Advertisement

ಸಿನೆಮಾ ಶೂಟಿಂಗ್‌ ಅನುಮತಿ ಇನ್ನು ಸುಲಭ!

07:55 AM Feb 07, 2019 | Team Udayavani |

ಕರಾವಳಿಯಲ್ಲಿ ಸಾಕಷ್ಟು ಪ್ರಮಾಣದ ತುಳು ಚಿತ್ರಗಳು ಬರುತ್ತಿರುವ ಜತೆಯಲ್ಲಿ ಇಲ್ಲಿನ ಪ್ರವಾಸಿ ತಾಣಗಳು ದೇಶದ ಮೂಲೆ ಮೂಲೆಯಲ್ಲಿರುವವರಿಗೆ ಇಷ್ಟವಾಗಿ ಕಡಿಮೆ ಬಜೆಟ್‌ನಲ್ಲಿ ಚಿತ್ರೀಕರಣ ಮಾಡುವ ಯೋಜನೆಯಲ್ಲಿ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿಗೆ ಬಂದಾಗ ಪ್ರವಾಸಿ ತಾಣಗಳಿಗೆ ನೀಡಬೇಕಾದ ದುಬಾರಿ ಹಣದ ವಿವರ ಕೇಳಿದಾಗಲೇ ಚಿತ್ರತಂಡಕ್ಕೆ ಶಾಕ್‌..!

Advertisement

ಯಾಕೆಂದರೆ ಸುಲ್ತಾನ್‌ಬತ್ತೇರಿ ಸೇರಿದಂತೆ ಇಲ್ಲಿನ ಒಂದೊಂದು ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ನಡೆಸಬೇಕಾದರೆ ಸಂಬಂಧಪಟ್ಟ ಇಲಾಖೆಗಳಿಗೆ ಅನುಮತಿಗಾಗಿ ದುಬಾರಿ ಹಣ ನೀಡಬೇಕಾಗಿದೆ. ಜತೆಗೆ ಹಣಕೊಟ್ಟರೂ ಅನುಮತಿಗಾಗಿ ದಿನಗಟ್ಟಲೇ ಕಾಯಬೇಕಾಗಿದೆ..!

ಇಂತಹ ಸಮಸ್ಯೆಗಳಿಂದ ನಲುಗುತ್ತಿದ್ದ ತುಳು ಸಿನೆಮಾ ಲೋಕಕ್ಕೆ ಇದೀಗ ಕೇಂದ್ರ ಸರಕಾರದ ಬಜೆಟ್ ಹೊಸ ಆಶಾಭಾವನೆ ಮೂಡಿಸಿದೆ. ಸಿನೆಮಾ ಶೂಟಿಂಗ್‌ ಮಾಡಲು ಒಂದೇ ಅನುಮತಿ ನೀಡುವ ಏಕಗವಾಕ್ಷಿ ನಿಯಮ ಜಾರಿಗೆ ತರಲು ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ. ಹೊರದೇಶದವರು ಭಾರತಕ್ಕೆ ಬಂದು ಶೂಟಿಂಗ್‌ ಮಾಡುವು ದಾದರೆ ಸದ್ಯ ಈ ನಿಯಮ ಜಾರಿಯಲ್ಲಿದೆ. ಇದನ್ನು ಭಾರತದೊಳಗೆ ಶೂಟಿಂಗ್‌ ಮಾಡುವವರಿಗೆ ಅನ್ವಯ ಮಾಡುವುದು ಕೇಂದ್ರ ಬಜೆಟ್‌ನ ಆಸಕ್ತಿ.

