Advertisement

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

03:49 PM Dec 21, 2024 | Team Udayavani |

ಜಗತ್ತಿಗೆ ಶಾಂತಿ ಮಂತ್ರ ಸಾರಿದ ಯೇಸುಕ್ರಿಸ್ತ ಜನನದ ಹಬ್ಬವಾದ ಕ್ರಿಸ್ಮಸ್‌ ಜಾಗತಿಕವಾಗಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಕ್ರೈಸ್ತರಿಗೆ ಕ್ರಿಸ್ಮಸ್‌ ಮಹತ್ವದ ಹಬ್ಬವೂ ಹೌದು. ಹಾಗೆಯೇ ಕ್ರೈಸ್ತರ ಬಹುಳ್ಯ ಇರುವ ಗಲ್ಫ್ ರಾಷ್ಟ್ರಗಳಲ್ಲಿ ಕ್ರಿಸ್ಮಸ್‌ನ ಸಡಗರ ಕಂಡುಬರುತ್ತಿದೆ. ಅರಬ್‌ ರಾಷ್ಟ್ರಗಳಲ್ಲೂ ಕರಾವಳಿ ಭಾಗದ ಕ್ರೈಸ್ತರು ಆಚರಣೆಯಲ್ಲಿ ಭಾಗಿಗಳಾಗುತ್ತಿದ್ದಾರೆ.

Advertisement

ಕೆಲವು ರಾಷ್ಟ್ರಗಳ ಆಚರಣೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಬಹುತೇಕ ಏಕರೂಪದ ಸಂಭ್ರಮ ಕಾಣಬಹುದು. ಶಾಂತಿ ದೂತನ ಜನನದ ಹಬ್ಬದ ಸಂಭ್ರಮದಲ್ಲಿ ಜಗತ್ತು ಮಿಂದೆದ್ದಿದೆ. ವಿಶ್ವವೇ ಜಗಮಗಿಸುತ್ತಿದೆ. ಕ್ರಿಸ್ತನ ಹುಟ್ಟೂರು ಬೆತ್ಲೆಹೇಮ್‌ಗೆ ಪಾದಯಾತ್ರೆ ಇಸ್ರೇಲ್‌ನ ಬೆತ್ಲೆಹೇಮ್‌ನಲ್ಲಿ 2000 ವರ್ಷದ ಹಿಂದ ಯೇಸುಕ್ರಿಸ್ತರ ಜನನವಾಯಿತು ಎನ್ನುತ್ತದೆ ಪವಿತ್ರ ಬೈಬಲ್‌. ಕ್ರಿಸ್ತ ಜನನ ಕಾಲದಲ್ಲಿ ಇದ್ದ ಕೊರೆಯುವ ಚಳಿಯ ವಾತಾವರಣ ಇಂದಿಗೂ ಮುಂದುವರೆದಿದೆ.

ಯಹೂದಿಗಳ ಬಹುಳ್ಯ ಇರುವ ದೇಶ ಇಸ್ರೇಲ್‌ನಲ್ಲಿ ಅವರ ಸಹಕಾರದೊಂದಿಗೆ ಕ್ರಿಸ್ಮಸ್‌ ಆಚರಣೆ ನಡೆಸಲಾಗುತ್ತದೆ. ಯುದ್ಧದ ಕಾರ್ಮೋಡದ ನಡುವೆಯೂ ಕ್ರಿಸ್ಮಸ್‌ ಆಚರಿಸಲಾಗುತ್ತದೆ. ವಿವಿಧ ಭಾಗಗಳಲ್ಲಿರುವವರು ಬೆತ್ಲೆಹೆಮ್‌ಗೆ ಶಾಂತಿ ಮೆರವಣಿಗೆ, ಪಾದಯಾತ್ರೆ ನಡೆಸುತ್ತಾರೆ.

