Advertisement

ಕರಾವಳಿ ಅಪರಾಧ ಸುದ್ದಿಗಳು

04:10 PM Aug 06, 2018 | |

ಕೂರ್ನಡ್ಕ: ಅರಣ್ಯರಕ್ಷ‌ಕರಿಂದ ಗಾಳಿಯಲ್ಲಿ ಗುಂಡು
*ತಲವಾರು ದಾಳಿಗೆ ಮುಂದಾದ  ಗೋಸಾಗಾಟಗಾರರು
*ಗುಂಡೇಟು ಬಿದ್ದಿದೆ ಎಂದು ಓರ್ವ ಕೇರಳದಲ್ಲಿ ಆಸ್ಪತ್ರೆಗೆ ದಾಖಲು
*ಅರಣ್ಯ ರಕ್ಷಕರ ವಿರುದ್ಧ ದೂರು
ಸುಳ್ಯ: ಆಲೆಟ್ಟಿ ರಕ್ಷಿತಾರಣ್ಯದ ಕೂರ್ನಡ್ಕ ಪತ್ತುಕುಂಜದಲ್ಲಿ ಗಸ್ತು ನಿರತ ಅರಣ್ಯರಕ್ಷಕರ ಮೇಲೆ ಗೋಸಾಗಾಟ ನಿರತ ವಾಹನದಲ್ಲಿದ್ದವರು ತಲವಾರು ದಾಳಿ ನಡೆಸಲು ಮುಂದಾದ ಸಂದರ್ಭ ರಕ್ಷಣೆಗೆಂದು ಅರಣ್ಯ ರಕ್ಷಕರು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ. ಅರಣ್ಯ ರಕ್ಷಕರು ಹಾರಿಸಿದ ಗುಂಡಿನಿಂದ ಗಾಯ ಉಂಟಾಗಿದೆ ಎಂದು ಗೋಸಾಗಾಟ ಪಿಕಪ್‌ನಲ್ಲಿದ್ದ ಕರಿಕೆ ಮೂಲಕ ವ್ಯಕ್ತಿಯೋರ್ವ ಕೇರಳದ ಕಣ್ಣೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೇರಳದಲ್ಲಿ ಅರಣ್ಯ ರಕ್ಷಕರ ವಿರುದ್ಧ ದೂರು ದಾಖಲಿಸಲಾಗಿದೆ.  ಗೋ ಸಾಗಾಟದಾರರು ತಲವಾರಿನಿಂದ ದಾಳಿಗೆ ಮುಂದಾದ ಕುರಿತು ಅರಣ್ಯ ರಕ್ಷಕರು ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ

Advertisement

ಘಟನೆ ವಿವರ
ಕೇರಳ-ಕರ್ನಾಟಕದ ಗಡಿ ಭಾಗದ ಆಲೆಟ್ಟಿ ರಕ್ಷಿತಾರಣ್ಯದ ವ್ಯಾಪ್ತಿಯಿಂದ ಅಕ್ರಮವಾಗಿ ಬೀಟಿ ಮರ ಕದ್ದು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಅನ್ವಯ ಐದು ಮಂದಿ ಅರಣ್ಯ ರಕ್ಷಕರು ಗಸ್ತು ನಿರತರಾಗಿದ್ದರು. ಅದೇ ಪರಿಸರದಲ್ಲಿ ಕೃಷಿ ತೋಟಕ್ಕೆ ಆನೆ ಹಾವಳಿ ಇದ್ದ ಕಾರಣ, ಅರಣ್ಯಭಾಗದಲ್ಲಿ ರಾತ್ರಿಯಿಡಿ ಗಸ್ತು ಕಾಯುತ್ತಿದ್ದರು.
ರವಿವಾರ ಮುಂಜಾನೆ 3ರಿಂದ 4.30 ಗಂಟೆಯ ಹೊತ್ತಿನಲ್ಲಿ ಪಿಕಪ್‌ ವಾಹನವೊಂದು ಕೇರಳದ ಕಡೆಗೆ ತೆರಳುತ್ತಿತ್ತು. ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದು ಪರಾರಿಯಾಗಲು ಮುಂದಾಯಿತು. ಅರಣ್ಯ ರಕ್ಷಕರು ವಾಹನದಲ್ಲಿ ಹಿಂಬಾಲಿಸಿ, ಪತ್ತುಕುಂಜ ತಿರುವಿನಲ್ಲಿ ಓವರ್‌ಟೇಕ್‌ ಮಾಡಿದ್ದಾರೆ. ಆಗ ಪಿಕಪ್‌ನಿಂದ ಇಳಿದ ಕೆಲವರು ತಲವಾರು ಮೂಲಕ ದಾಳಿಗೆ ಮುಂದಾಗಿದ್ದರು.  ಆಗ ಅರಣ್ಯ ರಕ್ಷಕರು ಗಾಳಿಯಲ್ಲಿ ಗುಂಡು ಹಾರಿಸಿದಾಗ ಆರೋಪಿಗಳು  ಪರಾರಿಯಾಗಿದ್ದಾರೆ. ಪಿಕಪ್‌ನಲ್ಲಿ ಮೂರು ದನ, ತಲವಾರು, ದಾಳಿ ಮಾಡಲು ಇತರ ಪರಿಕರ ಗಳಿದ್ದವು  ಎಂದು ಅರಣ್ಯರಕ್ಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ದ.ಕ ಜಿಲ್ಲಾ ಮತ್ತು ಕೇರಳದ ಪೊಲೀಸರು ಆಗಮಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಕ್ಷುಲ್ಲಕ ವಿಷಯ: ಸಹಪಾಠಿಯಿಂದ 13ರ ಹರೆಯದ ಬಾಲಕನ ಕೊಲೆ
*ಬಂದ್ಯೋಡಿನ ಮದರಸದಲ್ಲಿ  ಘಟನೆ
ಕುಂಬಳೆ: ಉಪ್ಪಳ ಬಳಿಯ ಬಂದ್ಯೋಡು ಮುಟ್ಟಂನಲ್ಲಿ ಮದರಸ  ಕೇಂದ್ರದ ವಿದ್ಯಾರ್ಥಿಯೋರ್ವನನ್ನು ಸಹಪಾಠಿಯೇ ಕೊಲೆ ನಡೆಸಿದ ಆತಂಕಕಾರಿ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ. ಮಂಗಲ್ಪಾಡಿ ಅಡ್ಕಕೋಟೆ ರಸ್ತೆಯ ಯೂಸುಫ್‌  ಅವರ ಪುತ್ರ  ಮಹಮ್ಮದ್‌ ಮಿದ್‌ಲಾಜ್‌ (13)ನನ್ನು ಮದರಸ ಶಿಕ್ಷಣ ಕೇಂದ್ರದ ಅಪ್ರಾಪ್ತ  ವಯಸ್ಕ ಬಾಲಕನೇ ಕತ್ತರಿಯಿಂದ ಎದೆಗೆ ತಿವಿದು ಕೊಲೆ ಮಾಡಿದ್ದಾನೆ. ಆಟದ ಮಧ್ಯೆ ಪರಸ್ಪರ ತಂಡಗಳೊಳಗೆ ನಡೆದ ವಾಗ್ವಾದವೇ ಕೊಲೆಗೆ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ. ಕುಂಬಳೆ ಸಿ.ಐ.  ಪ್ರೇಂಸದನ್‌ ನೇತೃತ್ವದ ಪೊಲೀಸರು ಆಪಾದಿತನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಒಯ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಒಯ್ಯಲಾಗಿದೆ. ಮೃತ ಬಾಲಕನ ತಂದೆ ಇದೇ ಧಾರ್ಮಿಕ ಶಿಕ್ಷಣ ಕೇಂದ್ರದಲ್ಲಿ ಕ್ಯಾಂಟೀನ್‌ ನಡೆಸುತ್ತಿದ್ದಾರೆ.  ಆತ ತಾಯಿ ಹಲೀಮ, ಸಹೋದರಿ ಯರಾದ ಮಿಸ್ರಿಯ ಮತ್ತು ಮುಫೀದಾ ಅವರನ್ನು ಅಗಲಿದ್ದಾನೆ.