ಅಂದಹಾಗೆ, ಸದ್ಯ ಕರ್ನಾಟಕದಲ್ಲಿ ವಾರ್ತಾ ಇಲಾಖೆಯ ಮೂಲಕ ಏಕ ಅನುಮತಿ ನೀಡಲಾಗುತ್ತಿದೆ. ಅಂದರೆ ಒಂದು ಸಿನೆಮಾ ಶೂಟಿಂಗ್‌ ಮಾಡಬೇಕಾದರೆ ವಾರ್ತಾ ಇಲಾಖೆಯಲ್ಲಿ ನಿಗದಿತ ಹಣವನ್ನು ಪಾವತಿಸಿ, ಅನುಮತಿ ಪಡೆಯಬೇಕಾಗುತ್ತದೆ. ಆ ಬಳಿಕ ಶೂಟಿಂಗ್‌ ಮಾಡಬಹುದು. ಬೆಂಗಳೂರಿನಲ್ಲಿ ಇದರ ಕೇಂದ್ರ ಕಚೇರಿಯಿದೆ. ಅನುಮತಿ ಪಡೆದ ಬಳಿಕ ಶೂಟಿಂಗ್‌ ಮಾಡಬಹುದು. ಆದರೆ, ತುಳು ಸಿನೆಮಾದವರು ಹೀಗೆ ಅನುಮತಿ ಪಡೆದ ಬಳಿಕ ಮಂಗಳೂರಿನ ರಸ್ತೆಯಲ್ಲಿ ಶೂಟಿಂಗ್‌ ಮಾಡಬೇಕಾದರೆ ಮಂಗಳೂರು ಪಾಲಿಕೆ, ಸಂಚಾರಿ ಪೊಲೀಸರು ಸೇರಿದಂತೆ ಬೇರೆ ಬೇರೆ ವಿಭಾಗ, ಇಲಾಖೆಯಿಂದ ಅನುಮತಿ ಪಡೆಯಬೇಕು. ಇದು ತುಳು ಸಿನೆಮಾ ಮಾಡುವವರಿಗೆ ದೊಡ್ಡ ತಲೆನೋವು.

ಒಂದೊಂದು ಪ್ರವಾಸಿ ತಾಣದ ಉಸ್ತುವಾರಿಯನ್ನು ಪ್ರತ್ಯೇಕವಾದ ಇಲಾಖೆಗಳು ನೋಡಿಕೊಳ್ಳುತ್ತವೆ. ಅಲ್ಲಿ ಚಿತ್ರೀಕರಣ ನಡೆಸಬೇಕಾದರೆ ಸಂಬಂಧಪಟ್ಟ ಇಲಾಖೆಯ ಮೂಲಕವೇ ಅನುಮತಿ ಹಾಗೂ ದರ ನಿಗದಿಯಾಗುತ್ತದೆ. ದೇವಸ್ಥಾನಗಳ ಶೂಟಿಂಗ್‌ ಸಮಯದಲ್ಲಿ ಮುಜರಾಯಿ, ಅರಣ್ಯದಲ್ಲಿ ಶೂಟಿಂಗ್‌ ಆದರೆ ಅರಣ್ಯ ಇಲಾಖೆ, ಪ್ರಾಚೀನ ಸೌಂದರ್ಯದ ಸ್ಥಳದ ಚಿತ್ರೀಕರಣಕ್ಕೆ ಪ್ರಾಚ್ಯ ಇಲಾಖೆ… ಹೀಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಆದರೆ, ಅನುಮತಿಗಾಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಇರುವುದರಿಂದ ತುಳು ಚಿತ್ರತಂಡಗಳು ಸಮಸ್ಯೆ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಬಜೆಟ್ ಆಶಾಭಾವನೆ ಮೂಡಿಸಿದೆ. ಆದರೆ, ಇದರಲ್ಲಿ ಇನ್ನು ಯಾವ ನಿಯಮಾವಳಿ ಸೇರಲಿದೆ ಎಂಬುದನ್ನು ಇನ್ನಷ್ಟೇ ತಿಳಿದುಕೊಳ್ಳಬೇಕಿದೆ.

