Advertisement

ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

01:15 AM Dec 26, 2018 | Team Udayavani |

ಉಡುಪಿ: ಯೇಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್‌ ಹಬ್ಬವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಭಕ್ತಿ, ಶ್ರದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು. ಸೋಮವಾರ ರಾತ್ರಿ ಜಿಲ್ಲೆಯ ಕೆಥೊಲಿಕ್‌, ಪ್ರೊಟೆಸ್ಟೆಂಟ್‌, ಸೀರಿಯನ್‌, ಮಲಂಕರ ಹೀಗೆ ವಿವಿಧ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್‌ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೊ ಅವರು ನೆರವೇರಿಸಿ ಹಬ್ಬದ ಸಂದೇಶವನ್ನು ನೀಡಿದರು.

Advertisement

ಸೀರಿಯನ್‌ ಕ್ರೈಸ್ತರ ಬ್ರಹ್ಮಾವರದ ಕೆಥೆಡ್ರಲ್‌ನಲ್ಲಿ ವಿಶೇಷ ಪೂಜೆಗಳು ನಡೆದವು. ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಇಡೀ ಜಿಲ್ಲೆಯ ಚರ್ಚುಗಳು ವರ್ಣಮಯ ವಿದ್ಯುತ್‌ ದೀಪಾಲಂಕಾರ ಹಾಗೂ ಬಗೆ ಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಉಡುಪಿ ಜಿಲ್ಲೆಯ ಪ್ರಮುಖ ಚರ್ಚ್‌ಗಳಲ್ಲಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಕಂಡುಬಂದರು. ಸೋಮವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವುದರ ಮೂಲಕ ಯೇಸು ಸ್ವಾಮಿಯ ಜನನವನ್ನು ಕ್ರೈಸ್ತರು ಸ್ವಾಗತಿಸಿದರು.

ಹಬ್ಬದ ಅಂಗವಾಗಿ ಚರ್ಚುಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್‌ ವೇಷ, ಭಕ್ತರಿಗೆ ಕ್ರಿಸ್ಮಸ್‌ ಕೇಕ್‌ ವಿತರಣೆ ಕೂಡ ನಡೆಯಿತು.
ಬಲಿಪೂಜೆಯ ಬಳಿಕ ಕ್ರೈಸ್ತರು ಪರಸ್ಪರ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಂಗಳವಾರ ಬೆಳಗ್ಗೆ ಚರ್ಚ್‌ಗಳ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಸವಿದರು.

Advertisement

Udayavani is now on Telegram. Click here to join our channel and stay updated with the latest news.

Next