Advertisement

ಸರ್ಕಲ್‌ ಪ್ರಸ್ತಾವ : ಅನುಮತಿ ಬಾಕಿ, ಬಸ್‌ಗಳಿಗೆ ಹೆದ್ದಾರಿ ಕ್ರಾಸಿಂಗ್‌ ಸಮಸ್ಯೆ

03:42 PM Feb 15, 2022 | Team Udayavani |

ಬಂಟ್ವಾಳ : ಬಿ.ಸಿ.ರೋಡ್‌ನ‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗದ ಹೆದ್ದಾರಿ ಪ್ರದೇಶವು ತೀರಾ ಅಪಾಯಕಾರಿಯಾಗಿ ಪರಿಣಮಿಸಿದ್ದು, ಇಲ್ಲಿನ ಅಜ್ಜಿಬೆಟ್ಟು ಕ್ರಾಸ್‌ ಬಳಿಯ ಕ್ರಾಸಿಂಗ್‌ ಕೂಡ ಅಪಘಾತವನ್ನು ಅಹ್ವಾನಿ ಸುವಂತಿದೆ. ಈ ನಿಟ್ಟಿನಲ್ಲಿ ಬಸ್‌ ನಿಲ್ದಾಣದ ಮುಂಭಾಗದಲ್ಲೇ ವ್ಯವಸ್ಥಿತ ಸರ್ಕಲ್‌ ನಿರ್ಮಾಣದ ಪ್ರಸ್ತಾವವಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ದ ಅನುಮತಿ ಸಿಗುವುದಕ್ಕೆ ಬಾಕಿ ಇದೆ.

Advertisement

ಪ್ರಸ್ತುತ ಅಜ್ಜಿಬೆಟ್ಟು ಕ್ರಾಸ್‌ ಬಳಿಯ ಹೆದ್ದಾರಿ ಕ್ರಾಸಿಂಗ್‌ನಿಂದ ಸಣ್ಣ ವಾಹನಕ್ಕೆ ತೊಂದರೆಯಾಗದೇ ಇದ್ದರೂ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಹೊರಡುವ ಬಸ್‌ಗಳಿಗೆ ಹೆದ್ದಾರಿ ಕ್ರಾಸ್‌ ಮಾಡುವುದು ಬಹಳ ತ್ರಾಸದಾಯಕವಾಗುತ್ತಿದೆ. ಬಸ್‌ಗಳು ಹೆಚ್ಚು ಉದ್ದವಿದ್ದು, ಆ ಭಾಗದಿಂದ ಸೂಕ್ತ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಅವರು ಸಾಕಷ್ಟು ಹೊತ್ತು ಕಾದು ಬಸ್‌ ತಿರುಗಿಸಬೇಕಿದ್ದು, ಬಸ್‌ ಪೂರ್ತಿ ತಿರುಗಿ ಹೋಗುವವರೆಗೆ ಇತರ ವಾಹನಗಳು ನಿಲ್ಲಬೇಕಾದ ಸ್ಥಿತಿ ಇದೆ.

ಬಿ.ಸಿ.ರೋಡ್‌ನ‌ ನಿಲ್ದಾಣದಿಂದ ಗ್ರಾಮೀಣ ಭಾಗಗಳಿಗೆ ತೆರಳುವ ಬಸ್‌ಗಳು ಅಜ್ಜಿಬೆಟ್ಟು ಕ್ರಾಸ್‌ ಬಳಿಯೇ ಹೆದ್ದಾರಿ ಕ್ರಾಸ್‌ ಮಾಡಬೇಕಿದ್ದು, ಇದು ಬಹಳ ತೊಂದರಯಾಗುತ್ತಿದೆ. ಮಂಗಳೂರು ಭಾಗದಿಂದ ಆಗಮಿಸುವ ವಾಹನಗಳು ವೇಗವಾಗಿ ಬರುವುದರಿಂದ ಅಪಘಾತದ ಸಾಧ್ಯತೆಯೂ ಹೆಚ್ಚಿರುತ್ತದೆ.

