ಕೆಲವೊಮ್ಮೆ ಹೊಸಬರ ಚಿತ್ರಗಳು ಆರಂಭದಲ್ಲಿ ಸದ್ದು ಮಾಡುವುದೇ ಇಲ್ಲ. ಸರಾಗವಾಗಿ ಸಾಗದೆ, ಅಲ್ಲಲ್ಲಿ “ಜರ್ಕ್’ ಹೊಡೆಯುತ್ತಲೇ ಇರುತ್ತವೆ. ದಿನ ಕಳೆದಂತೆ ಹೊಸಬರ ಚಿತ್ರಗಳಲ್ಲಿರುವ ಸಂದೇಶ ಮೆಲ್ಲನೆ ಸುದ್ದಿಯಾಗುತ್ತಿದ್ದಂತೆಯೇ, ಅಂತಹ ಚಿತ್ರಗಳು ಕ್ರಮೇಣ ಪ್ರೇಕ್ಷಕರ ಗಮನ ಸೆಳೆಯಲು ಯತ್ನಿಸುತ್ತವೆ. ಆ ಸಾಲಿಗೆ ಹೊಸಬರ “ಜರ್ಕ್’ ಕೂಡ ಸೇರಿದ್ದು, ತಕ್ಕಮಟ್ಟಿಗೆ ನೋಡುಗರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಇದೇ ಮೊದಲ ಸಲ ನಿರ್ದೇಶನ ಮಾಡಿರುವ ಮಹಾಂತೇಶ್ ಮದಕರಿ ಅವರಿಗೆ ಈಗ ತಮ್ಮ ಚೊಚ್ಚಲ ಪ್ರಯತ್ನ ಸಂತಸ ತಂದಿದೆ. “ಜರ್ಕ್’ ಈಗ 24 ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಮೂರನೇ ವಾರಕ್ಕೆ ಕಾಲಿಟ್ಟಿದೆ. ಸಹಜವಾಗಿಯೇ ಚಿತ್ರತಂಡದ ಮೊಗದಲ್ಲಿ ಖುಷಿ ಇದೆ. ಎಲ್ಲರ ಬದುಕಲ್ಲೂ ವಿಶ್ವಾಸ, ನಂಬಿಕೆ, ಅಡೆತಡೆ ಇದ್ದೇ ಇರುತ್ತದೆ. ಆದರೆ, ಅದು ನಂಬಿಕೆ ದ್ರೋಹವಾದಾಗ, ಆಗುವ ನೋವು ಅನುಭವಿಸಿದವರಿಗಷ್ಟೇ ಗೊತ್ತು.
ಅಂಥದ್ದೊಂದು ವಿಷಯ ಇಟ್ಟುಕೊಂಡು ಮಾಡಿರುವ “ಜರ್ಕ್’ ಈಗ ಮೆಲ್ಲನೆ ಜನರನ್ನು ಸೆಳೆಯುತ್ತಿದೆ. ಚಿತ್ರ ವೀಕ್ಷಿಸಿರುವ ಜನರಿಗೆ ಚಿತ್ರದ ಕ್ಲೈಮ್ಯಾಕ್ಸ್ ಭಾಗ ಇಷ್ಟವಾಗಿದೆ. ಇನ್ನು, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದಾಗಿ, ಚಿತ್ರಮಂದಿರಗಳಲ್ಲಿ ಗಳಿಕೆ ಕಡಿಮೆಯಾಗಿದೆ. ಆದರೂ, ಆ ಭಾಗದಲ್ಲಿ ಜನರು ಚಿತ್ರಕ್ಕೆ ಬೆಂಬಲ ನೀಡಿದ್ದಾರೆ ಎಂಬುದು ಚಿತ್ರತಂಡದ ಹೇಳಿಕೆ. ಬೀದರ್ ಮೂಲದ ಕೃಷ್ಣರಾಜ್ ಚಿತ್ರದ ನಾಯಕರಾಗಿ ಕಾಣಿಸಿಕೊಂಡರೆ, ಅವರಿಗೆ ನಿತ್ಯಾರಾಜ್ ನಾಯಕಿಯಾಗಿದ್ದಾರೆ.
ಇವರಿಬ್ಬರಿಗೂ ಇದು ಮೊದಲ ಚಿತ್ರ. ಸಚಿನ್ ಸಿದ್ದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಆಶಾಭಂಡಾರಿ ಹಾಗು ಗಡ್ಡಪ್ಪ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಚಿತ್ರದಲ್ಲಿ ಪವನ್‌ಕುಮಾರ್, ನೆ.ಲ. ನರೇಂದ್ರಬಾಬು, “ಕುರಿ’ರಂಗ ನಟಿಸಿದ್ದಾರೆ. ನೆಲೆ ಮನೆ ರಾಘವೇಂದ್ರ ಮತ್ತು ಪಾಲ್ಸ್ ನಾಗ ಗೀತೆ ರಚಿಸಿದ್ದಾರೆ. ಎಡ್ವರ್ಡ್‌ಶಾ ಸಂಗೀತ ನೀಡಿದ್ದಾರೆ. ಬೀದರ್‌ನ ರವಿ.ಕೆ.ವಾಡೆದ್ ಮತ್ತು ಬಳ್ಳಾರಿಯ ನಾಗರತ್ನ ಕಂಪಾಲಿ ಚಿತ್ರ ನಿರ್ಮಿಸಿದ್ದು, “ಜರ್ಕ್’ ಅವರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.