ಮೈಸೂರು: ಯೂರೋಪಿಯನ್ ದೇಶಗಳಲ್ಲಿ ಕ್ರೈಸ್ತ ಧರ್ಮ ನೆಲ ಕಚ್ಚುತ್ತಿದ್ದು,ಅದಕ್ಕಾಗಿ ನಮ್ಮ ದೇಶದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನವೇ ಮತಾಂತರ ಎಂದು ಸಂಸದ ಪ್ರತಾಪ್ ಸಿಂಹ ಬುಧವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ”ಯೂರೋಪಿಯನ್ ದೇಶಗಳಲ್ಲಿ ಚರ್ಚ್‌ಗಳಿಗೆ ಯಾರು ಹೋಗುತ್ತಿಲ್ಲ.ಚರ್ಚ್ ಗಳು ಅಲ್ಲಿ ಮಾರಾಟಕ್ಕಿವೆ” ಎಂದು, ಮತಾಂತರ ಕಾಯ್ದೆ ಜಾರಿಗೆ ವಿರೋಧಿಸುತ್ತಿರುವ ಬಿಷಪ್‌ಗಳು, ಫಾದರ್ ಗಳು ಸೇರಿ ಕಾಯ್ದೆ ವಿರೋಧಿಸುತ್ತಿರುವವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
”ಜನರನ್ನು ಮಂಗ್ಯಾ ಮಾಡಿ ಮತಾಂತರ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ.ಚಿಕಿತ್ಸೆ ಕೊಡಿಸಿ ರೋಗ ವಾಸಿ ಮಾಡಿಸುತ್ತಾರೆ. ನಂತರ ಏಸುವಿನ ಪ್ರಾರ್ಥನೆ ಮಾಡಿಸುತ್ತಾರೆ. ಏಸುವಿನಿಂದ ಗುಣ ಆಯ್ತು ಅಂತಾ ಮೋಸದಿಂದ ಮತಾಂತರ ಮಾಡ್ತಾರೆ. ನಿಮ್ಮ ಆಸ್ಪತ್ರೆಗಳನ್ನ ಬಂದ್ ಮಾಡಿ. ಬರೀ ಏಸುವಿನ ದೇವಾಲಯ ಕಟ್ಟಿಸಿ ನೋಡೋಣ” ಎಂದು ಸವಾಲು ಹಾಕಿದರು.
”ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆ ವಾಪಸ್” ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಇಂತಹ ಮನಸ್ಥಿತಿಯಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರ ಬರುತ್ತದೆ. ಇದು ಜನರಿಗೆ ಗೊತ್ತಿದೆ ಆದ್ದರಿಂದ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. 2023ರಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಕಿತ್ತು ಒಗೆಯುವ ಕಿತ್ತು ಹಾಕುವ ಅವಕಾಶ ಜನ ನಿಮಗೆ ಕೊಡುವುದಿಲ್ಲ. ಅವರ ನಾಯಕರು ಪ್ರತಿ ಬಾರಿ ಹೊಸ ಹೊಸ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ” ಎಂದು ಕಿಡಿ ಕಾರಿದರು.
”ಕ್ರಿಶ್ಚಿಯನಿಟಿ ಏನು ಮಾರುಕಟ್ಟೆಯ ವಸ್ತುನಾ ? ನೀವು ಟ್ರೈ ಮಾರಿ ನಾವು ಮೇರಿ ಅನ್ನೋಕೆ ? ಇದೇನು ಸೋಪಾ ಮಾರಾಟನಾ ? ನಿಮ್ಮ ಧರ್ಮವನ್ನು ಮಾರುಕಟ್ಟೆ ವಸ್ತು ಮಾಡಬೇಡಿ. ಮೋಸದಿಂದ ಮತಾಂತರ ಮಾಡಬೇಡಿ” ಎಂದರು.