ರಾಮನಗರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾಡುತ್ತಿದ್ದ ಚಿರತೆ ಹಾವಳಿ ಇದೀಗ ಜಿಲ್ಲಾ ಕೇಂದ್ರದ ನಾಗರಿಕರನ್ನು ಕಾಡುತ್ತಿದೆ. ಬೀದಿ ನಾಯಿಗಳ ಕಾಟದೊಂದಿಗೆ ಚಿರತೆ, ಹಾವುಗಳ ಕಾಟವನ್ನು ನಾಗರಿಕರು ಸಹಿಸಿಕೊಳ್ಳಬೇಕಾಗಿದೆ.
ಬಿಟ್ಟು ಬಿಡದೆ ಕಾಡುತ್ತಿದೆ ಚಿರತೆ: ಕಳೆದ ಜೂನ್ 10ರಂದು ಖಾಸಗಿ ಬಸ್ ನಿಲ್ದಾಣದ ಬಳಿ ಮುಂಜಾನೆ ನಾಯಿಯನ್ನು ಸಾಯಿಸಿರುವ ಚಿರತೆ, ಜೂನ್ 23ರ ರಾತ್ರಿ ನಗರದ ಹೃದಯಭಾಗ ರಾಘವೇಂದ್ರ ಕಾಲೋನಿಯಲ್ಲಿ ನಾಯಿಯೊಂದನ್ನು ಹೊತ್ತೂಯ್ದಿದೆ. ಇದೀಗ ಶುಕ್ರವಾರ ರಾತ್ರಿ ಮತ್ತೆ ರಾಘವೇಂದ್ರ ಕಾಲೋನಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಗರದ ನಾಗರಿಕರು ತಲ್ಲಣಗೊಂಡಿದ್ದಾರೆ.
ಜೂನ್ 28 ಶುಕ್ರವಾರ ರಾತ್ರಿ 9.30ರ ವೇಳೆ ರಾಘವೇಂದ್ರ ಕಾಲೋನಿಯಲ್ಲಿ ಮಂಜುನಾಥ್ ಎಂಬುವರ ಮನೆಯ ಹಿತ್ತಲಿನಲ್ಲಿರುವ ಕಟ್ಟಡದ ಮೇಲೆ ಚಿರತೆಯನ್ನು ಕಂಡ ನೆರೆಯ ಮನೆಯ ಅನಂತ ಕೃಷ್ಣ ಹೇರ್ಳೆ ಕುಟುಂಬ ಆತಂಕದ್ದಲ್ಲಿದ್ದಾರೆ. ಅರಣ್ಯ ಸಿಬ್ಬಂದಿಗೆ ಫೋನಾಯಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಕೂಡ ಚಿರತೆ ತಪ್ಪಿಸಿಕೊಳ್ಳುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.
ಬೋನಿಗೆ ಸೆರೆ ಸಿಕ್ಕಿಲ್ಲ: ಪತ್ರಿಕೆಯೊಂದಿಗೆ ಮಾತನಾಡಿದ ಅರಣ್ಯ ಸಿಬ್ಬಂದಿ ಚಂದ್ರು, ಜೂನ್ 23ರಂದು ಸಹ ಅನಂತ ಕೃಷ್ಣ ಹೇರ್ಳೆ ಅವರ ಮನೆಯ ಹಿತ್ತಲಿನಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಹೊತ್ತು ಹೊಯ್ದಿದೆ. ಈ ಪ್ರಕರಣದ ನಂತರ ಇಲ್ಲಿ ಬೋನೊಂದನ್ನು ಇರಿಸಲಾಗಿದೆ. ಆದರೆ, ಚಿರತೆ ಪುನಃ ಇದೇ ಸ್ಥಳದಲ್ಲಿ ಶುಕ್ರವಾರ ರಾತ್ರಿ ಕಾಣಿಸಿಕೊಂಡಿದೆ. ಆದರೆ ಬೋನಿಗೆ ಸೆರೆ ಸಿಕ್ಕಿಲ್ಲ ಎಂದು ಮಾಹಿತಿ ನೀಡಿದ್ದಾರೆ. ತೀರಾ ಇತ್ತೀಚೆಗೆ ಷರೀಪ್ ಕಾಂಪ್ಲೆಕ್ಸ್‌ನ ಹಿಂಭಾಗ ರಾತ್ರಿ 8 ಗಂಟೆ ವೇಳೆಗೆ ಚಿರತೆ ಓಡಾಡುತ್ತಿರುವುದನ್ನು ಕೆಲವರು ಸ್ಪಷ್ಟ ಪಡಿಸಿದ್ದಾರೆ.
ನದಿಯಲ್ಲಿ ಬೀಡು ಬಿಟ್ಟಿರುವ ಚಿರತೆ: ನಗರದ ಮೂಲಕ ಹಾದು ಹೋಗಿರುವ ಅರ್ಕಾವತಿ ನದಿಯಲ್ಲಿ ಲಾಳದ ಕಡ್ಡಿ, ಜೊಂಡು ಮುಂತಾದ ಗಿಡಗಳು 10 ಅಡಿ ಎತ್ತರಕ್ಕೆ ಬೆಳೆದು ನಿಂತಿವೆ. ಶ್ರೀರಾಮ ದೇವರ ಬೆಟ್ಟ, ಹಂದಿಗೊಂದಿ ಅರಣ್ಯ ಪ್ರದೇಶದಿಂದ ಚಿರತೆಗಳು ಆಹಾರ ಅರಸಿ, ನದಿ ಪಾತ್ರವನ್ನು ಸೇರಿಕೊಂಡಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಾಮನಗರ ಬೈಪಾಸ್ ನಿರ್ಮಾಣ ಕಾಮಗಾರಿ ನಗರಕ್ಕೆ ಅತಿ ಸಮೀಪ ಬಿಳಗುಂಬ-ಅರೇಹಳ್ಳಿ ಗ್ರಾಮಗಳ ನಡುವೆ ನಡೆಯುತ್ತಿದ್ದು, ಅಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಡು ಪ್ರಾಣಿಗಳೀಗ ನಗರದ ಗಡಿ ಪ್ರದೇಶದ ಪೊದೆಗಳು, ಹೊಲ, ಗದ್ದೆಗಳಲ್ಲಿ ಆಶ್ರಯ ಪಡೆದುಕೊಂಡಿವೆ. ಅರ್ಕಾವತಿ ನದಿ ಪಾತ್ರದಲ್ಲಿ ಬೆಳದಿರುವ ರಾಶಿ, ರಾಶಿ ಗಿಡಗಳ ನಡುವೆ ಚಿರತೆ ಕೂಡ ಬೀಡು ಬಿಟ್ಟಿದೆ.
● ಬಿ.ವಿ.ಸೂರ್ಯ ಪ್ರಕಾಶ್