Advertisement

ರಿಯಾಯಿತಿ ನೀಡಿದರೆ ಉತ್ತಮ
ಸದ್ಯ ಒಂದೊಂದು ಇಲಾಖೆಯಿಂದ ಅನುಮತಿ ಪಡೆದುಕೊಂಡು ಸಿನೆಮಾ ಶೂಟಿಂಗ್‌ ಮಾಡಬೇಕಾಗುತ್ತದೆ. ಇದೆಲ್ಲವನ್ನು ಒಂದೇ ಕಡೆ ಮಾಡಿ ಅನುಮತಿ ಸುಲಭ ನೆಲೆಯಲ್ಲಿ ಸಿಗುವಂತಾದರೆ ಉತ್ತಮ. ತುಳು ಪ್ರಾದೇಶಿಕ ಆಗಿರುವ ನೆಲೆಯಲ್ಲಿ ಸ್ವಲ್ಪ ರಿಯಾಯಿತಿ ನೀಡಿದರೆ ಉತ್ತಮ ಎನ್ನುತ್ತಾರೆ ತುಳು ಚಿತ್ರ ನಿರ್ದೇಶಕ ದೇವದಾಸ್‌ ಕಾಪಿಕಾಡ್‌.

ಹಲವು ಇಲಾಖೆಗಳ ಅನುಮತಿ ಅಗತ್ಯ
ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಶೂಟಿಂಗ್‌ ಮಾಡುವವರಿಗೆ ಈ ನಿಯಮ ಸುಲಭವಾಗಬಹುದು. ರಾಜ್ಯದಲ್ಲಿ ಸದ್ಯಕ್ಕೆ ಏಕಗವಾಕ್ಷಿ ನಿಯಮವಿದೆ. ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ವಾರ್ತಾ ಇಲಾಖೆಯಿಂದ ಅನುಮತಿ ಪಡೆದರೆ ಸಾಕು ಎಂದು ಹೇಳಿದ್ದರೂ ಈಗ ಬೇರೆ ಬೇರೆ ಇಲಾಖೆಗಳಿಂದ ಅನುಮತಿ ಪಡೆಯಲೇಬೇಕಾದ ಅಗತ್ಯ ಇದೆ.
 – ರಾಜೇಶ್‌ ಬ್ರಹ್ಮಾವರ,
 ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ

ನಿಯಮಾವಳಿ ಅರಿಯಬೇಕಷ್ಟೆ
ಏಕಗವಾಕ್ಷಿ ನೆಲೆಯಲ್ಲಿ ವಾರ್ತಾ ಇಲಾಖೆಯ ಮೂಲಕ ಅನುಮತಿ ಸದ್ಯ ಕರ್ನಾಟಕದಲ್ಲಿ ನೀಡಲಾಗುತ್ತಿದೆ. ಇದೀಗ ಕೇಂದ್ರ ಸರಕಾರವು ಬಜೆಟ್‌ನಲ್ಲಿ ಏಕಗವಾಕ್ಷಿ ನಿಯಮಾವಳಿ ಬಗ್ಗೆ ಉಲ್ಲೇಖೀಸಿದೆ. ಇದರಲ್ಲಿ ಯಾವೆಲ್ಲ ವಿಚಾರಗಳಿವೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
– ಅಭಯಸಿಂಹ, ಖ್ಯಾತ ನಿರ್ದೇಶಕ

ಚಿತ್ರೀಕರಣಕ್ಕೆ ನಿಯಮ ಸುಲಭವಾಗಲಿ
ವಾರ್ತಾ ಇಲಾಖೆಯಿಂದ ಅನುಮತಿ ಪಡೆದ ಅನಂತರವೂ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಂದ ಅನುಮತಿ ಪಡೆಯಬೇಕಾಗಿದೆ. ಇದೀಗ ಕೇಂದ್ರ ಬಜೆಟ್‌ನಲ್ಲಿ ಏಕಗವಾಕ್ಷಿ ನಿಯಮಾವಳಿಯನ್ನು ಪ್ರಕಟಿಸಿದ ಕಾರಣದಿಂದ ಯಾವೆಲ್ಲ ಬದಲಾವಣೆ ಇರಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ಚಿತ್ರೀಕರಣಕ್ಕೆ ಸುಲಭವಾಗಲು ಈ ನಿಯಮ ಅನುವಾಗಲಿದೆ.
– ತಮ್ಮ ಲಕ್ಷ್ಮಣ, ಕಲಾ ನಿರ್ದೇಶಕ

ದಿನೇಶ್‌ ಇರಾ 

Advertisement

Udayavani is now on Telegram. Click here to join our channel and stay updated with the latest news.

Next