Advertisement

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

11:37 AM Apr 27, 2024 | |

“ನೋಡಿ ಸಾರ್‌, ಮಲಯಾಳಂನವರು ಹೆಂಗ್‌ ಹಿಟ್‌ ಮೇಲೆ ಹಿಟ್‌ ಕೊಡ್ತಿದ್ದಾರೆ. ಆದರೆ ನಮ್ಮಲ್ಲಿ ಯಾಕೆ ಹೀಗಾಗ್ತಿದೆ.. ಇದೇ ರೀತಿ ಮುಂದುವರೆದರೆ ಈ ವರ್ಷದ ಕಥೆ ಏನ್‌ ಸಾರ್‌…’

Advertisement

– ಸ್ಯಾಂಡಲ್‌ವುಡ್‌ನ‌ ನಿರ್ಮಾಪಕರೊಬ್ಬರು ಹೀಗೆ ತುಂಬಾ ಬೇಸರದಲ್ಲಿ ಮಾತನಾಡಿದರು. ಅವರ ಮಾತಲ್ಲಿ ಬೇಸರದ ಜೊತೆಗೆ ಕನ್ನಡ ಚಿತ್ರರಂಗದ ಬಗೆಗಿನ ಕಾಳಜಿಯೂ ಇತ್ತು. ಅದಕ್ಕೆ ಕಾರಣ 2024ರಲ್ಲಿ ನಾಲ್ಕು ತಿಂಗಳು ಮುಗಿಯುತ್ತಾ ಬಂದಿದೆ. 75ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಕಂಡಿವೆ. ಇದರಲ್ಲಿ ಗೆದ್ದ ಚಿತ್ರಗಳೆಷ್ಟು ಎಂದು ನೀವು ಕೇಳಿದರೆ ಉತ್ತರಿಸೋದು ಕಷ್ಟ. ಹಾಗಾದರೆ ಇವೆಲ್ಲವೂ ಕೆಟ್ಟ ಸಿನಿಮಾಗಳೇ ಎಂದರೆ ಖಂಡಿತಾ ಅಲ್ಲ. ಆದರೆ, ಇವತ್ತಿನ ಪ್ರೇಕ್ಷಕನ ಅಭಿರುಚಿಗೆ ಹೊಂದಿಕೆಯಾಗುವಲ್ಲಿ ಈ ಚಿತ್ರಗಳು ಹಿಂದೆ ಬಿದ್ದಿರಬಹುದು, ಒಂದೊಳ್ಳೆಯ ಕಂಟೆಂಟ್‌ನ ಸಿನಿಮಾ ಜನರಿಗೆ ತಲುಪುವಲ್ಲಿ ಸೋತಿರಬಹುದು ಅಥವಾ ಸತತ ಸೋಲುಗಳನ್ನು, ಒಂದಷ್ಟು ಸಿನಿಮಾಗಳು ಹುಸಿಗೊಳಿಸಿದ ನಿರೀಕ್ಷೆಗಳು ಪ್ರೇಕ್ಷಕನನ್ನು ಸಿಟ್ಟಿಗೆ, ಉದಾಸೀನತೆಗೆ ದೂಡಿರಬಹುದು. ಆದರೆ, ಇವೆಲ್ಲದರ ನೇರಪರಿಣಾಮ ಮಾತ್ರ ಆಗುತ್ತಿರುವುದು ಕನ್ನಡ ಚಿತ್ರರಂಗದ ಮೇಲೆಯೇ.

ಈ ನಾಲ್ಕು ತಿಂಗಳಲ್ಲಿ ಕನ್ನಡ ಚಿತ್ರರಂಗ ತುಂಬಾ ನಿಧಾನಗತಿಯಲ್ಲಿ, ನೀರಸವಾಗಿ, ಯಾವುದೇ ಒಂದು ಎಕ್ಸೆ„ಟ್‌ಮೆಂಟ್‌ ಇಲ್ಲದೇ ಸಾಗುತ್ತಿದೆ. ಇದು ನಿಜವಾದ ಕನ್ನಡ ಸಿನಿಮಾ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ. ಇಲ್ಲಿ ಯಾರನ್ನೂ ದೂಷಿಸಲಾಗುವುದಿಲ್ಲ. ಆದರೆ, ಒಂದು ಹೊಸದನ್ನು ನೀಡಬೇಕು ಎಂಬ “ಉತ್ಸಾಹ’ದ ಹಾಗೂ ಹೊಸಬರಿಗೆ ಸಿಗಬೇಕಾದ “ಪ್ರೋತ್ಸಾಹ’ದ ಕೊರತೆ ಎದ್ದು ಕಾಣುತ್ತಿದೆ.

