“ಅಂಜನಿಪುತ್ರ’ ಚಿತ್ರದಲ್ಲಿನ ಸಂಭಾಷಣೆ ವಕೀಲರನ್ನು ಅವಹೇಳನ ಮಾಡುವಂತಿದೆ ಎಂದು ವಕೀಲರೊಬ್ಬರು ಚಿತ್ರಕ್ಕೆ ತಡೆ ತಂದಿದ್ದರು. ಹಾಗಾಗಿ, ಚಿತ್ರ ಒಂದು ಪ್ರದರ್ಶನ ಕಂಡಿರಲಿಲ್ಲ. ಈಗ ಎಂದಿನಂತೆ ಚಿತ್ರ ಪ್ರದರ್ಶನವಾಗುತ್ತಿದೆ. ಹಾಗಾದರೆ, ಚಿತ್ರದ ಒಂದು ದಿನದ ಪ್ರದರ್ಶನ ನಿಂತಿದ್ದರಿಂದ ನಿರ್ಮಾಪಕ ಕುಮಾರ್ ಅವರಿಗಾದ ನಷ್ಟವೆಷ್ಟು ಎಂದರೆ ಅದಕ್ಕೆ ಅವರು ಉತ್ತರಿಸಲು ಸಿದ್ಧರಿಲ್ಲ.
“ಸಿನಿಮಾದಿಂದ ಒಂದಷ್ಟು ನಷ್ಟವಾಗಿರೋದು ನಿಜ. ಆದರೆ, ಮುಂದಿನ ದಿನಗಳಲ್ಲಿ ಅಭಿಮಾನಿಗಳು ಆ ನಷ್ಟವನ್ನು ಭರಿಸಿಕೊಡುತ್ತಾರೆಂಬ ವಿಶ್ವಾಸವಿದೆ. ಒಂದು ದಿನ ಶೋ ನಿಂತಿದೆ. ಆದರೆ ಚಿತ್ರಮಂದಿರದ ಮಾಲೀಕರು ಬೇರೆ ಸಿನಿಮಾ ಹಾಕಿಲ್ಲ. ಒಂದು ಚಿತ್ರಮಂದಿರ ಕೂಡಾ ಕಡಿಮೆಯಾಗಿಲ್ಲ. ಮೊದಲ ವಾರ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಿದ್ದೆ.
ಈ ವಾರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ವಕೀಲರು ಅವರಿಗಾದ ಬೇಸರದ ಬಗ್ಗೆ ಕೇಳಿದ್ದು ತಪ್ಪಲ್ಲ. ಆದರೆ, ಕೇಳಲು ಬಂದ ರೀತಿ ಸರಿ ಇರಲಿಲ್ಲ ಅನಿಸಿಲ್ಲ. ನೇರವಾಗಿ ಕೇಳಿದರೆ ನಾವೇ ಕಟ್ ಮಾಡೋಕೆ ರೆಡಿ ಇದ್ದೇವು. ಆಗಿದ್ದು ಆಗಿದ್ದು, ನನಗೆ ಬೇವು-ಬೆಲ್ಲ ಸ್ವಲ್ಪ ಬೇಗನೇ ಬಂದಿದೆ’ ಎನ್ನುವ ಅವರಿಗೆ ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ಬಾರದ ಚಿತ್ರರಂಗದ ಮಂದಿಯ ಬಗ್ಗೆ ಬೇಸರವಿದೆ.
“ನಾನು ಅನೇಕರ ಕಷ್ಟಕ್ಕೆ ಸ್ಪಂಧಿಸಿದ್ದೇವೆ. ರಾತ್ರೋರಾತ್ರಿ ನಿಂತು ಸಿನಿಮಾ ಬಿಡುಗಡೆ ಕೂಡಾ ಮಾಡಿಸಿದ್ದೇವೆ. ಅದು ನನ್ನ ಕರ್ತವ್ಯ. ಬೇರೆಯವರು ಬೆಂಬಲಕ್ಕೆ ಬರೋದು ಅವರ ಇಚ್ಛೆ. ನಾನು ಸಿನಿಮಾ ಪ್ರೇಮಿಗಳನ್ನು ಅಭಿಮಾನಿಗಳನ್ನು ನಂಬಿದ್ದೇನೆ. ಅವರು ನನ್ನ ಕೈ ಬಿಡೋದಿಲ್ಲ ಎಂಬ ನಂಬಿಕೆ ಇದೆ. ನನಗೆ ಸಿನಿಮಾ ಬಿಟ್ಟು ಬೇರೇನು ಕೆಲಸ ಗೊತ್ತಿಲ್ಲ.
ಏನೇ ಕಷ್ಟ ಬಂದರೂ ಸಿನಿಮಾ ಮಾಡುತ್ತಲೇ ಇರುತ್ತೇನೆ. ಸಿನಿಮಾ ಪ್ರೇಮಿಗಳು ನನ್ನ ಕೈ ಬಿಡೋದಿಲ್ಲ’ ಎಂಬ ನಂಬಿಕೆ ಇದೆ ಎಂಬುದು ಕುಮಾರ್ ಮಾತು. ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನಿಗಳು ಈ ಸಿನಿಮಾವನ್ನು ಹಬ್ಬದ ರೀತಿ ಸಂಭ್ರಮಿಸಿದ ಬಗ್ಗೆ ಖುಷಿ ಇದೆ. ಜೊತೆಗೆ ಚಿತ್ರಕ್ಕೆ ಎದುರಾದ ಸಮಸ್ಯೆಯನ್ನು ಇಡೀ ಚಿತ್ರತಂಡ ಒಗ್ಗಟ್ಟಾಗಿ ನಿಂತು ಬಗೆಹರಿಸಿಕೊಂಡಿದೆ.
“ಸಮಸ್ಯೆ ಬಗೆಹರಿದಿದೆ. ಮತ್ತೆ ಸಿನಿಮಾ ಆರಂಭವಾಗಿದೆ. ಬಂದು ನೋಡಿ’ ಎಂದರು. ನಿರ್ದೇಶಕ ಹರ್ಷ ಸಿನಿಮಾದ ಸಮಸ್ಯೆ ಬಗೆಹರಿದಿರುವ ಬಗ್ಗೆ ನಿರಾಳರಾಗಿದ್ದರು. ಚಿತ್ರದ ವಿತರಕ ಜಾಕ್ ಮಂಜು ಅವರು ಚಿತ್ರದ ಕಲೆಕ್ಷನ್‌ನಿಂದ ಖುಷಿಯಾಗಿದ್ದಾರೆ. ಟಿಕೆಟ್ ಬೆಲೆಗೆ ಜಿಎಸ್‌ಟಿ ಸೇರಿದ್ದರೂ ಅಭಿಮಾನಿಗಳು ಖುಷಿಯಿಂದ ಟಿಕೆಟ್ ಪಡೆದು ಸಿನಿಮಾ ನೋಡಿದರು ಎಂಬುದು ಅವರ ಮಾತು.