ಬೆಂಗಳೂರು: ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಯ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ. ನಗರದ ಜೆ.ಸಿ.ರಸ್ತೆಯ ಕನ್ನಡ ಭವನದ ಅಂತರಂಗ ಸಭಾಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡಿನ ಘಟಂ ವಾದ್ಯ ಕಲಾವಿದ ತೂತುಕುಡಿ ಹರಿಹರ ವಿನಾಯಕರಾಮ್ ಅವರಿಗೆ 2016ನೇ ಸಾಲಿನ ಟಿ.ಚೌಡಯ್ಯ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
“ದೇಶದಲ್ಲಿಯೇ ಸಂಸ್ಕೃತಿ ಕ್ಷೇತ್ರದಲ್ಲಿ ಅತಿಹೆಚ್ಚು ಪ್ರಶಸ್ತಿ ನೀಡುತ್ತಿರುವ ರಾಜ್ಯ ಕರ್ನಾಟಕ ಮಾತ್ರ. ಇತರ ರಾಜ್ಯಗಳಿಗೆ ಹೋಲಿಸಿದರೆ 13 ರಾಜ್ಯ ಪ್ರಶಸ್ತಿ, 3 ರಾಷ್ಟ್ರೀಯ ಪ್ರಶಸ್ತಿಗಳನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ. ಬೇರೆ ರಾಜ್ಯಗಳಲ್ಲಿ ಇಷ್ಟು ಸಂಖ್ಯೆಯ ಪ್ರಶಸ್ತಿಗಳು ಇಲ್ಲ. ಸರ್ಕಾರ 2017ನೇ ಸಾಲಿನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡುವ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಲ್ಲಿ ಏಕರೂಪತೆ ತಂದಿದೆ. ಇಲಾಖೆಯ ರಾಜ್ಯ ಪ್ರಶಸ್ತಿಗಳ ಮೊತ್ತವನ್ನು 5 ಲಕ್ಷ ರೂ. ಹಾಗೂ ರಾಷ್ಟ್ರೀಯ ಪ್ರಶಸ್ತಿಗಳ ಮೊತ್ತವನ್ನು 10 ಲಕ್ಷಕ್ಕೆ ಹೆಚ್ಚಳ ಮಾಡಿದೆ,’ ಎಂದರು.
“ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಸುಮಾರು 340 ಕೋಟಿ ರೂ. ಅನುದಾನ ನೀಡಿದೆ. ಇಲಾಖೆಯು ಸಾಹಿತ್ಯ-ಸಂಸ್ಕೃತಿ ಯೋಜನೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಜಾರಿಗೆ ತರುತ್ತಿದೆ. ಕಾಲಬದ್ಧವಾಗಿ ಪ್ರಶಸ್ತಿಗಳನ್ನು ನೀಡುತ್ತಿದೆ. ಪ್ರಶಸ್ತಿ ಆಯ್ಕೆ ವಿಚಾರದಲ್ಲೂ ಪಾರದರ್ಶಕತೆ ಕಾಯ್ದುಕೊಂಡಿದೆ. ಟಿ.ಚೌಡಯ್ಯ ಅವರೊಂದಿಗೆ ಕಲಾಸೇವೆ ಮಾಡಿದ ವಿನಾಯಕರಾಮ್ ಅವರಿಗೆ ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ,’ ಎಂದರು. ಸಮಾರಂಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಎಂ.ಎಸ್.ಅರ್ಚನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಾನು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರೂ ಟಿ.ಚೌಡಯ್ಯ ಅವರ ಸ್ಮಾರಕ ಪ್ರಶಸ್ತಿ ಪಡೆದಿರುವುದು ಅತ್ಯಂತ ಸಂತಸ ತಂದಿದೆ. ನೆರೆ ರಾಜ್ಯದ ಕಲಾವಿದರನ್ನು ಕರೆಯಿಸಿ ಗೌರವಿಸುತ್ತಿರುವ ಕರ್ನಾಟಕ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಕಾರ್ಯ ಶ್ಲಾಘನೀಯ
-ತೂತುಕುಡಿ ವಿನಾಯಕರಾಮ, ಘಟಂ ವಾದ್ಯ ಕಲಾವಿದ