ನಿಧಾನ ಚಾಲನೆ: ಬಸ್‌ ಚಾಲಕನಿಗೆ  ಪ್ರಯಾಣಿಕನಿಂದ  ತರಾಟೆ
ಪೊಲೀಸರ ಮಧ್ಯ ಪ್ರವೇಶ, ಕಸ್ಟಡಿಗೆ
ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ  ವೇಗದೂತ ಬಸ್‌ ನಿಧಾನವಾಗಿ ಚಲಿಸಿತೆಂದು ಪ್ರಯಾಣಿಕನೋರ್ವ ಉಪ್ಪಿನಂಗಡಿ ಯಲ್ಲಿ  ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆ ಯಲು ಪೊಲೀ ಸರು ಲಾಠಿ ಪ್ರಯೋಗಿಸಿದರು. ಬಳಿಕ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡ ಘಟನೆ ಉಪ್ಪಿನಂಗಡಿಯ ಬಸ್‌ ನಿಲ್ದಾ ಣದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಮಂಗಳೂರು ಕಡೆಯಿಂದ ಬಂದ ಕೆಎ 21 ಎಫ್‌ 0049 ನೋಂದಣಿ ಸಂಖ್ಯೆಯ ಬಸ್ಸಿನಲ್ಲಿ ಕೊಯಿಲದ ಶಫೀಕ್‌  ಪ್ರಯಾಣಿಸಿದ್ದ. ಬಸ್‌ ತುಂಬಾ ನಿಧಾನವಾಗಿ ಬಂದಿದೆ ಎಂದು ಆರೋ ಪಿಸಿ ಆತ ಉಪ್ಪಿನಂಗಡಿಯಲ್ಲಿ  ಚಾಲಕ ನನ್ನು ತರಾಟೆಗೆ ತೆಗೆದುಕೊಂಡ.  ಚಾಲಕ ಸುರೇಶ್‌ ಕೂಡ ಈತನಿಗೆ ಏರು ದನಿಯಲ್ಲೇ ಪ್ರತ್ಯುತ್ತರ ನೀಡಿದ್ದು, ಸುಮಾರು 15 ನಿಮಿಷಗಳ ಕಾಲ ಇಬ್ಬರೊಳಗೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಶಫೀಕ್‌ ಮೊಬೈಲ್‌ನಲ್ಲಿ ಬಸ್‌ ಚಾಲಕನ  ಫೋಟೋ ಕ್ಲಿಕ್ಕಿಸಿದ್ದು, ಇದರಿಂದ ತೀವ್ರ ಆಕ್ರೋಶಿತನಾದ ಚಾಲಕ  ಬಸ್ಸಿನಿಂದಿಳಿದು ಶಫೀಕ್‌ ಮೇಲೆ ಹಲ್ಲೆಗೆ ಮುಂದಾದ. ಆಗ ಪೊಲೀಸರು ಬಂದು  ಇಬ್ಬ ರನ್ನೂ ಠಾಣೆಗೆ ಕರೆದೊಯ್ದರು.  ಸೇರಿದ್ದ ದೊಡ್ಡ ಸಂಖ್ಯೆಯ ಜನರನ್ನು ಪೊಲೀಸರು ಚದುರಿಸಿದರು. 

