Advertisement

ಲೀಡ್‌ ಹೆಚ್ಚಿಸಿದ ಸ್ಟೋನ್‌ಮ್ಯಾನ್‌, ವಿನ್ಸ್‌

07:00 AM Apr 02, 2018 | |

ಕ್ರೈಸ್ಟ್‌ಚರ್ಚ್‌: ಎಡಗೈ ಆರಂಭಕಾರ ಮಾರ್ಕ್‌ ಸ್ಟೋನ್‌ಮ್ಯಾನ್‌ ಮತ್ತು ವನ್‌ಡೌನ್‌ ಬ್ಯಾಟ್ಸ್‌ಮನ್‌ ಜೇಮ್ಸ್‌ ವಿನ್ಸ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಕ್ರೈಸ್ಟ್‌ಚರ್ಚ್‌ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತನ್ನ ಹಿಡಿತವನ್ನು ಬಿಗಿಗೊಳಿಸತೊಡಗಿದೆ. 3ನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಸರದಿಯಲ್ಲಿ 3ಕ್ಕೆ 202 ರನ್‌ ಗಳಿಸಿದ್ದು, ಒಟ್ಟು 231 ರನ್‌ ಮುನ್ನಡೆ ಸಾಧಿಸಿದೆ.

Advertisement

ಇದಕ್ಕೂ ಮುನ್ನ ಇಂಗ್ಲೆಂಡಿನ 307 ರನ್ನುಗಳ ಮೊದಲ ಸರದಿಗೆ ಉತ್ತರವಾಗಿ 6 ವಿಕೆಟಿಗೆ 192 ರನ್‌ ಮಾಡಿದ್ದ ನ್ಯೂಜಿಲ್ಯಾಂಡ್‌, ರವಿವಾರದ ಆಟ ಮುಂದುವರಿಸಿ 278ಕ್ಕೆ ಆಲೌಟ್‌ ಆಯಿತು. ಪ್ರವಾಸಿಗರಿಗೆ ಕೇವಲ 29 ರನ್ನುಗಳ ಮುನ್ನಡೆಯನ್ನಷ್ಟೇ ಬಿಟ್ಟುಕೊಟ್ಟಿತು.

ಇಂಗ್ಲೆಂಡಿನ ದ್ವಿತೀಯ ಸರದಿಯಲ್ಲಿ ಅಲಸ್ಟೇರ್‌ ಕುಕ್‌ (14) ಬೇಗನೇ ಔಟಾದರು. ಅನಂತರ ಜತೆಗೂಡಿದ ಸ್ಟೋನ್‌ಮ್ಯಾನ್‌-ವಿನ್ಸ್‌ ಸೇರಿಕೊಂಡು 2ನೇ ವಿಕೆಟ್‌ ಜತೆಯಾಟದಲ್ಲಿ 123 ರನ್‌ ಪೇರಿಸಿ ಆತಿಥೇಯರ ಮೇಲೆ ಒತ್ತಡ ಹೇರಿದರು. ಸ್ಟೋನ್‌ಮ್ಯಾನ್‌ 139 ಎಸೆತಗಳಿಂದ 60 ರನ್‌ ಹೊಡೆದರು (8 ಬೌಂಡರಿ). ಇದು ಅವರ 5ನೇ ಅರ್ಧ ಶತಕ. ವಿನ್ಸ್‌ 128 ಎಸೆತ ನಿಭಾಯಿಸಿ 78 ರನ್‌ ಬಾರಿಸಿದರು. ಇದರಲ್ಲಿ 10 ಆಕರ್ಷಕ ಬೌಂಡರಿಗಳಿದ್ದವು. ಇದು ವಿನ್ಸ್‌ ಅವರ 3ನೇ ಅರ್ಧ ಶತಕ.

ಆದರೆ ಇವರಿಬ್ಬರ ವಿಕೆಟ್‌ಗಳನ್ನು 18 ರನ್‌ ಅಂತರದಲ್ಲಿ ಹಾರಿಸಿದ ನ್ಯೂಜಿಲ್ಯಾಂಡ್‌ ದೊಡ್ಡ ಒತ್ತಡದಿಂದ ಪಾರಾಯಿತು. ಟ್ರೆಂಟ್‌ ಬೌಲ್ಟ್ 2 ಹಾಗೂ ಟಿಮ್‌ ಸೌಥಿ ಒಂದು ವಿಕೆಟ್‌ ಉರುಳಿಸಿದರು. ಇಂಗ್ಲೆಂಡ್‌ ನಾಯಕ ಜೋ ರೂಟ್‌ 30 ರನ್‌ ಹಾಗೂ ಡೇವಿಡ್‌ ಮಾಲನ್‌ 19 ರನ್‌ ಮಾಡಿ 4ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿದ್ದಾರೆ.

