ಹೊಸದಿಲ್ಲಿ: ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆ ವೇಳೆ ರಾಜಕೀಯ ಪ್ರಭಾವ ಬಳಕೆ ಮಾಡಲಾಗುತ್ತದೆ ಎನ್ನುವ ಆರೋಪ ಸಾಮಾನ್ಯ. ಇಂಥ “ಶಿಫಾರಸು ಸಂಸ್ಕೃತಿ’ಗೆ ತೆರೆ ಎಳೆಯಲು ಕೇಂದ್ರ ಸರಕಾರ ಮುಂದಾಗಿದೆ.
ಕೇಂದ್ರ ಸರಕಾರದ ಸಿಬಂದಿ ಮತ್ತು ತರಬೇತಿ ಸಚಿವಾಲಯವು ಡಿ. 3ರಂದು ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ಕೇಂದ್ರ ಸರಕಾರದ ಉದ್ಯೋಗಿಗಳು ವರ್ಗಾವಣೆ ವಿಚಾರದಲ್ಲಿ “ರಾಜಕೀಯ ನೆರವು’ ಪಡೆದಿರುವುದು ಕಂಡುಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಂಥವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ವಿವಿಧ ಕೇಡರ್‌ಗಳ ನಡುವೆ ವರ್ಗಾವಣೆ ಬಯಸುವ ಅಧಿಕಾರಿಗಳು “ಬೇಕಾದ ಕೇಡರ್‌ಗೆ ವರ್ಗಾವಣೆ’ ಯಾಗಲು ರಾಜಕೀಯ ಪ್ರಭಾವ ಹೇರುತ್ತಿದ್ದಾರೆ. ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳಲ್ಲಿ ಇಂಥ ಬೆಳವಣಿಗೆ ಕಂಡುಬಂದಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವಾಲಯ ಈ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ:ರಾಮನಾಥಪುರಂನಿಂದ ಧನುಷ್ಕೋಡಿಗೆ ಹೊಸ ಪಂಬನ್ ಬ್ರಿಡ್ಜ್?
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ದರ್ಜೆಯ ಅಧಿಕಾರಿಗಳು ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರ ಮೂಲಕ, ಕೇಂದ್ರ ಸಚಿವರ ಮೂಲಕ ಬೇಕಾದಲ್ಲಿಗೆ ವರ್ಗ ಬಯಸಿ ಕೋರಿಕೆ ಸಲ್ಲಿಸುತ್ತಿದ್ದಾರೆ. ಇಂಥ ಕ್ರಮ 1964ರ ಸೇವಾ ನಿಯಮಗಳ ಕಾಯ್ದೆಯ ನಿಯಮ 20ರ ಉಲ್ಲಂಘನೆ ಎಂದು ಸರಕಾರ ಎಚ್ಚರಿಸಿದೆ.