ಪುಣಚ : ಅಕ್ರಮ ದನ ಸಾಗಾಟ;  ಇಬ್ಬರ ವಶ

Advertisement


 ವಿಟ್ಲ :
ಪುಣಚ ಗ್ರಾಮದಲ್ಲಿ ಕೇರಳಕ್ಕೆ ಅಕ್ರಮವಾಗಿ ದನಗಳನ್ನು  ಸಾಗಾಟ ಮಾಡುತ್ತಿದ್ದ ತಂಡವನ್ನು ರವಿವಾರ ಪತ್ತೆ ಹಚ್ಚಿದ ವಿಟ್ಲ ಪೊಲೀಸರು ಎರಡು ದನ, ವಾಹನ ಹಾಗೂ ಇಬ್ಬರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. 
ಕೇರಳದ ಉಪ್ಪಳ ನಿವಾಸಿ ಅಬೂಬಕ್ಕರ್‌ (52) ಹಾಗೂ ರಾಜ್‌ಕುಮಾರ್‌ (40) ಬಂಧಿತರು. ಇವರು  ಪುಣಚ ಗ್ರಾಮದ ಚಂದಳಿಕೆ-ಮಾಡತ್ತಡ್ಕ ರಸ್ತೆಯ ಕಂಬಳಿ ಮೂಲೆಯಲ್ಲಿ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ 2 ದನಗಳನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ವಿಟ್ಲ ಠಾಣಾಧಿಕಾರಿ ಎಚ್‌.ಈ.ನಾಗರಾಜ್‌ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕೇರಳ ನೋಂದಣಿ  ಹೊಂದಿರುವ ವಾಹನ ಮತ್ತು ದನಗಳ ಒಟ್ಟು ಮೌಲ್ಯ 2.50 ಲ.ರೂ. ಎಂದು ಅಂದಾಜಿಸಲಾಗಿದೆ.

ಕೊಡ್ಲಾಡಿ : ತೋಟದಲ್ಲಿ ಜಾನುವಾರು  ಅವಶೇಷ ಪತ್ತೆ

 ಸಿದ್ದಾಪುರ:
ಕೊಡ್ಲಾಡಿ ಗ್ರಾಮದ ಮೆಲದ್ಯಾಸ ಬಳಿ ಮನೆಯ ಸಮೀಪದ ಅಡಿಕೆ ತೋಟದಲ್ಲಿ ಗೋವುಗಳ   ರುಂಡ, ಕೈ, ಕಾಲು ಇನ್ನಿತರ ಅಂಗಾಂಗಗಳು ಪತ್ತೆಯಾಗಿವೆ. ಈ ಸಂಬಂಧ ಶಂಕರ ನಾರಾಯಣ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಹಲವು ದಿನಗಳಿಂದ ಮೇವಿಗೆಂದು ಬಿಟ್ಟ ಕೊಡ್ಲಾಡಿ ಗ್ರಾಮದ ಆಸುಪಾಸಿನ ಅನೇಕ ಹಸುಗಳು ವಾಪಸ್‌ ಬರದೆ ಇದ್ದ ಕಾರಣ ಸ್ಥಳೀಯರಲ್ಲಿ ಸಂಶಯ ಮೂಡಿದ್ದು, ಹುಡುಕಾಟ ನಡೆಸಿದ ಸಂದರ್ಭದಲ್ಲಿ ಮೆಲದ್ಯಾಸ ಅಡಿಕೆ ಕೃಷಿ ತೋಟದ ಬಳಿ ಮಣ್ಣಿನಡಿ ಹುದುಗಿಟ್ಟಿದ್ದ ರೀತಿಯಲ್ಲಿ ಜಾನು ವಾರುಗಳ ಅವಶೇಷಗಳು ಪತ್ತೆಯಾಗಿವೆ.ಅವಶೇಷಗಳಿದ್ದ ಅಡಿಕೆ ಕೃಷಿ ಪ್ರದೇಶದಲ್ಲಿ ವಾಸನೆ ಹಬ್ಬಿದ್ದು, ಅವುಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಶ್ವಾನಕ್ಕೂ ಆಹಾರವಾಗಿವೆ.4 ಗಂಡು ಕರು  ಸಮೀಪದಲ್ಲಿ ನಾಲ್ಕು ಗಂಡು ಕರುಗಳನ್ನು ಅಕ್ರಮವಾಗಿ ಕಟ್ಟಿ ಹಾಕಿರುವುದು ಕೂಡ ಪತ್ತೆಯಾಗಿದೆ. ಅವುಗಳನ್ನು ರಕ್ಷಿಸಿರುವ ಶಂಕರ ನಾರಾಯಣ ಪೊಲೀಸರು ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ ಎನ್ನಲಾಗಿದೆ.

