ಹಾವೇರಿ: ನಗರಸಭೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ನೇಮಕಾತಿಯಲ್ಲಾಗಿರುವ ವಿಳಂಬ ಹಾಗೂ ಕೆಲವು ಹೊರಗುತ್ತಿಗೆ ಪೌರಕಾರ್ಮಿಕರ ನೇಮಕಾತಿಗೆ ಸಂಬಂಧಿಸಿ ಜಿಲ್ಲಾ ಧಿಕಾರಿಯವರಿಗೆ ನಗರಸಭೆ ತಪ್ಪು ಮಾಹಿತಿ ನೀಡಿರುವುದನ್ನು ಖಂಡಿಸಿ ಹೊರಗುತ್ತಿಗೆ ಪೌರಕಾರ್ಮಿಕರು ಸೋಮವಾರ ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು.
ನಗರಸಭೆ ಎದುರು ಸೇರಿದ ಪೌರಕಾರ್ಮಿಕರು ಹಲಗೆ ಬಾರಿಸುವ ಮೂಲಕ ತಮ್ಮ ಬೇಡಿಕೆ ಈಡೇರಿಕೆಗೆಆಗ್ರಹಿಸಿದರು. ಖಾಲಿ ಇರುವ ಪೌರಕಾರ್ಮಿಕರ ನೇಮಕಾತಿಗಾಗಿ ಸರ್ಕಾರ ನಗರಸಭೆ ಮೂಲಕ ಅರ್ಜಿ ಕರೆದಿದ್ದು, ನಗರಸಭೆಯಲ್ಲಿ ಈಗಾಗಲೇ 14-15ವರ್ಷಗಳಿಂದ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ 91 ಪೌರಕಾರ್ಮಿಕರು 2018ರ ಫೆಬ್ರುವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ 17-10-2018ರಂದು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಆಗ ತಾತ್ಕಾಲಿಕ ಆಯ್ಕೆ ಪಟ್ಟಿ ಸರಿಯಿಲ್ಲ ಎಂದು ಆಕ್ಷೇಪಣೆಸಲ್ಲಿಸಲಾಗಿತ್ತು. ಆದರೆ, ಆಕ್ಷೇಪಣೆ ಸಲ್ಲಿಸಿ ಒಂದು ವರ್ಷವಾದರೂ ನೇಮಕಾತಿ ನಡೆದಿಲ್ಲ ಹಾಗೂ ತಪ್ಪಾಗಿರುವುದನ್ನು ಸರಿಪಡಿಸಿಲ್ಲ. ಮೂರ್‍ನಾಲ್ಕು ತಿಂಗಳಿಂದ ಸಂಬಳವೂ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹತ್ತಾರು ಬಾರಿ ಲಿಖೀತವಾಗಿ, ಮೌಖೀಕವಾಗಿ ಮನವಿ ಮಾಡಿದರೂ ನಮ್ಮ ಬೇಡಿಕೆ, ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಸತ್ಯಾಗ್ರಹ ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಸರಿಪಡಿಸಬೇಕು. ನೇಮಕಾತಿ ಮಾಡುವಾಗ ಅರ್ಹ ಹಾಗೂ ಹೆಚ್ಚಿನ ಅವಧಿ ಕೆಲಸ ಮಾಡಿದ ಪೌರಕಾರ್ಮಿಕರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು. ನಗರಸಭೆ ಪರಿಸರ ಅಭಿಯಂತರ ಬೇಜವಾಬ್ದಾರಿಯಿಂದ ಸುಮಾರು 14-15ವರ್ಷ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತ ಬಂದಿರುವ ಏಳು ಪೌರಕಾರ್ಮಿಕರನ್ನು ಸೂಕ್ತ ದಾಖಲೆ ಇಲ್ಲದಿದ್ದರೂ ಅವರನ್ನು ಚಾಲಕ, ಮೇಲುಸ್ತುವಾರಿ ಎಂದೆಲ್ಲ ಜಿಲ್ಲಾಧಿಕಾರಿ ಕಚೇರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಈ ತಪ್ಪನ್ನು ಸರಿಪಡಿಸಬೇಕು. ನಗರಸಭೆಯಲ್ಲಿ ಕಸ ಹಾಗೂ ತ್ಯಾಜ್ಯ ಸಾಗಿಸಲು ಐದು ಟ್ರಾಕ್ಟರ್‌ಗಳು, ಐದು ಟಾಟಾಏಸ್, 10 ಆಟೋ ಟಿಪ್ಪರ್ ಸೇರಿ 21ವಾಹನಗಳಿದ್ದು ಈ ಯಾವ ವಾಹನಗಳಿಗೂ ಅಧಿಕೃತ ಚಾಲಕರಿಲ್ಲ. ವಾಹನ ಚಾಲನೆ ಪರವಾನಗಿ ಹೊಂದಿಲ್ಲದಿದ್ದರೂ ಹೊರಗುತ್ತಿಗೆ ಪೌರಕಾರ್ಮಿಕರನ್ನೇ ಚಾಲನೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಏನಾದರೂ ಅಪಘಾತವಾದರೆ ಅದಕ್ಕೆಲ್ಲ ಹೊಣೆ ಯಾರು? ಆದ್ದರಿಂದ ಪೌರಕಾರ್ಮಿಕರನ್ನು ವಾಹನ ಚಾಲನೆ
ಕೆಲಸಕ್ಕೆ ಬಳಸಬಾರದು ಹಾಗೂ ಹಾಲಿ ಕೆಲಸ ನಿರ್ವಹಿಸುತ್ತಿರುವ ಯಾವ ಪೌರಕಾರ್ಮಿಕರನ್ನೂ ಕೆಲಸದಿಂದ ತೆಗೆದುಹಾಕಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹೊರಗುತ್ತಿಗೆ ಪೌರಕಾರ್ಮಿಕರ ಈ ಸತ್ಯಾಗ್ರಹಕ್ಕೆ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕ, ದಲಿತ ಸಂಘರ್ಷ ಸಮಿತಿ, ಲಿಂಗತ್ವ ಅಲ್ಪಸಂಖ್ಯಾತರ ಘಟಕದ ಪದಾಧಿ ಕಾರಿಗಳು ಬೆಂಬಲ ಸೂಚಿಸಿದ್ದರು. ತಾಲೂಕು ಹೊರಗುತ್ತಿಗೆ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜು ಮಾಳಗಿ, ಅಜ್ಜಪ್ಪ ಬನ್ನಮ್ಮನವರ, ರಾಜು ವರ್ದಿ, ಯಲ್ಲಪ್ಪ ಕೋಡಬಾಳ, ಯುವರಾಜ ಭಂಡಾರಿ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿದ್ದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ನೆಹರು ಓಲೇಕಾರ ಭೇಟಿ ನೀಡಿ ಪೌರಕಾರ್ಮಿಕರ ಸಮಸ್ಯೆ ಆಲಿಸಿದರು.ಎಲ್ಲ ಪೌರಕಾರ್ಮಿಕರಿಗೆ ನ್ಯಾಯ ಒದಗಿಸುವ ಹಾಗೂ ನೇಮಕಾತಿಯಲ್ಲಾಗಿರುವ ತಪ್ಪು ಸರಿಪಡಿಸುವ ಭರವಸೆ ನೀಡಿದರು.