Advertisement

ಸಿನಿಮಾ ಸಾಹಿತ್ಯ ಅಸ್ಪೃಶ್ಯ ಸಾಹಿತ್ಯವಲ್ಲ

06:00 AM Oct 07, 2018 | |

ಬೆಂಗಳೂರು: ಸಾಹಿತಿಗಳಿಗೆ ಸಿನಿಮಾ ಸಾಹಿತ್ಯ ಬರೆಯುವ ಆಸೆ ಇರುತ್ತದೆ. ಅವಕಾಶ ಸಿಗದಿದ್ದಾಗ ಸಿನಿಮಾ ಸಾಹಿತ್ಯವನ್ನು ಅಸ್ಪೃಶ್ಯ ಸಾಹಿತ್ಯ ಎಂಬಂತೆ ಬಿಂಬಿಸುತ್ತಾರೆ ಎಂದು ಹಿರಿಯ ಲೇಖಕ, ಸಾಹಿತಿ ಬಿ.ಎಲ್‌.ವೇಣು ಹೇಳಿದರು.

Advertisement

ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ಬೆಳ್ಳಿಹೆಜ್ಜೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವೇಣು, ಸಿನಿಮಾ ಸಾಹಿತ್ಯದ ಬಗ್ಗೆ ಎಲ್ಲರಿಗೂ ಆಸಕ್ತಿ ಇರುತ್ತದೆ. ಆದರೆ ಎಲ್ಲರಿಗೂ ಆ ಅವಕಾಶ ಸಿಗೋದಿಲ್ಲ. ಆದರೆ, ಆ ವಿಷಯದಲ್ಲಿ ನಾನು ಅದೃಷ್ಟವಂತ. ಕಾಲೇಜು ದಿನಗಳಲ್ಲಿ ಆರ್ಕೇಸ್ಟ್ರಾ ನಡೆಸುತ್ತಿದ್ದ ನನಗೆ ಸಿನಿಮಾದಲ್ಲಿ ಕೆಲಸ ಮಾಡುವ ಆಶಯವೂ ಇರಲಿಲ್ಲ, ಸಾಹಿತಿಯಾಗುವ ಆಸೆಯೂ ಇರಲಿಲ್ಲ. ಒಬ್ಬ ಸಂಗೀತ ನಿರ್ದೇಶಕನಾಗಬಹುದು ಅಥವಾ ಹಿನ್ನೆಲೆ ಗಾಯಕ ಆಗಬಹುದೆಂದುಕೊಂಡಿದ್ದೆ. ಆದರೆ, ನನ್ನ ಅದೃಷ್ಟ ಚೆನ್ನಾಗಿತ್ತು. ಯಾವುದೇ ಗಾಡ್‌ಫಾದರ್‌ ಇಲ್ಲದೇ ಸಾಹಿತಿಯಾಗಿದ್ದೇನೆ ಎಂದರು.

