಳೂರು, ಸಿಂಧನೂರು (ಇಲ್ಲಿ 25 ಸಾವಿರಕ್ಕೂ ಅಧಿಕ ನಿರಾಶ್ರಿತರಿದ್ದಾರೆ), ಹುಬ್ಬಳ್ಳಿ, ಕಲಬುರಗಿ ಮತ್ತು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸುವ ಮೂಲಕ ಕಾಯ್ದೆಯ ಕುರಿತು ಜನ ಜಾಗೃತಿ ಮಾಡಲಿದ್ದೇವೆ ಎಂದರು.
ನೋಂದಣಿ ಕೇಂದ್ರ: ಜನಜಾಗೃತಿ ಅಭಿಯಾನದ ಜತೆಗೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನದಿಂದ ನಿರಾಶ್ರಿತರಾಗಿ ಬಂದಿರುವ ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನ್, ಪಾರ್ಸಿ ಮೊದಲಾದ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರ ತೆರೆಯಲಿದ್ದೇವೆ ಎಂದು ಹೇಳಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಕಾರ್ಯದರ್ಶಿ ಭಾರತಿ ಮುಗ್ಧಾಮ್, ಸಹ ವಕ್ತಾರರಾದ ಎಸ್.ಪ್ರಕಾಶ್, ಛಲವಾದಿ ನಾರಾಯಣಸ್ವಾಮಿ ಮತ್ತು ಅನ್ವರ್ ಮಾಣಿಪ್ಪಾಡಿ ಇದ್ದರು.
ಸಂಯೋಜಕ, ಸಂಚಾಲಕರ ನೇಮಕ: ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ರಾಜ್ಯಮಟ್ಟದ ಜಾಗೃತಿ ಸಭೆಯಲ್ಲಿ ರಾಜ್ಯ ತಂಡದ ಸಂಯೋಜಕ ಹಾಗೂ ಸಂಚಾಲಕರ ಆಯ್ಕೆ ನಡೆದಿದೆ. ಒಟ್ಟಾರೆ ಅಭಿಯಾನದ ಸಂಯೋಜಕರಾಗಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಎನ್.ರವಿಕುಮಾರ್ ಸೇವೆ ಸಲ್ಲಿಸಲಿದ್ದಾರೆ. ಮಹೇಶ್ ಟೆಂಗಿನಕಾಯಿ, ಭಾನು ಪ್ರಕಾಶ್, ನಿರ್ಮಾಲ್ ಕುಮಾರ್ ಸುರಾನ್, ಶಾಸಕ ಪಿ.ರಾಜೀವ್ ಅವರನ್ನು ಸಂಚಾಲಕರನ್ನಾಗಿ ಮಾಡಲಾಗಿದೆ.
ಕೇಂದ್ರದ ಸೂಚನೆಯಂತೆ ಜನಜಾಗೃತಿ ಅಭಿಯಾನ ನಡೆಸಲಿದ್ದೇವೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಜನ ಸಾಮಾನ್ಯರ ದಾರಿತಪ್ಪಿಸುವ ಕೆಲಸ ಮಾಡುತ್ತಿರುವವರು ಯಾರು ಎಂಬುದನ್ನು ಗೊತ್ತು ಮಾಡುತ್ತೇವೆ. ಕೇಂದ್ರ ಸರ್ಕಾರಕ್ಕೆ ಮಸಿಬಳಿಯಲು ಕಾಂಗ್ರೆಸ್, ಎಡಪಂಥೀಯರು, ನಗರ ನಕ್ಸಲರು, ಬುದ್ಧಿಜೀವಿಗಳು, ಡೋಂಗಿ ಜಾತ್ಯತೀತವಾದಿಗಳು ಮಾಡಿರುವ ಸಂಚನ್ನು ಬಯಲು ಮಾಡಲಿದ್ದೇವೆ.
-ಎನ್.ರವಿಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