Advertisement

ಸಂಗೀತ ಇಲ್ಲದ ಸಿನೆಮಾ ಊಹಿಸಲಸಾಧ್ಯ

02:35 AM Mar 02, 2021 | Team Udayavani |

ಕನ್ನಡ ಚಿತ್ರರಂಗದ ಚಲನಚಿತ್ರ ಸಾಹಿತಿ, ನಿರ್ದೇಶಕರ ಸಂಘದ ಕಾರ್ಯದರ್ಶಿಯೂ ಆಗಿರುವ ವಿ. ನಾಗೇಂದ್ರ ಪ್ರಸಾದ್‌ ಅವರು ರವಿವಾರ ಮಣಿಪಾಲದ ಉದಯವಾಣಿ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗಿನ ಮಾತುಕತೆಯಲ್ಲಿ ಉದಯವಾಣಿಯೊಂದಿಗಿನ ತಮ್ಮ ಬಾಲ್ಯವನ್ನೂ ನೆನಪಿಸಿಕೊಂಡರು. ಮಾತುಕತೆಯ ವಿವರ ಇಲ್ಲಿದೆ.

Advertisement

- ನಿರ್ದೇಶಕರ ಆಲೋಚನೆಗಳಿಗೆ ತಕ್ಕಂತೆ ಹೇಗೆ ಹಾಡುಗಳನ್ನು ಬರೆಯುತ್ತೀರಿ?
ನ‌ಮ್ಮದು ಸಂಗೀತ ಪ್ರಧಾನವಾದ ದೇಶ. ಸಂಗೀತವನ್ನು ತನ್ನ ಒಡಲಿನಲ್ಲಿ ತುಂಬಿಕೊಂಡ ದೇಶ. ಹೀಗಾಗಿ ಸಂಗೀತ ಇಲ್ಲದ ಸಿನೆಮಾ ಊಹಿಸಲೂ ಅಸಾಧ್ಯ. ಹೀಗಾಗಿ ಹಾಡಿನ ಪಾತ್ರ ಬಹಳ ಮುಖ್ಯ. ಸಿನೆಮಾಗಳು ಎಲ್ಲೋ ಒಂದು ಕಡೆ ಬೇಸರ ತರಿಸುತ್ತಿದೆ ಎಂದಾದರೆ ಒಂದು ಉತ್ತಮ ಹಾಡುಗಳು ಬಂದರೆ ಜನರು ಉಲ್ಲಸಿತರಾಗುತ್ತಾರೆ. ಅದೆಷ್ಟೋ ಮಂದಿ ಬರೀ ಸಂಗೀತ, ಹಾಡಿಗಾಗಿಯೇ ಬರುವವರಿದ್ದಾರೆ.

-  ನೀವು ಬಹುತೇಕ ನಟರ ಆರಂಭದ ಹಾಡುಗಳನ್ನು ಬರೆದಿದ್ದೀರಿ. ಅವರ ಪಾತ್ರಗಳು ಜನಪ್ರಿಯವಾಗುವುದಕ್ಕೂ, ಹಾಡಿಗೂ ಸಂಬಂಧವಿದೆಯೇ?
ಹೌದು, ನಮ್ಮ ನಾಯಕ ನಟರ ಆರಂಭದ ಹಾಡುಗಳು ಅವರ ಭವಿಷ್ಯವನ್ನು ರೂಪಿಸುತ್ತವೆ. ನಾವು ಆ ವ್ಯಕ್ತಿಗಳನ್ನು/ನಟರನ್ನು ಇಷ್ಟ ಪಟ್ಟರೆ ಮಾತ್ರ ಅಂಥ ಹಾಡುಗಳು ಬರಲು ಸಾಧ್ಯ. ಕೆಲವೊಮ್ಮೆ ನಟರನ್ನು ವರ್ಣಿಸುವಾಗ ಬರುವ ದೊಡ್ಡ ದೊಡ್ಡ ಪದ ಪುಂಜಗಳೂ ಅಗತ್ಯ ಎನಿಸುತ್ತವೆ.