ಮಲಯಾಳಂನತ್ತ ಸಿನಿಮಂದಿಯ ಬೆರಗು ನೋಟ

ನಿರ್ಮಾಪಕರೊಬ್ಬರು ಹೇಳಿದಂತೆ ಮಲಯಾಳಂ ಚಿತ್ರರಂಗ ಕಳೆದ ನಾಲ್ಕು ತಿಂಗಳಲ್ಲಿ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಹ ಚಿತ್ರಗಳನ್ನು ನೀಡುತ್ತಿದೆ. ಒಂದಕ್ಕಿಂತ ಒಂದು ಚಿತ್ರಗಳು ಹಿಟ್‌ಲಿಸ್ಟ್‌ ಸೇರಿಕೊಂಡು ಬೇರೆ ಭಾಷೆಯ ಸಿನಿಮಂದಿಯ ಹುಬ್ಬೇರಿಸುತ್ತಿದೆ. ಬಿಝಿನೆಸ್‌ ವಿಚಾರದಲ್ಲಿ ಹೇಳಬೇಕಾದರೆ ಈ ನಾಲ್ಕು ತಿಂಗಳಲ್ಲಿ ಮಲಯಾಳಂ ಚಿತ್ರರಂಗ ಸಾವಿರ ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ಮಾಡಿದೆ. ಇದು ಕೇವಲ ಚಿತ್ರಮಂದಿರದ ಕಲೆಕ್ಷನ್‌. ಇಂತಹ ಸಾಧನೆಯನ್ನು ಕನ್ನಡ ಚಿತ್ರರಂಗ ಎರಡು ವರ್ಷಗಳ ಹಿಂದೆ ಮಾಡಿತ್ತು. ಆದರೆ, 2023ರಲ್ಲಿ ಹಾಗೂ ಈ ವರ್ಷದ ಈ ನಾಲ್ಕು ತಿಂಗಳಲ್ಲಿ ಯಾವ ಪ್ರಗತಿಯೂ ಇಲ್ಲ. ಮಲಯಾಳಂಗೆ ಸಿಗುವ ಗೆಲುವು ನಮಗೆ ಯಾಕೆ ಸಿಗುತ್ತಿಲ್ಲ ಎಂಬ ಲೆಕ್ಕಾಚಾರ ಶುರುವಾಗಿದೆ. ಇಲ್ಲೊಂದು ಅಂಶವನ್ನು ಗಮನಿಸಬೇಕು. ಮಲಯಾಳಂನಲ್ಲಿ ಗೆದ್ದ ಸಿನಿಮಾಗಳಲ್ಲಿ ಸ್ಟಾರ್‌ ನಟರಿದಿದ್ದು ಬೆರಳೆಣಿಕೆಯ ಚಿತ್ರಗಳಲ್ಲಿ ಮಾತ್ರ. ಆದರೂ ಇದು ಹೇಗೆ ಸಾಧ್ಯ ಎಂಬ ಚರ್ಚೆ ನಡೆಯುತ್ತಿದೆ. ಆಗ ಸಿಗುವ ಉತ್ತರ ಮತ್ತದೇ ಕಂಟೆಂಟ್‌.

