ಮೇ ತಿಂಗಳು ಮುಗಿಯುತ್ತಾ ಬಂದಿದೆ. ಒಂದು ಹಂತಕ್ಕೆ ಸ್ಟಾರ್‌ಗಳ ಸಿನಿಮಾಗಳು ಕೂಡಾ ರಿಲೀಸ್ ಆಗಿವೆ. ಜೂನ್ ತಿಂಗಳಲ್ಲಿ ಯಾವುದೇ ಸ್ಟಾರ್‌ಗಳ ಸಿನಿಮಾ ಬಿಡುಗಡೆ ಇಲ್ಲ. ಹಾಗಾಗಿ, ತೀರಾ ಹೊಸಬರ ಹಾಗೂ ಬಿಗ್ ಬಜೆಟ್ ಅಲ್ಲದ ಚಿತ್ರಗಳು ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಈಗಾಗಲೇ ಸಾಕಷ್ಟು ಚಿತ್ರಗಳು ಜೂನ್ ತಿಂಗಳಲ್ಲಿ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಜೂನ್‌ನಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಲಿವೆ.
ಹಾಗಂತ ಘೋಷಿಸಿಕೊಂಡ ಚಿತ್ರಗಳೆಲ್ಲವು ಜೂನ್‌ನಲ್ಲೇ ಬಿಡುಗಡೆಯಾಗುತ್ತವೆ ಎಂದು ನಿಖರವಾಗಿ ಹೇಳುವಂತಿಲ್ಲ. ಏಕೆಂದರೆ ಥಿಯೇಟರ್ ಸಮಸ್ಯೆ ಎದುರಾದರೆ ಬಿಡುಗಡೆ ಮುಂದಕ್ಕೆ ಹೋಗಬಹುದು. ಈ ಜೂನ್ ತಿಂಗಳ ವಿಶೇಷವೆಂದರೆ ದೊಡ್ಡ ಸ್ಟಾರ್‌ಗಳ ಚಿತ್ರಗಳನ್ನು ಹೊರತುಪಡಿಸಿ, ಉಳಿದಂತೆ ಹೊಸಬರ ಹಾಗೂ ಈಗಾಗಲೇ ಅನೇಕ ಸಿನಿಮಾ ಮಾಡಿರುವ ನಟರುಗಳು ಚಿತ್ರಗಳು ಬಿಡುಗಡೆಯಾಗುತ್ತಿವೆ. ಜಾನರ್ ವಿಷಯದಲ್ಲೂ ಲವ್, ಕಾಮಿಡಿ, ಹಾರರ್, ಆ್ಯಕ್ಷನ್, ಥ್ರಿಲ್ಲರ್ ಸೇರಿದಂತೆ ಎಲ್ಲಾ ಜಾನರ್‌ನ ಸಿನಿಮಾಗಳು ಜೂನ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿವೆ.
“ಸಾಹೇಬ’, “ಯುಗಪುರುಷ’, “ರಾಜ್‌ವಿಷ್ಣು’, “ದಾದಾ ಇಸ್ ಬ್ಯಾಕ್’, ದಂಡುಪಾಳ್ಯದ ಮುಂದುವರಿದ ಭಾಗ “2′, “ಸ್ಟೂಡೆಂಟ್ಸ್’, “ಆಪರೇಷನ್ ಅಲಮೇಲಮ್ಮ’, “ಜಿಂದಾ’, “ಗಡ್ಡಪ್ಪ ಸರ್ಕಲ್’, “ಜಾನಿ’, “ಧೈರ್ಯಂ’, “ಆಕೆ’, “ಸರ್ಕಾರಿ ಕೆಲಸ ದೇವರ ಕೆಲಸ’, “ಮೀನಾಕ್ಷಿ’, “ಬ್ರಾಂಡ್’, “ನಾನೊಬ್ನೆ ಒಳ್ಳೆಯವ್ನು’, “ಈ ಕಲರವ’, “ಲೈಫ್ -360′, “ಎಳೆಯರು ನಾವು ಗೆಳೆಯರು’, “ಬೈಸಿಕಲ್’,” ಸ್ವರ್ಗ’, “ಸಿಲಿಕಾನ್ ಸಿಟಿ’ ಸೇರಿದಂತೆ ಅನೇಕ ಚಿತ್ರಗಳು ಜೂನ್‌ನಲ್ಲಿ ತೆರೆಕಾಣಲಿವೆ. ಇಷ್ಟೇ ಅಲ್ಲದೇ, ಕೊನೆ ಗಳಿಗೆಯಲ್ಲಿ ಥಿಯೇಟರ್ ಸಿಗುತ್ತದೆ ಎಂಬ ಕಾರಣಕ್ಕೆ ಧುತ್ತನೇ ಕೆಲವು ಸಿನಿಮಾಗಳು ಬಿಡುಗಡೆಯಾದರೂ ಅದರಲ್ಲಿ ಅಚ್ಚರಿಯಿಲ್ಲ.
ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕರಾಗಿರುವ “ಸಾಹೇಬ’ ಜೂನ್‌ನಲ್ಲಿ ಬಿಡುಗಡೆಯಾಗಲಿದ್ದು, ಈ ಮೂಲಕ ಮನೋರಂಜನ್ ಲಾಂಚ್ ಆಗಲಿದ್ದಾರೆ. “ಗೊಂಬೆಗಳ ಲವ್’ ಚಿತ್ರದ ಮಾಡಿದ ನಿರ್ದೇಶಕ ಸಂತೋಷ್ ಅವರ “ದಾದಾ ಇಸ್ ಬ್ಯಾಕ್’, ರಾಮು ನಿರ್ಮಾಣದ “ರಾಜ್ ವಿಷ್ಣು’, ಸುನಿ ನಿರ್ದೇಶನದ “ಆಪರೇಷನ್ ಅಲಮೇಲಮ್ಮ’, “ಜೋಗಿ’ ನಿರ್ಮಾಪಕ ಅಶ್ವಿನಿ ರಾಂಪ್ರಸಾದ್ ನಿರ್ಮಾಣದ “ಸರ್ಕಾರಿ ಕೆಲಸ ದೇವರ ಕೆಲಸ’, ಚೈತನ್ಯ ನಿರ್ದೇಶನದ “ಆಕೆ’ ಸೇರಿದಂತೆ ಒಂದಷ್ಟು ಚಿತ್ರಗಳು ನಿರೀಕ್ಷೆ ಹುಟ್ಟಿಸಿವೆ. ಇನ್ನು, ಜೂನ್‌ನಲ್ಲಿ ತೀರಾ ಹೊಸಬರ ಸಿನಿಮಾವೂ ಬಿಡುಗಡೆಯಾಗಲಿದ್ದು, ಈ ಮೂಲಕ ಅವರ ಅದೃಷ್ಟ ಪರೀಕ್ಷೆಯಾಗಲಿದೆ.
ಅಷ್ಟಕ್ಕೂ ಜೂನ್ ತಿಂಗಳಿನಲ್ಲಿ ಇಷ್ಟೊಂದು ಬಿಡುಗಡೆಯ ಭರಾಟೆ ಯಾಕೆ ಎಂದು ಕೇಳಬಹುದು. ಅದಕ್ಕೆ ಕಾರಣ ಹಿಂದೆ ಮುಂದೆ ಯಾವುದೇ ಸ್ಟಾರ್ ಸಿನಿಮಾ ಇಲ್ಲದಿರುವುದು. ಈಗಾಗಲೇ ಒಂದಷ್ಟು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಿದ್ದು, ಜೂನ್-ಜುಲೈನಲ್ಲಿ ಯಾವುದೇ ದೊಡ್ಡ ಸಿನಿಮಾಗಳ ಬಿಡುಗಡೆ ಇಲ್ಲ. ಹಾಗಾಗಿ, ಥಿಯೇಟರ್ ಸಮಸ್ಯೆ ಕಾಡುವುದಿಲ್ಲ ಎಂಬ ನಂಬಿಕೆಯೊಂದಿಗೆ ಬಿಡುಗಡೆಗೆ ಚಿತ್ರತಂಡಗಳು ರೆಡಿಯಾಗಿವೆ.
ಸ್ಟಾರ್ ಸಿನಿಮಾ ಇಲ್ಲದೇ ಚಿತ್ರಮಂದಿರ ಸಿಗಬಹುದು ಎಂಬ ನಂಬಿಕೆಯೇನೋ ಸರಿ, ಆದರೆ, ಆರಂಭದ ಎರಡು ವಾರಗಳಲ್ಲಿ ಬಿಡುಗಡೆಯಾದ ಎರಡೂ¾ರು ಸಿನಿಮಾಗಳು ಚೆನ್ನಾಗಿ ಓಡಿ, ಥಿಯೇಟರ್‌ನಲ್ಲಿ ಗಟ್ಟಿಸ್ಥಾನ ಪಡೆದರೆ ಮತ್ತೆ ಥಿಯೇಟರ್ ಸಮಸ್ಯೆ ತಲೆದೋರಬಹುದು. ಇನ್ನು, ಆಗಸ್ಟ್‌ನಿಂದ ಸ್ಟಾರ್‌ಗಳ ಸಿನಿಮಾ ಬಿಡುಗಡೆ ಶುರುವಾಗಲಿದೆ. ಶಿವರಾಜಕುಮಾರ್ ಅವರ “ಲೀಡರ್’, ಉಪೇಂದ್ರ ಅವರ “ಉಪೇಂದ್ರ ಮತ್ತೆ ಬಾ’ ಸೇರಿದಂತೆ ಕೆಲವು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಲಿವೆ. ಈ ಎಲ್ಲಾ ಕಾರಣದಿಂದ ಜೂನ್ ತಿಂಗಳಲ್ಲಿ ಬಿಡುಗಡೆ ಭರಾಟೆ ಜೋರಾಗಲಿದೆ.