ದೇವರಹಿಪ್ಪರಗಿ: ಸಮೀಪದ ಮಾರ್ಕಬ್ಬಿನಹಳ್ಳಿ ಸರ್ಕಾರಿ ಪ್ರೌಡಶಾಲೆಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಕ್ಷಣ ದುರಸ್ತಿಗೊಳಿಸಬೇಕೆಂದು ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗ್ರಾಮದಿಂದ ಸರ್ಕಾರಿ ಪ್ರೌಢಶಾಲೆಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸ್ವಲ್ಪ ಮಳೆ ಬಂದರೂ ಸಾಕು ಎಲ್ಲೆಂದರಲ್ಲಿ ನೀರು ನಿಂತು ಸಂಚರಿಸಲು ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು ದಿನನಿತ್ಯ ಶಾಲೆಗೆ ಹೋಗಬೇಕೆಂದರೆ ಹರಸಾಹಸ ಮಾಡಬೇಕಾಗುತ್ತದೆ. ಅದರಲ್ಲಿ ಮಳೆಯಾದರೆ ಪಾದರಕ್ಷೆ ಕೈಯಲ್ಲಿಯೇ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ.
ಮಳೆಗಾಲದಲ್ಲಿ ರಸ್ತೆ ಮೇಲೆ ತೆರಳಲು ಒಂದಿಷ್ಟು ಸ್ಥಳಾವಕಾಶವಿರುವುದಿಲ್ಲ. ರಸ್ತೆ ಮೇಲೆ ಎಲ್ಲೆಂದರಲ್ಲಿ ನೀರು ನಿಂತಿದ್ದು, ಕೆಸರು ಗದ್ದೆಯಂತಾಗಿರುತ್ತದೆ. ಹಲವು ವರ್ಷಗಳಿಂದ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲೇ ಹಾದು ಹೋಗುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿನಿಯರಂತೂ ಹಿಡಿಶಾಪ ಹಾಕುತ್ತಲೇ ತೆರಳುವಂತಾಗಿದೆ.
ತಕ್ಷಣ ಗ್ರಾಮದಿಂದ ಸರ್ಕಾರಿ ಪ್ರೌಢಶಾಲೆವರೆಗೆ ರಸ್ತೆ ದುರಸ್ತಿ ಮಾಡಬೇಕು. ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕವಾಗಿಯಾದರೂ ದುರಸ್ತಿಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ವಿಜಯ ಯಂಭತ್ನಾಳ, ಮಲಕಪ್ಪ ಮಾವಿನಗಿಡದ, ಯಶವಂತ ಕಾಮಟಗಿ, ಶರಣಗೌಡ ಪಾಟೀಲ, ಸೋಮಪ್ಪ ಮಾವಿನಗಿಡದ, ಅರ್ಜುನ ಧರಿ, ರಮೇಶ ಛಾವಾನವರ, ಈರಣ್ಣಗೌಡ ಬಿರಾದಾರ, ಕಾಶೀನಾಥ ಬಿರಾದಾರ, ಮಲ್ಲಿಕಾರ್ಜುನ ಅವಟಿ, ಬಾಳಾಸಾಹೇಬ ಬಿರಾದಾರ, ಲಕ್ಷ್ಮಣ ಕೌಲಗಿ, ಆದಿತ್ಯಾ ಧರಿ, ಮಲ್ಲಿಕಾರ್ಜುನ ಅಗಸರ, ಪ್ರಜ್ವಲ್ ಬಾಗೇವಾಡಿ, ಸಿದ್ದು ತಡಕಲ್, ಬಸವರಾಜ ಮುತ್ತಗಿ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ.