ಬೆಂಗಳೂರು: ಪುನರುಜ್ಜೀವನಗೊಂಡಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ರಾಚೇನಹಳ್ಳಿ ಕೆರೆಯ ಆವರಣದಲ್ಲಿ ಬಿಬಿಎಂಪಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ “ಬೆಂಗಳೂರು ಹಬ್ಬ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ, ಕೆರೆಗೆ ಬಾಗಿನ ಅರ್ಪಿಸಿದರು.
ಬಿಡಿಎ ಹಾಗೂ ಬಿಬಿಎಂಪಿ ವತಿಯಿಂದ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ರಾಚೇನಹಳ್ಳಿ ಕೆರೆ ಅಭಿವೃದ್ಧಿ ಮಾಡಿದ್ದು, ಕೆರೆಯ ಬಳಿ 8 ಎಕರೆ ಜಾಗದಲ್ಲಿ ಸುಂದರ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. ಭಾನುವಾರ ಕೆರೆಗೆ ಬಾಗಿನ ಅರ್ಪಿಸಿದ ನಂತರ ಉದ್ಯಾನವನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ಬಿಬಿಎಂಪಿ ಹಾಗೂ ಬಿಡಿಎ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಉಳಿದ ಕೆರೆಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂತೆ ಸೂಚಿಸಿದ್ದಾರೆ.
ಬೆಂಗಳೂರು ಹಬ್ಬದ ಅಂಗವಾಗಿ ಬೆಳಗ್ಗೆ 6.30ಕ್ಕೆ ಆಯೋಜಿಸಿದ್ದ 5ಕೆ ರನ್‌ನಲ್ಲಿ ಸುಮಾರು 600 ಜನರು ಹಾಗೂ 7.45ಕ್ಕೆ ಆಯೋಜಿಸಿದ್ದ ಸೈಕ್ಲಥಾನ್‌ನಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿ ಪರಿಸರ ಜಾಗೃತಿ ಸಂದೇಶವನ್ನ ಸಾರಿದರು. ಕೃಷಿ ಸಚಿವ ಕೃಷ್ಣಭೈರೇಗೌಡ ದಂಪತಿ 5ಕೆ ಓಟ ಹಾಗೂ ಸೈಕ್ಲಥಾನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇದೇ ಮೊದಲ ಬಾರಿ ರಾಚೇನಹಳ್ಳಿ ಕೆರೆಯಲ್ಲಿ ಬೋಟಿಂಗ್‌ಗೆ ಅವಕಾಶ ಕಲ್ಪಿಸಲಾಗಿತ್ತು.
ಲೇಸರ್ ಷೋ: ರಾಚೇನಹಳ್ಳಿ ಕೆರೆಯ ಬಳಿ 8 ಎಕರೆ ಜಮೀನಿನಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನದಲ್ಲಿ ವಿವಿಧ ಕಲಾಕೃತಿಗಳು ಹಾಗೂ ಬೆಂಗಳೂರು ಲೋಗೋ ಇರಿಸಲಾಗಿದ್ದು, ಸಂಜೆ ಕೆರೆಯ ಬಳಿ ಲೇಸರ್ ಷೋ ಆಯೋಜಿಸಲಾಗಿತ್ತು. ಈ ಲೇಸರ್ ಷೋವನ್ನು ಕೆರೆಯ ಸುತ್ತಲಿರುವ 18 ಅಂತಸ್ತಿನ ಮೂರು ಕಟ್ಟಡಗಳಿಂದ ವಿಡಿಯೋ ಚಿತ್ರಕರಣ ಮಾಡಿರುವುದು ಬೆಂಗಳೂರು ಹಬ್ಬದ ವಿಶೇಷತೆಯಾಗಿದೆ.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, ಸುಮಾರು 170 ಎಕರೆ ಪ್ರದೇಶದ ರಾಚೇನಹಳ್ಳಿ ಕೆರೆಯನ್ನು ಈ ಮೊದಲು ಬಿಡಿಎ 14 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಪಾಲಿಕೆಗೆ ಹಸ್ತಾಂತರಿಸಿತ್ತು. ನಂತರದಲ್ಲಿ ಪಾಲಿಕೆಯಿಂದ ಕೆರೆಯ ಸುತ್ತ ಉದ್ಯಾನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಉಳಿದ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಕೆರೆಗಳಿಗೆ ತ್ಯಾಜ್ಯ ನೀರು ಸೇರದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಚಿವರಾದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್. ಎಚ್.ಸಿ.ಮಹದೇವಪ್ಪ ಇದ್ದರು.