ಬಿ.ಎಲ್‌.ವೇಣು ಅವರ ಅನೇಕ ಕೃತಿಗಳು ಸಿನಿಮಾಗಳಾಗಿವೆ. ಅಜೇಯ, ಪ್ರೇಮಜಾಳ, ಪ್ರೀತಿ ವಾತ್ಸಲ್ಯ, ತಿಪ್ಪಜ್ಜಿ ಸರ್ಕಲ್‌ ಸೇರಿದಂತೆ ಅನೇಕ ಕೃತಿಗಳು ಸಿನಿಮಾಗಳಾಗುವ ಜೊತೆಗೆ ಪ್ರಶಸ್ತಿಯನ್ನು ಬಾಚಿಕೊಂಡಿವೆ. ಜೊತೆಗೆ ವೇಣು ಅವರು ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ, ಸಾಹಿತ್ಯ ಕೂಡಾ ಬರೆದಿದ್ದಾರೆ. ಈ ಬಗ್ಗೆ ಮಾತನಾಡುವ ಅವರು, “ನಾನು ಸಾಹಿತ್ಯ ಬರೆಯೋಕೆ ಆರಂಭಿಸಿದ್ದು, ಬಡತನದಿಂದಾಗಿ. ಕಡುಬಡತನದಿಂದ ನಾನು, ಅದನ್ನೇ ಮೂಲವಸ್ತುವಾಗಿಟ್ಟುಕೊಂಡು ಬಂಡಾಯ ಸಾಹಿತ್ಯ ಬರೆಯಲಾರಂಭಿಸಿದೆ. ಸಿನಿಮಾವಾದ ನನ್ನ ಮೊದಲ ಕೃತಿ “ದೊಡ್ಡಮನೆ’. ಆ ನಂತರ “ಬೆತ್ತಲು ಸೇವೆ’ ಕಾದಂಬರಿ ಸಿನಿಮಾವಾಯಿತು. ಅಲ್ಲಿಂದ ಆರಂಭವಾದ ಪಯಣ ನಿರಂತರ 35 ವರ್ಷ ಸಾಗುತ್ತಾ ಬಂದಿದೆ. ಇಷ್ಟು ವರ್ಷಗಳ ಪಯಣದಲ್ಲಿ ವಿಷ್ಣುವರ್ಧನ್‌, ಅಂಬರೀಶ್‌, ಅನಂತ್‌ನಾಗ್‌, ನಿರ್ದೇಶಕರಾದ ಸಿದ್ದಲಿಂಗಯ್ಯ, ಪುಟ್ಟಣ ಕಣಗಾಲ್‌ ಸೇರಿದಂತೆ ಅನೇಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಎಲ್ಲರೂ ನನಗೆ ಸಹಕರಿಸಿದ್ದಾರೆ. ಮೂರು ಜನರೇಶನ್‌ ಜೊತೆ ಕೆಲಸ ಮಾಡಿದ ಖುಷಿ ನನಗಿದೆ. ಇಷ್ಟು ವರ್ಷಗಳಲ್ಲಿ ಯಾವತ್ತೂ ನನಗೆ ಬರವಣಿಗೆ ಸಾಕು ಎನಿಸಿಲ್ಲ, ಸಿನಿಮಾ ಬೇಸರವಾಗಿಲ್ಲ’ ಎಂದರು.

ಆರಂಭದ ದಿನಗಳನ್ನು ನೆನಪಿಸಿಕೊಳ್ಳುವ ವೇಣು ಅವರು, ಚಿತ್ರರಂಗಕ್ಕೆ ಬಂದ ಸಮಯದಲ್ಲಿ ಸಿನಿಮಾ ಸಂಭಾಷಣೆ ಬಗ್ಗೆ ಸಣ್ಣ ಭಯವಿತ್ತು. ನಾನು ಬರೆದ ಸಂಭಾಷಣೆಯನ್ನು ಪುಟ್ಟಣ್ಣ ಸೇರಿದಂತೆ ಅನೇಕ ನಿರ್ದೇಶಕರಿಗೆ, ನಟರಿಗೆ ಒಪ್ಪಿಸುವಾಗ ಅವರು ಕೂಡಾ ಭಾವುಕರಾಗುತ್ತಿದ್ದರು. ಆಗ ನನಗೆ ಸಿನಿಮಾ ಸಂಭಾಷಣೆ ಬಗ್ಗೆ ಧೈರ್ಯ ಬಂತು. ನಿಧಾನವಾಗಿ ಸಿನಿಮಾ ಭಾಷೆ ಮೈಗೂಢಿಸಿಕೊಂಡೆ’ ಎನ್ನುತ್ತಾರೆ ವೇಣು. ವೇಣು ಅವರು ಸರ್ಕಾರಿ ನೌಕರಿಯಲ್ಲಿದ್ದುಕೊಂಡೆ ಸಿನಿಮಾ, ಸಾಹಿತ್ಯ ಕೃತಿ ಮಾಡಿದವರು. ಆದರೆ, ಕೆಲಸಕ್ಕೆ ಯಾವತ್ತೂ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾಗಿ ಹೇಳಿದರು.

ಬಿ.ಎಲ್‌.ವೇಣು ಅವರ “ಗಂಡುಗಲಿ ವೀರಮದಕರಿ’ ಕೃತಿ ಸಿನಿಮಾವಾಗುತ್ತಿದ್ದು, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದಾರೆ. ಈ ಬಗ್ಗೆಯೂ ವೇಣು ಅವರಿಗೆ ಖುಷಿ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next