ಮೈಸೂರು: ‘ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್’ ಎನ್ನುವ ಹಿನ್ನೆಲೆ ಧ್ವನಿ ಇರುವ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿರುವ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಫಯಾಜ್ ಮತ್ತು ಫಯಾಜ್ ಅಲಿ ಖಾನ್ ಬಂಧಿತ ಆರೋಪಿಗಳು. 30 ಸೆಕೆಂಡ್ ಗಳ ವಿಡಿಯೋದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿರುವ ಆರೋಪಿಗಳನ್ನು ನಂಜನಗೂಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈದ್ ಉಲ್ ಫಿತ್ರ ಹಬ್ಬದಂದು ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸಿ ಹೋಗುತ್ತಿರುವ ದೃಶ್ಯ ಸೆರೆ ಹಿಡಿದಿರುವ ಯುವಕರ ಗುಂಪು ದೃಶ್ಯದ ಹಿನ್ನೆಲೆ ಧ್ವನಿಯಾಗಿ ‘ಮಜ್ಮ ದೇಖೋ ಬಿ, ಹಮಾರ ಗಾವೋಂಕ ಮೇ ಬಿ ಪಾಕಿಸ್ಥಾನ ಛೋಟಾ’, ‘ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್’ ಎಂದು ಹೇಳಿದೆ. 30 ಸೆಕೆಂಡ್‌ಗಳ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿರುವುದಲ್ಲದೇ ಮುಖ್ಯಮಂತ್ರಿಗಳ ಕಚೇರಿ ತಲುಪಿತ್ತು.
ಇದನ್ನೂ ಓದಿ:ವಿವಾದಿತ ಪೋಸ್ಟ್: ಎಂಇಎಸ್ ಮುಖಂಡ ಶುಭಂ ಶೇಳಕೆ ವಿರುದ್ಧ ದೂರು ದಾಖಲು
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ವೀಡಿಯೋ ಮಾಡಿರುವರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ಬಂದ ಹಿನ್ನೆಲೆ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.