ಟಿಮ್‌ ಸೌಥಿ ಅರ್ಧ ಶತಕ
ನ್ಯೂಜಿಲ್ಯಾಂಡಿನ ಮೊದಲ ಸರದಿಯನ್ನು ಬೆಳೆಸುವಲ್ಲಿ ವೇಗಿ ಟಿಮ್‌ ಸೌಥಿ ಪ್ರಮುಖ ಪಾತ್ರ ವಹಿಸಿದರು. 13 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಸೌಥಿ 48 ಎಸೆತಗಳಿಂದ ಸರಿಯಾಗಿ 50 ರನ್‌ ಹೊಡೆದು ಮಿಂಚಿದರು (8 ಬೌಂಡರಿ, 1 ಸಿಕ್ಸರ್‌). ಇದು ಅವರ 4ನೇ ಫಿಫ್ಟಿ. 77 ರನ್‌ ಮಾಡಿ ಆಡುತ್ತಿದ್ದ ಕೀಪರ್‌ ಬ್ರಾಡ್ಲಿ ವಾಟಿÉಂಗ್‌ 85 ರನ್‌ ತನಕ ಸಾಗಿದರು. ಅವರ ಶತಕ ನಿರೀಕ್ಷಿಸಿದ್ದ ತವರಿನ ಅಭಿಮಾನಿಗಳಿಗೆ ನಿರಾಸೆಯಾಯಿತು. 220 ಎಸೆತ ಹಾಗೂ 306 ನಿಮಿಷಗಳ ಈ ಮ್ಯಾರಥಾನ್‌ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ದಾಖಲಾಯಿತು. ನೀಲ್‌ ವ್ಯಾಗ್ನರ್‌ ಔಟಾಗದೆ 24 ರನ್‌ ಮಾಡಿದರು.

Advertisement

ಒಂದು ಹಂತದಲ್ಲಿ 36 ರನ್ನಿಗೆ 5 ವಿಕೆಟ್‌ ಉರುಳಿಸಿಕೊಂಡು ತೀವ್ರ ಸಂಕಟದಲ್ಲಿದ್ದ ನ್ಯೂಜಿಲ್ಯಾಂಡ್‌ ಕೊನೆಯ 5 ವಿಕೆಟ್‌ಗಳ ನೆರವಿನಿಂದ 242 ರನ್‌ ಪೇರಿಸಿದ್ದು ಅಮೋಘ ಸಾಧನೆ ಎನಿಸಿತು.

ಇಂಗ್ಲೆಂಡ್‌ ಪರ ಸ್ಟುವರ್ಟ್‌ ಬ್ರಾಡ್‌ 6 ವಿಕೆಟ್‌ ಹಾರಿಸಿ ಮಿಂಚಿದರು. ಉಳಿದ 4 ವಿಕೆಟ್‌ ಜೇಮ್ಸ್‌ ಆ್ಯಂಡರ್ಸನ್‌ ಪಾಲಾಯಿತು. ಇಂಗ್ಲೆಂಡಿನ ಮೊದಲ ಇನ್ನಿಂಗ್ಸ್‌ ವೇಳೆ ಕಿವೀಸ್‌ನ ಇಬ್ಬರೇ ಬೌಲರ್‌ಗಳು 10 ವಿಕೆಟ್‌ ಹಂಚಿಕೊಂಡಿದ್ದರು (ಸೌಥಿ 6, ಬೌಲ್ಟ್ 4 ವಿಕೆಟ್‌).

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-307 ಮತ್ತು 3 ವಿಕೆಟಿಗೆ 202 (ವಿನ್ಸ್‌ 76, ಸ್ಟೋನ್‌ಮ್ಯಾನ್‌ 60, ಬೌಲ್ಟ್ 38ಕ್ಕೆ 2). ನ್ಯೂಜಿಲ್ಯಾಂಡ್‌-278 (ವಾಟಿÉಂಗ್‌ 85, ಗ್ರ್ಯಾಂಡ್‌ಹೋಮ್‌ 72, ಸೌಥಿ 50, ಬ್ರಾಡ್‌ 54ಕ್ಕೆ 6, ಆ್ಯಂಡರ್ಸನ್‌ 76ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next