Advertisement

ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರ ಮಿತಿ: ಏ. 7ರಿಂದ ಅನ್ವಯ

10:27 PM Apr 03, 2021 | Team Udayavani |

ಬೆಂಗಳೂರು: ರಾಜ್ಯದ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರ ಮಿತಿ ಹೇರಿಕೆಗೆ ಚಿತ್ರರಂಗದಿಂದ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಮಾರ್ಗಸೂಚಿಯನ್ನು ಸ್ವಲ್ಪ ಸಡಿಲಿಸಿದ್ದು, ಏ. 6ರವರೆಗೆ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಶೇ. 50ರಷ್ಟು ಪ್ರೇಕ್ಷಕರ ಮಿತಿಯು ಏ. 7ರಿಂದ ಅನ್ವಯವಾಗಲಿದೆ.

Advertisement

ಕೋವಿಡ್‌ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರ ಮಿತಿ ಸೇರಿದಂತೆ ಮಾರ್ಗಸೂಚಿಯನ್ನು ಏ. 20ರವರೆಗೆ ಅನ್ವಯವಾಗುವಂತೆ ಶುಕ್ರವಾರದಿಂದಲೇ ಜಾರಿಗೊಳಿಸಿತ್ತು. ಆದೇಶ ಹೊರಬಿದ್ದ ಕೆಲ ಹೊತ್ತಿನಲ್ಲೇ ನಟ ಪುನೀತ್‌ ರಾಜ್‌ಕುಮಾರ್‌ ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರಹಾಕುವ ಜತೆಗೆ ಶೇ. 100ರಷ್ಟು ಪ್ರೇಕ್ಷಕರ ವೀಕ್ಷಣೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಇದಕ್ಕೆ ದನಿಗೂಡಿಸಿ ಹಲವು ನಟ- ನಟಿಯರು, ಚಿತ್ರರಂಗದ ಪ್ರಮುಖರು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದ್ದರು. ಶನಿವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಇತರರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ನಟ ಪುನೀತ್‌ ಕುಮಾರ್‌ ಅವರು ಸಂಜೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪ್ರೇಕ್ಷಕರ ಮಿತಿ ನಿರ್ಬಂಧ ಸಡಿಲಿಸುವಂತೆ ವಿನಂತಿಸಿದ್ದರು. ಮಾರ್ಗಸೂಚಿ ಹೊರಬಿದ್ದಾಗಿನಿಂದ ನಿರಂತರವಾಗಿ ಚಿತ್ರರಂಗದ ಗಣ್ಯರು, ಪ್ರಮುಖರ ವಿರೋಧ, ಒತ್ತಡ, ಮನವಿಗೆ ಕೊನೆಗೂ ಮಣಿದ ಸರ್ಕಾರ ಮಾರ್ಗಸೂಚಿಯನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿದೆ.

ಇದನ್ನೂ ಓದಿ :ಶಿರ್ವ :ಬಟ್ಟೆ ಖರೀದಿಗೆಂದು ತಾಯಿಜೊತೆ ಬಂದು ನಾಪತ್ತೆಯಾಗಿದ್ದ ಮಗು ಶವವಾಗಿ ಬಾವಿಯಲ್ಲಿ ಪತ್ತೆ

ಮುಖ್ಯ ಕಾರ್ಯದರ್ಶಿ ಆದೇಶ
ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರ ಮಿತಿ ನಿರ್ಬಂಧ ಮಾರ್ಗಸೂಚಿಯನ್ನು ಏ. 7ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಈಗಾಗಲೇ ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಿದ್ದು, ದಿಢೀರ್‌ ನಿರ್ಬಂಧದಿಂದ ತೊಂದರೆಯಾಗಲಿದೆ ಎಂಬುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ಏ. 2ರಿಂದ ಅನ್ವಯವಾಗಿದ್ದ ಶೇ. 50ರಷ್ಟು ಪ್ರೇಕ್ಷಕರ ಮಿತಿಯನ್ನು ಏ.7ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಶನಿವಾರ ಆದೇಶ ಹೊರಡಿಸಿದ್ದಾರೆ. ಹಾಗಾಗಿ ಏ.6ರವರೆಗೆ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶವಿರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next