ಮಂಗಳೂರಿಂದ ಬಿ.ಸಿ.ರೋಡ್‌ ಮೂಲಕ ದೂರದೂರಿಗೆ ತೆರಳುವ ಬಸ್‌ಗಳು ನಿಲ್ದಾಣಕ್ಕೆ ಹೋಗಬೇಕು ಎಂಬ ಒತ್ತಾಯವಿದ್ದರೂ, ಕ್ರಾಸಿಂಗ್‌ ಕಾರಣ ಕ್ಕಾಗಿಯೇ ಅವುಗಳು ಸದ್ಯಕ್ಕೆ ನಿಲ್ದಾಣಕ್ಕೆ ತೆರಳುತ್ತಿಲ್ಲ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಿ.ಸಿ.ರೋಡ್‌ ಡಿಪೋದ ಬಸ್‌ಗಳು ನಿಲ್ದಾಣಕ್ಕೆ ಹೋಗಲೇ ಬೇಕಿದೆ. ಮಂಗಳೂರಿನಿಂದ ಬಿ.ಸಿ.ರೋಡ್‌
ಜಂಕ್ಷನ್‌ಗೆ ಆಗಮಿಸಿ ಅಲ್ಲಿ ಬಸ್‌ ಅನ್ನು ಕ್ರಾಸ್‌ ಮಾಡಿ ಮತ್ತೆ ನಿಲ್ದಾಣಕ್ಕೆ ಬಂದು ಅಲ್ಲಿಂದ ಅಜ್ಜಿಬೆಟ್ಟು ಕ್ರಾಸ್‌ ಬಳಿ ಡಿವೈಡರ್‌ ಕ್ರಾಸ್‌ ಮಾಡಿ ಹೋಗಬೇಕಿದೆ. ಇದು ಬಸ್ಸಿನ ಚಾಲಕರಿಗೂ ತ್ರಾಸದಾಯಕ ಕೆಲಸವಾಗಿದೆ. ಹೀಗಾಗಿ ನಿಲ್ದಾಣದ ಮುಂಭಾಗದಲ್ಲೇ ಡಿವೈಡರ್‌ ತೆರವುಗೊಂಡರೆ ಎಲ್ಲ ಬಸ್‌ಗಳು ನಿಲ್ದಾಣಕ್ಕೆ ಹೋಗುವ ಬೇಡಿಕೆಯೂ ಈಡೇರಿದಂತಾಗುತ್ತದೆ.

ಇದನ್ನೂ ಓದಿ : 75 ಸ್ವಾತಂತ್ರ್ಯಗಳು ಕಳೆದರು ಸಿಗದ ಅನುದಾನ, ಬೊಮ್ಮಾಯಿ ಬಜೆಟ್ ನಲ್ಲಿ ಸಿಗುವುದೇ

Advertisement

25 ಲಕ್ಷ ರೂ. ಅನುದಾನ
ಬುಡಾದ ಸಭೆಯಲ್ಲಿ ನಿರ್ಣಯಿಸಿ ಸರ್ಕಲ್‌ ನಿರ್ಮಾಣ ಮಾಡುವುದಕ್ಕೆ 25 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಲಭಿಸಿದ ಬಳಿಕ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು. ದ.ಕ.ಸಂಸದರು ಕೂಡ ಈ ನಿಟ್ಟಿನಲ್ಲಿ ಪ್ರಯ ತ್ನದಲ್ಲಿದ್ದು, ಅನುಮತಿಗಾಗಿ ಪ್ರಾಧಿ ಕಾರದ ಯೋಜನ ನಿರ್ದೇಶಕರ ಜತೆ ಚರ್ಚಿಸಲಿದ್ದಾರೆ.
-ಬಿ.ದೇವದಾಸ್‌ ಶೆಟ್ಟಿ, ಅಧ್ಯಕ್ಷರು, ಬಂಟ್ವಾಳ ನಗರ ಯೋಜನ ಪ್ರಾಧಿಕಾರ.

ಮನವಿ ಸಲ್ಲಿಕೆ
ಹಾಲಿ ಅಜ್ಜಿಬೆಟ್ಟು ಕ್ರಾಸ್‌ ಬಳಿ ಬಸ್‌ಗಳಿಗೆ ಹೆದ್ದಾರಿ ಕ್ರಾಸ್‌ ಮಾಡುವುದಕ್ಕೆ ಸಾಕಷ್ಟು ತೊಂದರೆಗಳಿವೆ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಮುಂಭಾಗದಲ್ಲೇ ಡಿವೈಡರ್‌ ತೆರೆದು ಬಸ್‌ಗಳು ತಿರುಗುವುದಕ್ಕೆ ಅವಕಾಶ ನೀಡುವಂತೆ ಶಾಸಕರ ನಿರ್ದೇಶನದ ಮೇರೆಗೆ ತಹಶೀಲ್ದಾರ್‌ ಮೂಲಕ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದೇವೆ.

– ಶ್ರೀಶ ಭಟ್‌, ಘಟಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ, ಬಿ.ಸಿ.ರೋಡ್‌.

Advertisement

Udayavani is now on Telegram. Click here to join our channel and stay updated with the latest news.

Next