Advertisement

ಕಂಟೆಂಟ್ಸದ್ದು

ಒಂದು ಸಿನಿಮಾದ ಗೆಲುವಿನ ಹಿಂದೆ ನಾನಾ ಕಾರಣಗಳಿರುತ್ತವೆ. ಅದು ಕಥೆಯಿಂದ ಹಿಡಿದು ಸಿನಿಮಾದ ಮೇಕಿಂಗ್‌ವರೆಗೆ. ಹಾಗಂತ ಒಂದೇ ರೀತಿಯ ಕಥೆ ಹಾಗೂ ಮೇಕಿಂಗ್‌ ಕೊಡುತ್ತಾ ಬಂದರೆ ಪ್ರೇಕ್ಷಕ ಅದನ್ನು ಸಾರಸಗಟಾಗಿ ತಿರಸ್ಕರಿಸುತ್ತಾನೆ. ಅದಕ್ಕೆ ಕಾರಣ ಪ್ರೇಕ್ಷಕ ಕಾಲದಿಂದ ಕಾಲಕ್ಕೆ ಅಪ್‌ಡೇಟ್‌ ಆಗುತ್ತಾ, ಹೊಸದನ್ನು ಸ್ವೀಕರಿಸುತ್ತಾ, ಹಳೆಯದನ್ನು ತಿರಸ್ಕರಿಸುತ್ತಾ ಹೋಗುತ್ತಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವುದು ಕಂಟೆಂಟ್‌ ಸಿನಿಮಾಗಳ ಜಮಾನ. ಆ್ಯಕ್ಷನ್‌, ಹೀರೋಯಿಸಂ, ಲವ್‌, ರೊಮ್ಯಾನ್ಸ್‌ ಸಬ್ಜೆಕ್ಟ್ ಗಳಿಗಿಂತ ಒಂದೊಳ್ಳೆಯ, ನೋಡ ನೋಡುತ್ತಲೇ ನಮದೆನಿಸುವ ಕಥೆಗೆ ಈಗ ಒಳ್ಳೆಯ ಕಾಲ. ಪ್ರೇಕ್ಷಕನಿಗೆ ಸಿನಿಮಾ ಒಂಚೂರು ಇಷ್ಟವಾದರೂ ಆತ ಅದನ್ನು ಮುಲಾಜಿಲ್ಲದೇ ತನ್ನದೆಂದು ಅಪ್ಪಿಕೊಂಡು, ಮುದ್ದಾಡಿ ಮೆರೆಸಿಬಿಡುತ್ತಾನೆ. ಇತ್ತೀಚಿನ ವರ್ಷಗಳಲ್ಲಿ ಹಿಟ್‌ ಆದ ಸಿನಿಮಾಗಳ ಹಿಂದೆ ಇಂಥದ್ದೊಂದು ಕಥೆ ಇದ್ದೇ ಇರುತ್ತದೆ.

ಇವತ್ತು ಪ್ರೇಕ್ಷಕನ ಅಭಿರುಚಿ ಬದಲಾಗಿದೆ. ಮನಸ್ಥಿತಿಯೂ ಹೊಸದನ್ನು ಬಯಸುತ್ತಿದೆ. ಈಗಿನ ಪ್ರೇಕ್ಷಕರಿಗೂ “ಸಿನಿ ಶಿಕ್ಷಣ’ ಚೆನ್ನಾಗಿಯೇ ಇದೆ. ಬೆರಳಂಚಿನಲ್ಲಿ ಜಗತ್ತಿನ ಸಿನಿಮಾಗಳನ್ನು ಇಟ್ಟುಕೊಂಡಿರುವ ಪ್ರೇಕ್ಷಕ ಹೊಸದನ್ನು ಬಯಸುತ್ತಿದ್ದೇನೆ. ಅದರ ಪರಿಣಾಮವಾಗಿಯೇ ಇವತ್ತು ಕಂಟೆಂಟ್‌ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿವೆ. ಇದು ಕೇವಲ ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ. ಎಲ್ಲಾ ಭಾಷೆಗಳಿಗೂ ಇದು ಅನ್ವಯಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಕನ್ನಡ ಚಿತ್ರರಂಗ ಮತ್ತಷ್ಟು ಯೋಚಿಸಬೇಕಿದೆ.

