Advertisement
ಏಸು ಕ್ರಿಸ್ತರ ಜನ್ಮ ಸ್ಮರಣೆಯ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಕರಾವಳಿಯಾದ್ಯಂತ ರವಿವಾರ ರಾತ್ರಿ ಶ್ರದ್ಧಾಪೂರ್ವಕವಾಗಿ ಆಚರಿಸಿ ಸಂಭ್ರಮಿಸಿದರು. ಮಧ್ಯರಾತ್ರಿ ವೇಳೆಯಲ್ಲಿ ಕ್ರಿಸ್ತ ಜನಿಸಿದ ನೆನಪು ಸ್ಮರಿಸಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದ್ದು, ಸಹಸ್ರ ಸಂಖ್ಯೆಯಲ್ಲಿ ಕ್ರೈಸ್ತರು ಬಲಿಪೂಜೆಯಲ್ಲಿ ಭಾಗಿಗಳಾದರು.
Related Articles
Advertisement
ಸೋಮವಾರ ಬೆಳಗ್ಗಿನಿಂದಲೇ ಚರ್ಚ್‌ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯುವುದು. ಮನೆಗಳಲ್ಲಿ ಕ್ರಿಸ್ಮಸ್ ವಿಶೇಷ ತಿಂಡಿ ತಿನಿಸು “ಕುಸ್ವಾರ್’ ತಯಾರಿಸಿ ನೆರೆಹೊರೆಯರೊಂದಿಗೆ ವಿನಿಮಯ ಮಾಡುವುದು ಕಂಡುಬಂತು. ಹಬ್ಬದ ಭೋಜನದೊಂದಿಗೆ ಸಂಭ್ರಮ ಇಮ್ಮಡಿಗೊಂಡಿತು.
ಉಡುಪಿ: ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ರವಿವಾರ ರಾತ್ರಿ ಭಕ್ತಿ, ಶ್ರದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.
ರವಿವಾರ ರಾತ್ರಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಅರ್ಪಿಸಿ ಹಬ್ಬದ ಸಂದೇಶ ನೀಡಿದರು.
ನಮ್ಮೆಲ್ಲರನ್ನು ಪ್ರೀತಿಸುವುದಕ್ಕಾಗಿ ಭುವಿಗೆ ಆಗಮಿಸಿದ ಯೇಸು ಸ್ವಾಮಿ ದನದ ಕೊಟ್ಟಿಗೆಯಾದ ಗೋದಲಿಯಲ್ಲಿ ಜನಿಸಿ ತನ್ನ ಸರಳತೆ ಮೆರೆದರು. ಪ್ರೀತಿ ಪಡೆಯುವುದರಲ್ಲಿ ಇರುವ ಸಂತೋಷಕ್ಕಿಂತ ಇತರರಿಗೆ ಸೇವೆ ಮೂಲಕ ನೀಡುವುದರಲ್ಲಿ ಹೆಚ್ಚಿನ ಸಮಾಧಾನ ನೀಡುತ್ತದೆ. ಪರಸ್ಪರ ದ್ವೇಷಿಸುವುದಕ್ಕಿಂತ ಯೇಸುವಿನಂತೆ ಇತರರನ್ನು ಪ್ರೀತಿಸುವ ಕೆಲಸ ಮಾಡಬೇಕಾಗಿದೆ. ಕ್ರಿಸ್ತ ಜಯಂತಿ ಶಾಂತಿಯನ್ನು ಹಂಚುವ ಹಬ್ಬವಾಗಿದ್ದು, ಜಗತ್ತಿನೆಲ್ಲೆಡೆ ಸದಾ ಶಾಂತಿ ನೆಲೆಸುವಂತೆ ಪ್ರಾರ್ಥಿಸಬೇಕು ಎಂದು ಧರ್ಮಾಧ್ಯಕ್ಷರು ತಮ್ಮ ಸಂದೇಶದಲ್ಲಿ ತಿಳಿಸಿದರು.
ಮಿಲಾಗ್ರಿಸ್ ಕೆಥೆಡ್ರಲ್‌ನ ರೆಕ್ಟರ್ ವಂ| ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಜೋಯ್ ಅಂದ್ರಾದೆ, ಕಟಪಾಡಿ ಹೋಲಿ ಕ್ರಾಸ್ ಸಭೆಯ ವಂ| ರೊನ್ಸನ್ ಡಿ’ಸೋಜಾ ಉಪಸ್ಥಿತರಿದ್ದರು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇಡೀ ಜಿಲ್ಲೆಯ ಚರ್ಚ್‌ಗಳು ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಬಗೆ ಬಗೆಯ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು.
ರವಿವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವುದರ ಮೂಲಕ ಯೇಸು ಸ್ವಾಮಿಯ ಜನನವನ್ನು ಕ್ರೈಸ್ತರು ಸ್ವಾಗತಿಸಿದರು.
ಜಿಲ್ಲೆಯ ಪ್ರಮುಖ ಚರ್ಚ್ ಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯ ದಲ್ಲಿ ಧರ್ಮಗುರು ರೆ| ಡಾ| ಲೆಸ್ಲಿ ಡಿ’ಸೋಜಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ರೆ| ಚಾರ್ಲ್ಸ್ ಮಿನೇಜಸ್, ಕುಂದಾಪುರ ಹೋಲಿ ರೋಸರಿ ಚರ್ಚಿನಲ್ಲಿ ರೆ| ಸ್ಟ್ಯಾನಿ ತಾವ್ರೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ರೆ| ಆಲ್ಬನ್ ಡಿ’ಸೋಜಾ, ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ರೆ| ಡೆನಿಸ್ ಡೆಸಾ ಅವರ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆ, ಬಲಿಪೂಜೆಗಳು ನಡೆದವು.
ಬೆಳ್ತಂಗಡಿ ಧರ್ಮಪ್ರಾಂತದಲ್ಲಿ ಕ್ರಿಸ್ಮಸ್ ಸಂಭ್ರಮಬೆಳ್ತಂಗಡಿ: ಕ್ರಿಸ್ಮಸ್ ಹಬ್ಬವನ್ನು ಬೆಳ್ತಂಗಡಿ ಧರ್ಮಪ್ರಾಂತದ 55 ಧರ್ಮಕೇಂದ್ರಗಳಲ್ಲಿ ಆಚರಿಸಲಾಯಿತು. ಬೆಳ್ತಂಗಡಿ ಸಂತ ಲಾರೆನ್ಸ್ ನವರ ಪ್ರಧಾನ ದೇವಾಲಯದಲ್ಲಿ ಬಿಷಪ್ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿಯವರು ರವಿವಾರ ಬಲಿಪೂಜೆ ನೆರವೇರಿಸಿದರು. ಬಳಿಕ ಪ್ರವಚನ ನೀಡಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಈ ವೇಳೆ ವಾಳ್ಯದ ಸಾವಿರಕ್ಕೂ ಅಧಿಕ ಮಂದಿ ಕ್ರೈಸ್ತ ಬಾಂಧವರು ಪ್ರಾರ್ಥನೆ ನೆರವೇರಿಸಿದರು. ಈ ವೇಳೆ ವಂ| ಅಬ್ರಾಹಮ್ ಪಟ್ಟೇರಿಲ್, ವಂ| ಕುರಿಯಕೋಸ್ ವೆಟ್ಟುವರಿ, ಕೆಥೆಡ್ರೆಲ್ ವಿಗಾರ್ ತೋಮಸ್ ಕಣ್ಣಾಂಗಲ್ ಉಪಸ್ಥಿತರಿದ್ದರು.