ಕೊಚ್ಚಿ : ದಿಲೀಪ್ ಬಂಧನ ವಾದ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಆತಂಕದ ವಾತಾವರಣ ನೆಲೆಸಿದೆ. ಹಲವು ಚಿತ್ರಗಳಲ್ಲಿ ದಿಲೀಪ್ ನಟಿಸುತ್ತಿದ್ದಾರೆ. ಈ ಚಿತ್ರಗಳ ಗತಿ ಏನು ಎಂಬ ಪ್ರಶ್ನೆ ಎದುರಾಗಿದೆ. ಕನಿಷ್ಠ 50 ಕೋ. ರೂ. ದಿಲೀಪ್ ಮೇಲೆ ಹೂಡಿಕೆಯಾಗಿದೆ. ಇದರ ಜತೆಗೆ ಸೆಟಲೈಟ್ ಹಕ್ಕುಗಳನ್ನೂ ಸೇರಿಸಿದರೆ ಕಡಿಮೆ ಎಂದರೂ 75 ಕೋಟಿ ರೂ.ನಷ್ಟು ಹಣವನ್ನು ನಿರ್ಮಾಪಕರು ಪಣಕ್ಕೊಡ್ಡಿದಂತಾಗುತ್ತದೆ.
ಒಂದು ವೇಳೆ ನ್ಯಾಯಾಲಯ ಒಪ್ಪಿಕೊಂಡ ಚಿತ್ರಗಳನ್ನು ಮುಗಿಸಲು ಅನುಮತಿ ಕೊಟ್ಟರೂ ಸಿನೆಮಾ ಮಂದಿರ ಗಳಲ್ಲಿ ಓಡೀತೇ ಎಂಬ ಆತಂಕವೂ ಇದೆ. ಏಕೆಂದರೆ ದಿಲೀಪ್ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಇದೆ. ನಿಜ ಜೀವನದಲ್ಲಿ ವಿಲನ್ ಆದವನ ಸಿನೆಮಾವನ್ನು ಯಾರು ನೋಡುತ್ತಾರೆ ಎಂಬ ಚಿಂತೆ ನಿರ್ಮಾ ಪಕರನ್ನು ಕಾಡುತ್ತಿದೆ. ಸಿನೆಮಾ ಉದ್ಯಮ ಸಂಘಟನೆಗಳೆಲ್ಲ ಅವರಿಗೆ ಗೇಟ್‌ಪಾಸ್ ಕೊಟ್ಟಾಗಿದೆ.
ದಿಲೀಪ್ ನಟಿಸಿದ ರಾಮ್‌ಲೀಲಾ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು ಜು. 21ಕ್ಕೆ ಚಿತ್ರ ಬಿಡುಗಡೆಯಾಗುವು ದೆಂದು ಘೋಷಿಸಲಾಗಿತ್ತು. ಆದರೆ ಈ ಪರಿಸ್ಥಿತಿಯಲ್ಲಿ ರಾಮ್‌ಲೀಲಾ ಬಿಡುಗಡೆಗೊಳಿಸಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಇದು 14 ಕೋ. ರೂ. ಬಜೆಟ್‌ನ ಚಿತ್ರ.
ಇದಲ್ಲದೆ “ಕುಮಾರಸಂಭವಂ’ ಎಂಬ ಇನ್ನೊಂದು ಚಿತ್ರದ ಶೂಟಿಂಗ್ ಅರ್ಧದಲ್ಲಿದೆ. ಇದು ಕೂಡ ಸುಮಾರು 15 ಕೋ. ರೂ. ಬಜೆಟ್ ಚಿತ್ರ. ಎರಡೂ ಕೂಡ ನಿರ್ದೇಶಕರ ಚೊಚ್ಚಲ ಚಿತ್ರಗಳು. ದಿಲೀಪ್ ದಾಂಪತ್ಯ ಬದುಕಿನ ಜತೆಗೆ ಈಗ ಅವರ ಸಿನೆಮಾ ಬದುಕು ಕೂಡ ಅತಂತ್ರಗೊಂಡಂತಾಗಿದೆ.
ಬಡ ನಿರ್ಮಾಪಕರ ಮೋಹನ್‌ಲಾಲ್ ಎಂದೇ ಅರಿಯಲ್ಪಡುತ್ತಿದ್ದ ದಿಲೀಪ್ ಪ್ರತಿಭೆಯಲ್ಲಿ ಯಾವ ಮೇರು ನಟರಿಗೂ ಕಡಿಮೆಯಿರಲಿಲ್ಲ. ತೀರಾ ಬಡತನದ ಹಿನ್ನೆಲೆಯಿಂದ ಬಂದ ಅವರು ಸ್ವಂತ ಪರಿಶ್ರಮದಿಂದ ಹೀರೋ ಆಗಿದ್ದರು. ನಾಯಕ ನಟನಾಗುವುದಕ್ಕಿಂತ ಮುಂಚೆ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸು ತ್ತಿದ್ದರು. ನಾಯಕನಾದ ಬಳಿಕ ಅವರದ್ದು ಅಪೂರ್ವ ಯಶೋಗಾಥೆ. ನಟಿಸಿದ ಶೇ. 90 ಚಿತ್ರಗಳು ಸೂಪರ್‌ಹಿಟ್ ಆಗಿವೆ. ನಟನೆಯಲ್ಲಿ ಮೋಹನ್‌ಲಾಲ್ ಶೈಲಿಯಿದ್ದರೂ ತನ್ನದೇ ಆದ ಅಭಿಮಾನಿ ವರ್ಗವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಸರಣಿ ಬಾಂಬ್ ಸ್ಫೋಟ ಪ್ರಕರಣ ದಲ್ಲಿ ಆರೋಪಿಯಾಗಿದ್ದ ಸಂಜಯ ದತ್ ಜತೆಗೆ ದಿಲೀಪ್ ಪ್ರಕರಣವನ್ನು ಅಭಿಮಾನಿಗಳು ಹೋಲಿಸುತ್ತಿದ್ದಾರೆ.
ದತ್ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದು ಕೊಂಡ ಬಳಿಕ ಒಪ್ಪಿಕೊಂಡ ಚಿತ್ರಗಳನ್ನೆಲ್ಲ ಮುಗಿಸಿದ್ದರು. ದಿಲೀಪ್‌ಗ್ೂ ಇದೇ ರೀತಿ ಜಾಮೀನು ಸಿಕ್ಕಿದರೆ ಚಿತ್ರಗಳನ್ನು ಮುಗಿಸಬಹುದು ಎನ್ನುತ್ತಾರೆ. ಆದರೆ ದತ್ ಪ್ರಕರಣಕ್ಕೂ ದಿಲೀಪ್ ಪ್ರಕರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಅಲ್ಲದೆ ಇದು ಜನರನ್ನು ಭಾವನಾತ್ಮಕವಾಗಿ ರೊಚ್ಚಿಗೆಬ್ಬಿಸಿರುವ ಪ್ರಕರಣ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.