Advertisement

ಜಿಲ್ಲೆಯ ವಿವಿಧೆಡೆ ಸಂಭ್ರಮದ ಕ್ರಿಸ್ಮಸ್‌ ಆಚರಣೆ

02:35 AM Dec 26, 2018 | Team Udayavani |

ಪೆರ್ಮುದೆ: ಪ್ರೀತಿ, ತ್ಯಾಗ, ಸೇವೆಯ ಸಂದೇಶವನ್ನು ಭೂಲೋಕದಲ್ಲಿ ಸಾರಿದ ದೇವಪುತ್ರ ಯೇಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್‌ ಹಬ್ಬವನ್ನು ಪೆರ್ಮುದೆ ಸೈಂಟ್‌ ಲಾರೆನ್ಸ್‌ ಇಗರ್ಜಿಯಲ್ಲಿ ಸಡಗರದೊಂದಿಗೆ ಆಚರಿಸಲಾಯಿತು. ಸೋಮವಾರ ರಾತ್ರಿ ಇಗರ್ಜಿಯ ಅಂಗಣದ ತೆರೆದ ವೇದಿಕೆಯಲ್ಲಿ ನಡೆದ ಸಂಭ್ರಮದ ದಿವ್ಯಬಲಿಪೂಜೆಯಲ್ಲಿ ವಂ| ಪ್ರತೀಕ್‌ ಪಿರೇರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಗರ್ಜಿಯ ಧರ್ಮಗುರು ವಂ| ಮೆಲ್ವಿನ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು. ಕ್ರಿಸ್ಮಸ್‌ ಹಬ್ಬದ ಅಂಗವಾಗಿ ಕ್ಯಾರೋಲ್ಸ್‌ ಗಾಯನ ನಡೆಯಿತು. ದಿವ್ಯಬಲಿಪೂಜೆ ಸಂದರ್ಭದಲ್ಲಿ ಬಾಲಯೇಸುವನ್ನು ನಮಿಸಿ ಭಕ್ತರು ಕಾಣಿಕೆಗಳನ್ನು ಅರ್ಪಿಸಿದರು. 

Advertisement

ಐಸಿವೈಎಂ ನೇತೃತ್ವದಲ್ಲಿ ಇಗರ್ಜಿ ಸಮೀಪ ಗೋದಲಿ ನಿರ್ಮಿಸಲಾಗಿದ್ದು, ಕ್ರೈಸ್ತರ ಸಹಿತ ಇತರ ಬಾಂಧವರು ಗೋದಲಿ ಯನ್ನು ವೀಕ್ಷಿಸಿದರು. ಪೆರ್ಮುದೆ ಸೈಂಟ್‌ ಲಾರೆನ್ಸ್‌ ದಿ ಮಾರ್ಟಿರ್‌ ಇಗರ್ಜಿಯ ನೂತನ ಕಟ್ಟಡದ ನಿರ್ಮಾಣಕ್ಕಾಗಿ ತಯಾರಿಸಲಾದ ಲಕ್ಕಿಡಿಪ್‌ ಕೂಪನ್‌ನ್ನು ಇಗರ್ಜಿಯ ಪಾಲನ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್‌ ಡಿ’ಸೋಜಾ ಪುರುಷಮಜಲು ಅವರಿಗೆ ನೀಡುವುದರ ಮೂಲಕ ವಂ| ಪ್ರತೀಕ್‌ ಪಿರೇರಾ ಬಿಡುಗಡೆಗೊಳಿಸಿದರು. ಪಾಲನ ಸಮಿತಿ ಕಾರ್ಯದರ್ಶಿ ಜೋನ್‌ ಡಿ’ಸೋಜಾ ಚನ್ನಿಕೋಡಿ, ಗುರಿಕ್ಕಾರ ವಿನ್ಸೆಂಟ್‌ ಮೊಂತೆರೋ ಪೆರಿಯಡ್ಕ, ಸಂತೋಷ್‌ ಮೊಂತೆರೊ ಉಪಸ್ಥಿತರಿದ್ದರು. ಮಂಗಳವಾರ ಬೆಳಗ್ಗೆ  ಕ್ರಿಸ್ಮಸ್‌ ಸಂಭ್ರಮಾರ್ಥ ದಿವ್ಯಬಲಿಪೂಜೆ ನಡೆಯಿತು.


ಕಯ್ಯಾರು ಕ್ರಿಸ್ತ ರಾಜ ದೇವಾಲಯ

ಯೇಸು ಕ್ರಿಸ್ತರ ಜನನದ ಹಬ್ಬವಾದ ಕ್ರಿಸ್ಮಸ್‌ನ್ನು  ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ರಾತ್ರಿ ಕ್ರೈಸ್ತರು ಜಾಗರಣೆಯ ರಾತ್ರಿಯನ್ನು ಆಚರಿಸಿದರು. ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ  ನಡೆದ ಬಲಿಪೂಜೆಯನ್ನು ರಾಂಚಿ ಅಲ್ಬರ್ಟ್ಸ್ ಕಾಲೇಜಿನ ಅಧ್ಯಕ್ಷ  ಫಾದರ್‌ ಜೋನ್‌ ಕ್ರಾಸ್ತ ನೆರವೇರಿಸಿದರು. ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಧರ್ಮಗುರು ಫಾದರ್‌ ವಿಕ್ಟರ್‌ ಡಿ’ಸೋಜಾ ಸಂದೇಶ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕ್ರಿಸ್ಮಸ್‌ ಅಂಗವಾಗಿ ಆಕರ್ಷಕ ಗೋದಲಿ, ನಕ್ಷತ್ರ ಹಾಗೂ ದೀಪಾಲಂಕಾರ ಮನಸೆಳೆಯುತ್ತಿತ್ತು.


ಶುಭಾಶಯ ವಿನಿಮಯ

ಬಲಿಪೂಜೆ ಬಳಿಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕ್ಯಾರೋಲ್‌ಗ‌ಳನ್ನು ಹಾಡುವ ಮೂಲಕ ಯೇಸುಕ್ರಿಸ್ತರ  ಜನನ ದಿನವನ್ನು ಸ್ಮರಿಸಿದರು. ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಯಲ್ಲಿ ಅಪಾರ ಸಂಖ್ಯೆಯಲ್ಲಿ  ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next