-  ನೀವು ಬರೆದ ಹಾಡುಗಳನ್ನು ಹಾಡಿರುವ ಶಂಕರ್‌ ಮಹದೇವನ್‌ ಅವರ ಬಗೆಗಿನ ಅನಿಸಿಕೆ?
ಅತ್ಯಂತ ಕಷ್ಟ ಹಾಡನ್ನು ಯಾರು ಹಾಡಬಹುದು ಎಂದು ಯೋಚಿಸುತ್ತಿರುವಾಗ ಶಂಕರ್‌ ಮಹದೇವನ್‌ ಅವರ ಹೆಸರು ಮೊದಲಿಗೆ ಬರುತ್ತದೆ. ಯಾಕೆಂದರೆ ಅವರು ಕನ್ನಡದಲ್ಲಿ ಹೈ ನೋಟ್‌ನಲ್ಲಿ ಸಂಯೋಜಿಸಿದರೆ ಅದನ್ನು ಅಚ್ಚುಕಟ್ಟಾಗಿ ಹಾಡುತ್ತಾರೆ. ಬಹುಶಃ ನಮ್ಮ ಎಸ್‌ಪಿಬಿ ಅವರನ್ನು ಬಿಟ್ಟರೆ ಅವರೇ ಎರಡನೆಯವರು. ಅದರಲ್ಲೂ ವಿಶೇಷವಾಗಿ ಪರ ಭಾಷೆಯವರಾಗಿ ಇಲ್ಲಿನ ಭಾಷೆಯನ್ನು ಅರ್ಥಮಾಡಿ ಹಾಡುವುದು ಸುಲಭವಲ್ಲ.

-  ರಿಮೇಕ್‌ ಸಿನೆಮಾಗಳಿಗೆ ಹೇಗೆ ಹಾಡುಗಳನ್ನು ಬರೆಯುತ್ತೀರಿ?
ಅಂಥ ಸಿನಿಮಾಗಳಿಗೆ ಅಲ್ಲಿನ ಹಾಡುಗಳನ್ನೇ ಭಾಷಾಂತರ ಮಾಡಬೇಕಿಲ್ಲ. ಬದಲಾಗಿ ಮೂಲ ಸಿನೆಮಾ ಹಾಡುಗಳ ಭಾವ ಮತ್ತು ಇನ್ನಿತರ ಅಂಶ ವನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಉತ್ತಮವಾಗಿ ಪ್ರಸ್ತುತ ಪಡಿಸಲು ಯೋಚಿಸಬೇಕು. “ಸುವಿÂ ಸುವಿÂ’, “ಲಾಲಿ ಲಾಲಿ’ ಹಾಡುಗಳಲ್ಲೂ ಅದೇ ಆಗಿತ್ತು. ಆ ಪದಗಳನ್ನು ಉಳಿಸಿಕೊಂಡು, ಅದಕ್ಕೆ ಪೂರಕವಾಗಿ ಇಲ್ಲಿನ ಸಂಸ್ಕೃತಿ, ವಿಷಯವನ್ನು ಸೇರಿಸಬೇಕು.

