ಕೆ.ಆರ್.ಪುರ: ಕೆ.ಆರ್.ಪುರ ಕ್ಷೇತ್ರದ ದೇವಸಂದ್ರ ವಾರ್ಡ್‌ಗೆ ನಿಗದಿಯಾಗಿರುವ ಇಂದಿರಾ ಕ್ಯಾಂಟೀನ್ ಕೆ.ಆರ್.ಪುರದ ಸಂತೆ ಮೈದಾನದಲ್ಲಿ ಮೈದಳೆದಿದೆ. ಆದರೆ, ಕ್ಯಾಂಟೀನ್ ಬಂತೆಂಬ ಖುಷಿ ಮಾತ್ರ ನಾಗರಿಕರಲಿಲ್ಲ. ಯಾಕೆಂದರೆ, ಕ್ಯಾಂಟೀನ್ ನಿರ್ಮಾಣವಾಗಿರುವ ಜಾಗ ಜನರಿಗೆ ಹಿಡಿಸುತ್ತಿಲ್ಲ. ನಿತ್ಯವೂ ಕಸದ ರಾಶಿ, ದುರ್ವಾಸನೆ, ಸೊಳ್ಳೆ-ನೊಣಗಳಿಂದ ಕೂಡಿರುವ ಈ ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣವಾಗಿರುವುದಕ್ಕೆ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಸಂತೆ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟಿನ್ ಕಾಮಗಾರಿ ಇನ್ನೇನು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಆಗಸ್ಟ್ 15ರಂದು ಉದ್ಘಾಟನೆಗೊಳ್ಳಲು ಸಿದ್ದಗೊಳ್ಳುತ್ತಿದೆ. ಆದರೆ, ಕ್ಯಾಂಟೀನ್ ಸುತ್ತ ತರಕಾರಿ ಸಂತೆ, ಮಟನ್ ಮಾರ್ಕೆಟ್, ಸಾರ್ವಜನಿಕ ಶೌಚಾಲಯಗಳಿದ್ದು ಕ್ಯಾಂಟೀನ್‌ನ ಆಸುಪಾಸಿನಲ್ಲೇ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಹೀಗಾಗಿ ನಾಗರಿಕರು ಕ್ಯಾಂಟೀನ್ ಸ್ಥಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಿಗದಿತ ಸಮಯದಲ್ಲಿ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಳಿಸುವಂತೆ ಸಿಎಂ, ಆಯುಕ್ತರು ಅದೇಶಿಸಿದ್ದರಿಂದ ತುರಾತುರಿಗೆ ಬಿದ್ದ ಸ್ಥಳೀಯ ಅಧಿಕಾರಿಗಳು ಕೊನೆಗೆ ಸಂತೆ ಮೈದಾನ ಆಯ್ಕೆ ಮಾಡಿಕೊಂಡರು. ಸಂತೆ ಮೈದಾನವಾದ್ದರಿಂದ ಹೆಚ್ಚಿನ ಜನರಿಗೆ ಉಪಯೋಗವಾಗುತ್ತದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿತ್ತು. ಆದರೆ, ಇಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ, ಅನೈರ್ಮಲ್ಯ ಅಧಿಕಾರಿಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.
ಯಾರಿಗೂ ತೊಂದರೆಯಾಗದ ಮತ್ತು ಸ್ವಚ್ಚ ಸ್ಥಳಗಳಲ್ಲಿ ಕ್ಯಾಂಟೀನ್ ನಿರ್ಮಿಸುವಂತೆ ಸರ್ಕಾರ ಸೂಚನೆ ನೀಡಿದ್ದರೂ ಅಧಿಕಾರಿಗಳು ಬೇರೆಲ್ಲ ಉತ್ತಮ ಸ್ಥಳಗಳನ್ನು ಬಿಟ್ಟು ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳಿಗೆ ಜನರ ಆರೋಗ್ಯದ ಕಾಳಜಿ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿತ್ಯವೂ ಕಸದ ರಾಶಿ; ನಾಯಿಗಳ ಕಾಟ
ಕೆ.ಆರ್.ಪುರ ಸಂತೆ ಮೈದಾನಕ್ಕೆ ನಿತ್ಯವೂ ದೂರದೂರುಗಳಿಂದ ತರಕಾರಿ, ಸೊಪ್ಪಿನ ವ್ಯಾಪಾರಿಗಳು ಬರುತ್ತಾರೆ. ಅಳಿದುಳಿದ ವಸ್ತುಗಳನ್ನು ಮೈದಾನದಲ್ಲೇ ಬಿಟ್ಟುಹೋಗುತ್ತಾರೆ. ಇದರಿಂದ ಅವುಗಳು ಕೊಳೆತು ದುರ್ವಾಸನೆ ಬೀರುತ್ತವೆ. ಈ ಪ್ರದೇಶ ಅನೈರ್ಮಲ್ಯದ ತಾಣವಾಗಿರುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಯೂ ಆಗಿದೆ. ಇನ್ನು ಮಟನ್ ಮಾರ್ಕೆಟ್ ಇರುವುದರಿಂದ ಈ ಪ್ರದೇಶದ ಬೀದಿ ನಾಯಿಗಳ ಹಾವಳಿಯೂ ಹೆಚ್ಚಿದೆ.