ಬಾಲಕಿ ಮೇಲೆ ಅತ್ಯಾಚಾರ
ವೇಣೂರು:
ಅಪ್ರಾಪ್ತ ವಯಸ್ಕ ಬಾಲಕಿಯ  ಮೇಲೆ ಯುವಕನೋರ್ವನು ನಿರಂತರವಾಗಿ ಅತ್ಯಾಚಾರಗೈದ ಪ್ರಕರಣ ಬೆಳ್ತಂಗಡಿ ತಾಲೂಕಿನ ವೇಣೂರು  ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಪ್ರಸ್ತುತ 15ರ ಹರೆಯದ ಬಾಲಕಿ  4 ತಿಂಗಳ ಗರ್ಭಿಣಿಯಾಗಿದ್ದು, ಈ ಸಂಬಂಧ ರವಿವಾರ  ಪೋಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
“ಕಾಶಿ ಪಟ್ಣ ನಿವಾಸಿ ಸತೀಶ್‌ ಯಾನೆ ಶಶಿ (25)  ನನಗೆ ಅಜ್ಜಿಮನೆಯಲ್ಲಿ ಪರಿಚಯವಾಗಿದ್ದ.  ನನ್ನ ತಾಯಿಯ ಮೊಬೈಲ್‌ ನಂಬರ್‌ ಪಡೆದು ಕರೆ ಮಾಡಿ ಪ್ರತಿದಿನ ಮಾತನಾಡುತ್ತಿದ್ದ. ಹೀಗೆ ನನ್ನಲ್ಲಿ ಸಲುಗೆ ಇಟ್ಟುಕೊಂಡಿದ್ದ ಆತ  ಜನವರಿಯಲ್ಲಿ ಗುಡ್ಡಕ್ಕೆ ಕರೆದು ಬಲಾತ್ಕಾರವಾಗಿ ಅಪ್ಪಿಹಿಡಿದು  ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆ ಬಳಿಕವೂ ಮೊಬೈಲ್‌ ಕರೆ ಮಾಡಿ ಮಾತನಾಡುತ್ತಿದ್ದ.  ಆತ  ಹಲವು ಬಾರಿ ನನ್ನನ್ನು  ದೈಹಿಕವಾಗಿ ಬಳಸಿಕೊಂಡಿದ್ದಾನೆ’ ಎಂದು ಬಾಲಕಿ  ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾಳೆ.  ಬಾಲಕಿಯ ದೇಹ ಸ್ಥಿ ತಿ ಯಲ್ಲಿ ಬದ ಲಾ ವಣೆ ಕಂಡು ಆಕೆಯ ಮಾವ  ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.  ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಕೋಲ್ಪೆ ಬಳಿ ಕೆರೆಯಲ್ಲಿ ಶವ ಪತ್ತೆ: ಅಸಹಜ ಸಾವಿನ ಶಂಕೆ

