ಪ್ರೇಮ್ ಅಭಿನಯದ “ದಳಪತಿ’ ಬಿಡುಗಡೆಗೆ ಸಿದ್ಧವಾಗಿದೆ. ಆ ಚಿತ್ರ ಶುರುವಾಗಿದ್ದು ಮೂರು ವರ್ಷಗಳ ಹಿಂದೆ. ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ ಇನ್ನೂ ಒಂದೆರೆಡು ಕಥೆಗಳನ್ನು ಓಕೆ ಮಾಡಿಟ್ಟಿದ್ದಾರಂತೆ ಪ್ರೇಮ್. “ಲೈಫ್ ಜೊತೆಗೊಂದು ಸೆಲ್ಫಿ’ ಚಿತ್ರದ ನಂತರ ಆ ಚಿತ್ರಗಳು ಶುರುವಾಗಲಿದೆ. ಇಷ್ಟಕ್ಕೂ ಪ್ರೇಮ್ ಯಾವ ತರಹದ ಕಥೆಗಳನ್ನು ಹುಡುಕುತ್ತಿದ್ದಾರೆ ಎಂದರೆ, ಪ್ರಾಕ್ಟಿಕಲ್ ಮತ್ತು ನೈಜ ಸಿನಿಮಾಗಳು ಎಂಬ ಉತ್ತರ ಬರುತ್ತದೆ.
ಕಳೆದ ಕೆಲವು ವರ್ಷಗಳಲ್ಲಿ ಬದಲಾಗಿರುವ ಟ್ರೆಂಡ್‌ನ್ನು ಪ್ರೇಮ್ ಗಮನಿಸಿದ್ದಾರೆ. ಮುಂಚಿನ ತರಹ ಫೈಟು, ಡ್ಯುಯೆಟ್ಟು ಎಲ್ಲಾ ಜನ ಇಷ್ಟಪಡುವುದಿಲ್ಲ ಮತ್ತು ಹೆಚ್ಚಾಗಿ ನೈಜ ಚಿತ್ರಗಳನ್ನು ಜನ ನಿರೀಕ್ಷೆ ಮಾಡುತ್ತಾರೆ ಎಂದು ಅರಿತುಕೊಂಡಿದ್ದಾರೆ. ಹಾಗಾಗಿ ಅಂತಹ ಚಿತ್ರಗಳು ಮತ್ತು ಪಾತ್ರಗಳಿಗೆ ಒತ್ತು ಕೊಡುವುದು ಅವರ ಚಿಂತನೆ. “ಕೆಲವು ವರ್ಷಗಳಿಂದ ನೋಡಿಕೊಂಡು ಬನ್ನಿ, ಜನ ಹೆಚ್ಚಾಗಿ ರಿಯಲಾಸ್ಟಿಕ್ ಸಿನಿಮಾಗಳನ್ನು ನೋಡುತ್ತಿದ್ದಾರೆಯೇ ಹೊರತು, ಆರ್ಟಿಫಿಷಿಯಲ್ ಚಿತ್ರಗಳನ್ನು ಇಷ್ಟಪಡುವುದಿಲ್ಲ.
ಜನ ಈಗ ಫೈಟು, ಡ್ಯುಯೆಟ್ಟು ಎಲ್ಲ ನೋಡಲ್ಲ. ಅದೇ ಕಾರಣಕ್ಕೂ ತೆಲುಗು, ತಮಿಳಿನಲ್ಲೂ ಅಬ್ಬರ ಕಡಿಮೆಯಾಗಿದೆ. ಬಹಳ ಪ್ರಾಕ್ಟಿಕಲ್ ಮತ್ತು ನೈಜ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಜನಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಒಂದು ಕಥೆ ಕನೆಕ್ಟ್ ಆಗಬೇಕು. ಅಂತಹ ಕಥೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಅಂತಹ ಕಥೆಗಳನ್ನ ನಾನು ಹುಡುಕುತ್ತಿದ್ದೀನಿ’ ಎಂದು ತಮ್ಮ ಆದ್ಯತೆಯನ್ನು ವಿವರಿಸುತ್ತಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಪ್ರೇಮ್ ಐಡಿಯಾ.
“ಸಿನಿಮಾ ಜೊತೆಜೊತೆಗೆ ಜಮೀನು ತಗೊಂಡು ಕೃಷಿ ಮಾಡುವ ಯೋಚನೆ ಇದೆ. ಇಲ್ಲೇ ಬೆಂಗಳೂರು ಸುತ್ತಮುತ್ತ ಎಲ್ಲಾದರೂ ಜಮೀನು ಕೊಂಡುಕೊಳ್ಳುವ ಯೋಚನೆ ಇದೆ. ಇನ್ನು ಮುಂದೆ ಭೂಮಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಈಗಲಾದರೂ ನಮಗೆ ಬೆಳೆದುಕೊಳ್ಳುವಷ್ಟು ಒಂದು ಸಣ್ಣ ಜಮೀನು ಮಾಡುವ ಯೋಚನೆ ಇದೆ. ಹಾಗಂತ ಅದರಿಂದ ಸಿನಿಮಾಗೆ ತೊಂದರೆ ಆಗುವುದಿಲ್ಲ. ಒಳ್ಳೆಯ ಸ್ನೇಹಿತರಿದ್ದಾರೆ. ಅವರು ನೋಡಿಕೊಳ್ಳುತ್ತಾರೆ. ನನಗೆ ಸಮಯ ಇದ್ದಾಗ ಹೋಗಿ ಬರಿ¤àನಿ’ ಎನ್ನುತ್ತಾರೆ ಪ್ರೇಮ್.