ಟೆಲ್‌ಅವಿವ್‌, ಜೆರುಸಲೆಂ ಹಾಗೂ ಹೈಫ್‌ನಲ್ಲಿ ಮೂರು ಕೊಂಕಣಿ ಭಾಷೆಯಲ್ಲಿ ಬಲಿಪೂಜೆಗಳು ನಡೆಯುತ್ತವೆ. ವಿವಿಧೆಡೆ ಹರಡಿಕೊಂಡಿರುವ ಕರಾವಳಿಯ ಕ್ರೈಸ್ತರು ಈ ಮೂರು ಚರ್ಚ್‌ಗಳಿಗೆ ತೆರಳಿ ಬಲಿಪೂಜೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಗೋದಲಿ ನಿರ್ಮಾಣ, ಕ್ಯಾರಲ್‌ ಗಾಯನವನ್ನು ಕರಾವಳಿ ಭಾಗದವರು ಜತೆಯಾಗಿ ಆಚರಿಸುತ್ತಾರೆ. ಕ್ರಿಸ್ಮಸ್‌ನ ವಿಶೇಷ ತಿನಿಸುಗಳನ್ನು ತಯಾರಿಸಿ ವಿತರಿಸಲಾಗುತ್ತದೆ.

Advertisement

ಯುರೋಪ್‌ ದೇಶಗಳಲ್ಲಿ 2 ತಿಂಗಳ ಕಾಲ ಸಂಭ್ರಮ
ಯುರೋಪ್‌ನ ದೇಶಗಳಾದ ಯುಕೆ, ಜರ್ಮನಿಗಳಲ್ಲಿ ವಿಶಿಷ್ಟ ಆಚರಣೆ ಗಮನಿಸಬಹುದು. ನವೆಂಬರ್‌ ತಿಂಗಳಲ್ಲೇ ಕ್ರಿಸ್ಮಸ್‌ ಸಂಭ್ರಮ ಆರಂಭವಾಗುತ್ತದೆ. ಲಂಡನ್‌, ಇಡನ್‌ ಬರ್ಗ್‌, ಮ್ಯಾಂಚೇಸ್ಟರ್‌ಗಳಲ್ಲಿ ಕ್ರಿಸ್ಮಸ್‌ ಹಬ್ಬದ ಮಾರುಕಟ್ಟೆಗಳು ತೆರೆದುಕೊಳ್ಳುತ್ತವೆ. ಹಬ್ಬದ ದಿನಗಳಲ್ಲಿ ಸಂಭ್ರಮ ಸಡಗರ ಕಾಣಬಹುದು.

ಜರ್ಮನಿಯಲ್ಲಿ ಕ್ರಿಸ್ತ ಆಗಮನದ ಕಾಲ ಆಚರಿಸುವ ಜತೆ ವಿಶೇಷವಾಗಿ ಕ್ಯಾಂಡಲ್‌, ರೀದ್‌ಗಳನ್ನು ಬಳಸಲಾಗುತ್ತದೆ. ಕ್ರಿಸ್ಮಸ್‌ ವಿಶೇಷ ಪ್ರಾರ್ಥನೆಯೊಂದಿಗೆ ಉಡುಗೊರೆ ನೀಡುವ ಸಂಪ್ರದಾಯವಿದೆ. ಜತೆಗೆ ಪಾಟಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ಕಾಣಬಹುದು. ಲಂಡನ್‌ ಬ್ರಿಡ್ಜ್ನ ಸೌತ್‌ವಾಕ್‌ ಕ್ಯಾಥೇಡ್ರಲ್‌, ಸಂತ ಮಾರ್ಟಿನ್‌, ಹೋಲಿ ಟ್ರಿನಿಟಿ, ಸಂತ ಪೌಲ್ಸ್‌ ಕ್ಯಾಥೇಡ್ರಲ್‌ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಜಾಗರಣೆ ಕಾಣಬಹುದು.