Advertisement

-  ಭಕ್ತಿಗೀತೆ, ಸಿನೆಮಾ ಹಾಡುಗಳನ್ನು ಬರೆಯುವಾಗ ಅದಕ್ಕೆ ತಕ್ಕಂತೆ ಪದಗಳನ್ನು ಹೇಗೆ ಬಳಸುತ್ತೀರಿ?
ನಾವು ಹೆಚ್ಚು ಓದುವುದು, ತಿಳಿದುಕೊಳ್ಳುವುದರಿಂದ ಇದು ಸಾಧ್ಯ. ಆ ಅನುಭವ ನಮ್ಮಿಂದ ಬರೆಸುತ್ತದೆ. ಕಡಲು ಎಂದಾಗ ನಾನು ಭೇಟಿ ಕೊಟ್ಟ ಸಮುದ್ರ ಕಿನಾರೆಗಳು ನೆನಪಾಗುತ್ತವೆ. ಅದು ಸಹಜವಾಗಿ ನಾನು ಇಲ್ಲಿ ಕಳೆದ ಸಂದರ್ಭ ಮತ್ತು ಆ ಹೊತ್ತಿನ ಅನುಭವವನ್ನು ನೆನಪಿಗೆ ತರುತ್ತವೆ. ಆಕಸ್ಮಾತ್‌ ಕಡಲಿಗೆ ಭೇಟಿ ಕೊಡದಿದ್ದ ಸಂದರ್ಭದಲ್ಲೂ ಎಲ್ಲೋ ಓದಿದ ನೆನಪು ನಮಗೆ ಸಹಾಯ ಮಾಡುತ್ತದೆ. ಅಕ್ಷರ ರೂಪಕ್ಕೆ ಇಳಿಯುವುದು ಅದೇ. ಕೆಲವೊಮ್ಮೆ ಯಾವುದೋ ಸಂದರ್ಭದಲ್ಲಿ ಸಾಲುಗಳು ಹೊಳೆ ಯುತ್ತವೆ, ಬರೆದಿಡುವೆ. ಸಹಜವಾಗಿ ಮೂಡಿ ಬಂದ ಸಾಲುಗಳ ಹಾಡುಗಳು ಜನರಿಗೆ ಹೆಚ್ಚು ಇಷ್ಟವಾ ಗುತ್ತವೆ. ಸರಳವಾಗಿರಬೇಕಷ್ಟೆ. ನಾವೇ ಸಮಯ ತೆಗೆದುಕೊಂಡು ಬರೆದ ಹಾಡುಗಳು ಜನರಿಗೂ ಇಷ್ಟವಾಗಲು ಸಮಯ ತೆಗೆದುಕೊಳ್ಳಬಹುದು.

-  ನಿಮ್ಮ 2 ದಶಕಗಳ ಪಯಣದ ಅನುಭವದಲ್ಲಿ ಹೇಳಿ. ಹಾಡುಗಳು ಜನಪ್ರಿಯವಾದರೆ ಅಥವಾ ಸೋತರೆ ಹೇಗೆ ಸ್ವೀಕರಿಸುತ್ತೀರಿ?
ಹಾಡುಗಳನ್ನು ಬರೆಯುವಾಗ ಶೇ. 100 ರಷ್ಟು ಜನಪ್ರಿಯವಾಗುತ್ತದೆ ಎಂಬ ಖಚಿತ ಭಾವದಿಂದ ಬರೆಯುತ್ತೇನೆ. ಆಗ ನಾನು ಎಣಿಸಿಕೊಂಡಂತಾದರೆ ಖುಷಿಯಾಗುತ್ತದೆ. ಒಂದುವೇಳೆ ಆಗದಿದ್ದರೆ, ಬೇಸರ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ನಾನು ಈಗಾಗಲೇ ಆ ಹಂತವನ್ನು ದಾಟಿದ್ದೇನೆ. ಪ್ರಯತ್ನ ಮಾತ್ರ ನಮ್ಮದು, ಫ‌ಲಿತಾಂಶ ಅನಂತರದ್ದು.

ಉದಯವಾಣಿಗಾಗಿ ಕಾಯುತ್ತಿದ್ದ ದಿನಗಳವು
ಆರಂಭದಲ್ಲಿ ಬರೆಯುತ್ತಿದ್ದ ಸಂದರ್ಭದಲ್ಲಿ ನಮ್ಮ ಲೇಖನ, ಕವನ ಉದಯವಾಣಿಯಲ್ಲಿ ಪ್ರಕಟವಾದರೆ ಅದು ತಮಗೆ ಅಧಿಕೃತವಾಗಿ ಸರ್ಟಿಫಿಕೇಟ್‌ ಸಿಕ್ಕಂತೆ. ಅದಕ್ಕಾಗಿಯೇ ನಾವು ಉದಯವಾಣಿಯಲ್ಲಿ ಲೇಖನ, ಕವನ ಪ್ರಕಟವಾಗಲಿ ಎಂದು ಕಾಯುತ್ತಿದ್ದೆವು…

Advertisement

Udayavani is now on Telegram. Click here to join our channel and stay updated with the latest news.

Next