ಕಂಟೆಂಟ್‌ ಸಿನಿಮಾ, ಮಣ್ಣಿನ ಸಿನಿಮಾ ಎಂದು ಹೇಳಿಕೊಂಡು ಬರುವ ಕೆಲವು ಸಿನಿಮಾಗಳು ಕೇವಲ ಒಂದು ಊರಿನ ಭಾಷೆ, ಅಲ್ಲಿನ ಪರಿಸರವನ್ನಷ್ಟೇ ಬಿಂಬಿಸುತ್ತಿವೆ. ಆದರೆ, ಭಾಷೆ ಮತ್ತು ಪರಿಸರದ ಜೊತೆಗೆ ಅಲ್ಲೊಂದು ಕಂಟೆಂಟ್‌ ಬೇಕು ಎಂಬುದನ್ನು ಮರೆತೇ ಬಿಡುತ್ತವೆ. ಇದೇ ಕಾರಣದಿಂದ ಈ ಬಾರಿಯೂ ಇಂತಹ ಅನೇಕ ಸಿನಿಮಾಗಳಿಗೆ ನಿರಾಸೆಯಾಯಿತು.

ಮುಂಚೂಣಿ ಸಿನಿಮಂದಿ ಯೋಚಿಸಬೇಕಿದೆ

ಯಾವುದೇ ಭಾಷೆಯ ಚಿತ್ರರಂಗವನ್ನಾದರೂ ತೆಗೆದುಕೊಳ್ಳಿ, ಆವತ್ತಿನಿಂದ ಇವತ್ತಿನವರೆಗೆ ಅಲ್ಲಿ ಮುಂಚೂಣಿ ಸಿನಿಮಾ ನಿರ್ಮಾಪಕರ, ನಟರ ಪರಿಶ್ರಮ, ಜೋಶ್‌ ಇಲ್ಲದೇ ಸಿನಿಮಾ ರಂಗ ಶೈನ್‌ ಆಗುವುದು ಕಷ್ಟ. ಅದೇ ಕಾರಣದಿಂದ ಇವತ್ತಿಗೂ ಹೊಸ ತಂಡಗಳು ಸಿನಿಮಾ ಪ್ರಮೋಶನ್‌ಗೆ ಸ್ಟಾರ್‌ ನಟರ ಸಹಾಯ ಕೇಳುತ್ತದೆ, ಯಾರಾದರೂ ಸ್ಟಾರ್‌ಗಳು ತಮ್ಮ ಸಿನಿಮಾ ಬಗ್ಗೆ ನಾಲ್ಕು ಪದ ಒಳ್ಳೆಯದು ಬರೆಯಲಿ ಎಂದು ಬಯಸುತ್ತದೆ. ಇಂತಹ ಮುಂಚೂಣಿ ನಿರ್ಮಾಪಕು, ನಟರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುವತ್ತಾ ಯೋಚಿಸುವ ಜೊತೆಗೆ ಚಿತ್ರರಂಗವನ್ನು ಹೆಚ್ಚು ಕ್ರಿಯಾಶೀಲವಾಗಿಡುವಲ್ಲಿ ಪ್ರಯತ್ನಿಸಬೇಕಿದೆ.

ಪರಭಾಷಾ ಸ್ಟಾರ್‌ಗಳು ತಮ್ಮ ಸಿನಿಮಾಗಳ ರಿಲೀಸ್‌ ಡೇಟ್‌ ಅನ್ನು ಅಥವಾ ರಿಲೀಸ್‌ ಆಗುವ ತಿಂಗಳನ್ನು ಘೋಷಿಸಿ ಅಭಿಮಾನಿಗಳನ್ನು ಚಿತ್ರಕ್ಕೆ ಮಾನಸಿಕವಾಗಿ ಸಿದ್ಧಪಡಿಸುತ್ತಾರೆ. ಆದರೆ, ಕನ್ನಡದಲ್ಲಿ ಈ ತರಹದ ರಿಲೀಸ್‌ ಡೇಟ್‌ ಘೋಷಣೆ ಮಾತ್ರ ಪ್ರತಿ ಬಾರಿಯೂ ಅಸ್ಪಷ್ಟವಾಗಿಯೇ ಇರುತ್ತದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next