ನೆಲ್ಯಾಡಿ:
 ಕೋಲ್ಪೆಯಲ್ಲಿ 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಗೋವಿಂದರಾಜ್‌  ಅವರ ಮೃತದೇಹ ಸಮೀಪದ ಖಾಸಗಿ ವ್ಯಕ್ತಿಯೊಬ್ಬರ ಕೆರೆಯಲ್ಲಿ  ರವಿವಾರ ಬೆಳಗ್ಗೆ ಪತ್ತೆಯಾಗಿದೆ. ಗೋವಿಂದರಾಜ್‌  ಹಾಸನ ಮೂಲದವರಾಗಿದ್ದು, ಕೋಲ್ಪೆಯಲ್ಲಿ  ಪತ್ನಿಯೊಂದಿಗೆ 3 ಸೆಂಟ್ಸ್‌ ಮನೆಯಲ್ಲಿ15 ವರ್ಷಗಳಿಂದ ವಾಸವಾಗಿದ್ದರು.  ಪತ್ನಿ ಸುಶೀಲಾ ಅವರು ಎಂದಿನಂತೆ ಆ. 2ರಂದು ರಬ್ಬರ್‌  ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದು, ಸಂಜೆ  ಮನೆಗೆ  ಬಂದಾಗ ಪತಿ  ನಾಪತ್ತೆಯಾಗಿದ್ದರು. ಆ.3ರಂದು ಅವರು ನಾಪತ್ತೆ ದೂರು ದಾಖಲಿಸಲು ಠಾಣೆಗೆ ಹೋಗಿದ್ದು, ಸಂಜೆಯವರೆಗೂ ಬಾರದೆ ಇದ್ದಲ್ಲಿ ದೂರು ದಾಖಲಿಸಿ ಎಂದು ಪೊಲೀ ಸರು ಹೇಳಿದ ಹಿನ್ನೆಲೆಯಲ್ಲಿ ವಾಪಸ್‌ ಬಂದಿ ದ್ದರು. ಬಳಿಕ ಅವರು ಠಾಣೆಗೆ ಹೋಗಿಲ್ಲ. ಈ ನಡುವೆ ಗ್ರಾಮ ಸ್ಥರು  ಹುಡುಕಾಟ ನಡೆಸುತ್ತಿದ್ದರು.  
ರವಿವಾರ ಬೆಳಗ್ಗಿನ  ಜಾವ ಸಮೀಪದ ಅಬ್ಬು ಅವರ ತೋಟದ ಕೆರೆಯಲ್ಲಿ ಶವ ತೇಲುತ್ತಿದೆ ಎಂಬ ಮಾಹಿತಿ ತಿಳಿದು ಪರಿಶೀಲಿಸಿದಾಗ  ಅದು ಗೋವಿಂದರಾಜ್‌ ಮೃತದೇಹವಾಗಿತ್ತು. ಮೂರು ದಿನಗಳ ಹಿಂದೆ ಪಕ್ಕದ ಮನೆಯವರು ತಮ್ಮ ಕೋಳಿಗೆ ವಿಷವಿಕ್ಕಿ ಸಾಯಿಸಿದ್ದಾರೆ ಎಂದು ಆರೋಪಿಸಿ ಗೋವಿಂದರಾಜ್‌  ಅವರ ಮನೆಗೆ ಬಂದು ಜಗಳವಾಡಿದ್ದರು ಎಂದು ತಿಳಿದು ಬಂದಿದೆ. ಸುಶೀಲಾ ಅವರು  ಸಾವಿನ  ಬಗ್ಗೆ ಸಂಶಯ  ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೇರಳೆಕಟ್ಟೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ  ಅಂತ್ಯಕ್ರಿಯೆ ನಡೆಸಲಾಗಿದೆ.  

ನಾಪತ್ತೆಯಾಗಿದ್ದ ಶಂಕರಪುರದ ಶಿಕ್ಷಕಿ  ಬೆಂಗಳೂರಿನಲ್ಲಿ ಪತ್ತೆ: ಪೋಷಕರ ವಶಕ್ಕೆ
ಕಾಪು:
ಶಂಕರಪುರದ ಶಾಲೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವೀಣಾ ಆಚಾರ್ಯ ಅವರು  ಜು. 27ರಂದು ನಾಪತ್ತೆಯಾಗಿದ್ದು, ಅವರನ್ನು ಕಾಪು ಠಾಣಾಧಿಕಾರಿ ನಿತ್ಯಾನಂದ ಗೌಡ ಹಾಗೂ ಸಿಬಂದಿ ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ.  ಅವರನ್ನು ಕಾಪುವಿಗೆ ಕರೆ ತರಲಾಗಿದ್ದು, ಉಡುಪಿಯಲ್ಲಿ ಪೊಲೀಸ್‌ ಅಧೀಕ್ಷಕರ ಮುಂದೆ ಹಾಜರುಪಡಿಸಲಾಗಿದೆ. ಆಕೆಯ ಅಪೇಕ್ಷೆಯಂತೆ  ಪೋಷಕರೊಂದಿಗೆ ತೆರಳಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next