ಇಟಲಿ, ಆಸ್ಟ್ರಿಯಾ ಸೇರಿದಂತೆ ಇತರೆ ಯುರೋಪಿಯನ್‌ ದೇಶಗಳಲ್ಲೂ ಕ್ರಿಸ್ತ ಜನನದ ಜಾಗರಣೆಯೊಂದಿಗೆ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಬಳಿಕ ಹಬ್ಬದ ಸಹಭೋಜನ ಇರುತ್ತದೆ. ಕ್ರೈಸ್ತರು ಪರಸ್ಪರ ಉಡುಗೊರೆಗಳನ್ನು ಹಂಚಿಕೊಳ್ಳುತ್ತಾರೆ.

ಕುವೈಟ್‌ನ ಹೋಲಿ ಫ್ಯಾಮಿಲಿ ಕ್ಯಾಥೇಡ್ರಲ್‌ನಲ್ಲಿ ಜಾಗರಣೆ
ಕರಾವಳಿ ಮೂಲದ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುವೈಟ್‌ನಲ್ಲೂ ಉದ್ಯೋಗದಲ್ಲಿದ್ದು, ಕ್ರಿಸ್ಮಸ್‌ ಸಂಭ್ರಮದ ಬಗ್ಗೆ ಮಂಗಳೂರು ಮೂಲದ ಕುವೈಟ್‌ ಉದ್ಯೋಗಿ ಯೌಜಾನ್‌ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕುವೈಟ್‌ ಸಿಟಿಯಲ್ಲಿರುವ ಹೋಲಿ ಫ್ಯಾಮಿಲಿ ಕ್ಯಾಥೆಡ್ರಲ್‌ನಲ್ಲಿ ಕ್ರಿಸ್ಮಸ್‌ ಈವ್‌ ಸಂಭ್ರಮದಿಂದ ಆಚರಿಸಲಾಗುತ್ತದೆ. ಡಿ. 24ರಂದು ರಾತ್ರಿ ಬಲಿಪೂಜೆಗಳು ಇರುತ್ತದೆ.

ಕೊಂಕಣಿ, ಮಲಯಾಳ, ತಮಿಳು, ಕನ್ನಡ, ಹಿಂದಿ ಆಂಗ್ಲ ಭಾಷೆಗಳಲ್ಲಿ ವಿವಿಧ ಸಮಯದಲ್ಲಿ ಬಲಿಪೂಜೆಗಳು ನಡೆಯತ್ತವೆ. ಸಾವಿರಾರು ಕ್ರೈಸ್ತರು ಬಲಿಪೂಜೆಗಳಲ್ಲಿ ಭಾಗಿಗಳಾಗುತ್ತಾರೆ. ಡಿ. 25ರಂದು ಕೂಡ ದಿನವಿಡೀ ಬಲಿಪೂಜೆಗಳು ನಡೆಯುತ್ತವೆ. ಕ್ರಿಸ್ಮಸ್‌ ಟ್ರಿ ಅಲಂಕಾರ, ಗೋದಲಿ ರಚನೆ, ಕೇಕ್‌ ವಿತರಣೆ ಮಾಮೂಲಿಯಾಗಿದೆ. ಉಳಿದಂತೆ ಸಾಲ್ಮಿಯಾದ ಸಂತ ತೆರೆಸಾ ಚರ್ಚ್‌, ಅಹಮದಿಯಾದ ಲೇಡಿ ಆಫ್‌ ಅರೆಬಿಯಾ, ಅಬಾಸಿಯಾದ ಡೇನಿಯಲ್‌ ಕಾಂಬೊನಿ ಚರ್ಚ್‌ಗಳಲ್ಲಿ ಕೊಂಕಣಿ ಬಲಿ ಪೂಜೆಗಳು ನಡೆಯುತ್ತವೆ.

ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಒಳಾಂಗಣದಲ್ಲಿ ಕ್ಯಾರಲ್ಸ್‌ ಗಾಯನ ಸೇರಿದಂತೆ ವಿವಿಧ ಮಾನೋರಂಜನ ಕಾರ್ಯಕ್ರಮ, ಕ್ಯಾರಲ್ಸ್‌ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಗುತ್ತದೆ. ಸಾಂತಕ್ಲಾಸ್‌ ಮೂಲಕ ಮನೋರಂಜನೆ ನೀಡುವ ಕೆಲಸವಾಗುತ್ತವೆ.

ದುಬಾೖಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ
ವಿದೇಶಿ ಉದ್ಯೋಗ ಎಂದಾಕ್ಷಣ ಎಲ್ಲರೂ ಮೊದಲು ನೆನಪಿಸುವ ಅರಬ್‌ ದೇಶವೇ ದುಬಾೖ. ದುಬಾೖಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರಿದ್ದಾರೆ. ಬಹು ಸಾಂಸ್ಕೃತಿಕ ಆಚರಣೆಗೆ ಅವಕಾಶವಿದ್ದು, ಅನೇಕ ವರ್ಷದಿಂದ ದುಬಾೖಯಲ್ಲಿ ಕ್ರಿಸ್ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಕರಮಾದ ಉದ್‌ ಮೆಹೆತಾದಲ್ಲಿರುವ ಸಂತ ಮೇರೀಸ್‌ ಚರ್ಚ್‌, ಜಬ್‌ಲಾಲಿಯಲ್ಲಿರುವ ಸಂತ ಫ್ರಾನ್ಸಿಸ್‌ ಅಸ್ಸಿಸ್‌ ಚರ್ಚ್‌, ಶಾರ್ಜಾದ ಸಂತ ಮೈಕಲ್‌ ಚರ್ಚ್‌ಗಳಲ್ಲಿ ಸಂಭ್ರಮ ಸಡಗರದಿಂದ ಹಬ್ಬ ಆಚರಿಸಲಾಗುತ್ತದೆ. ಡಿ. 24ರಂದು ರಾತ್ರಿ ಹಾಗೂ ಕ್ರಿಸ್ಮಸ್‌ ದಿನದಂದು ಬಲಿಪೂಜೆಗಳು ನಡೆಯುತ್ತವೆ. ಉಳಿದಂತೆ ಮನೋರಂಜನ ಕಾರ್ಯಕ್ರಮಗಳು ಹಾಗೂ ಕ್ರಿಸ್ತ ಜನನದ ಸಂದೇಶ ಸಾರುವ ಕಾರ್ಯಕ್ರಮಗಳು ಡಿ. 20ಕ್ಕೆ ಕೊನೆಗೊಳ್ಳುತ್ತವೆ. ಕ್ರಿಸ್ಮಸ್‌ ದಿನದಂದು ಸರಕಾರಿ ರಜೆ ಇಲ್ಲದಿದ್ದರೂ ಶಾಲೆಗಳಿಗೆ ಮಾತ್ರ ಸುಮಾರು 20 ದಿನಗಳ ಕ್ರಿಸ್ಮಸ್‌ ರಜೆ ನೀಡಲಾಗುತ್ತದೆ. ಕೇಕ್‌ ಕುಸ್ವಾರ್‌ಗಳು ಸಾಮಾನ್ಯವಾಗಿದ್ದು, ಮಂಗಳೂರು ಮೂಲದ ಅನೇಕ ಸಂಸ್ಥೆಗಳು ದುಬಾೖಯಲ್ಲಿ ತಮ್ಮ ಶಾಖೆಗಳನ್ನು ತೆರೆದು ಕ್ರಿಸ್ಮಸ್‌ ತಿನಿಸುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿವೆ.

ಮಾಹಿತಿ: ಸಂತೋಷ್‌ ಮೊಂತೇರೊ

 

Advertisement

Udayavani is now on Telegram. Click here to join our channel and stay updated with the latest news.

Next