Advertisement
ವಿಕ್ರಮ್ ಹೆಸರಿನ ಹಿಂದೆ ಕುತೂಹಲಕರ ವಿಷಯವಿದೆ..ಮೊದಲ ಎರಡು ಅಕ್ಷರ ವಿಐ ತಂದೆಯ ಹೆಸರು(ಜಾನ್ ಅಲ್ಬರ್ಟ್ ವಿಕ್ಟರ್) ಕೆ (ಕೆನ್ನಡಿ) ಆರ್ ಎ ತಾಯಿಯ ಹೆಸರು (ರಾಜೇಶ್ವರಿ) ಮತ್ತು ಆರ್ ಎಎಂ ವಿಕ್ರಮ್ ಮಕರ ರಾಶಿ ಚಿಹ್ನೆಯ ಹೆಸರು (Vikram)ಸೇರಿದೆ. 54ರ ಹರೆಯದ ವಿಕ್ರಮ್ ಈಗಲೂ ಹದಿಹರೆಯ ನಾಯಕ (ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ದೇವರಾಜ್, ಅವಿನಾಶ್ ಅವರಂತೆ) ನಟರನ್ನೂ ನಾಚಿಸುವಷ್ಟರ ಮಟ್ಟಿಗೆ ಪ್ರಬುದ್ಧ ನಟನೆ ಮೂಲಕ ಇಂದಿಗೂ ಬೇಡಿಕೆಯ ಜನಪ್ರಿಯ ನಟರಾಗಿ ಬೆಳೆದಿದ್ದಾರೆ.
Related Articles
Advertisement
12 ವರ್ಷದ ಬಾಲಕ ಅಂದು ಯೋಚಿಸುತ್ತಿದ್ದ ವಿಷಯ, ಜೀವನದ ಗುರಿ ಒಂದೇ ಆಗಿತ್ತು..ಅದು ತಾನು ನಟನಾಗಬೇಕೆಂಬುದು! 8ನೇ ತರಗತಿವರೆಗೂ ಓದಿನಲ್ಲೂ ಮೊದಲಿಗನಾಗಿದ್ದ ವಿಕ್ರಮ್…ವರ್ಷ ಕಳೆದಂತೆ ಸಿನಿಮಾ ನಟನಾಗಬೇಕೆಂಬ ವ್ಯಾಮೋಹ ಹೆಚ್ಚುತ್ತಾ ಹೋದಂತೆ ತರಗತಿಯಲ್ಲಿ ವಿಕ್ರಮ್ ಓದಿನಲ್ಲಿ ಹಿಂದುಳಿದು ಕೇವಲ ಉತ್ತೀರ್ಣನಾಗುತ್ತಿದ್ದ ಅಷ್ಟೇ. ಸೇಲಂ ಸಮೀಪದ ಯೆರಕಾಡಿನ ಬೋರ್ಡಿಂಗ್ ಶಾಲೆಯಲ್ಲಿ ಶಿಕ್ಷಣಾಭ್ಯಾಸದಲ್ಲಿ ವಿಕ್ರಮ್ ತೊಡಗಿದ್ದಾಗ ಕರಾಟೆ, ಈಜು, ನೃತ್ಯ ಹಾಗೂ ಎಲ್ಲಾ ವಿಧದ ಆಟಗಳನ್ನು ಕಲಿತುಬಿಟ್ಟಿದ್ದ. ಅದಕ್ಕೆ ಕಾರಣ ತಾನು ಮುಂದೆ ನಟನಾದರೆ ಆಗ ಸಹಾಯಕ್ಕೆ ಬರುತ್ತದೆ ಎಂಬ ಲೆಕ್ಕಾಚಾರವಾಗಿತ್ತಂತೆ! ಕಾಲೇಜು ಶಿಕ್ಷಣದ ನಂತರ ತಂದೆ ಪದವಿಗೆ ಹೋಗುವಂತೆ ಒತ್ತಾಯಿಸಿದ್ದರು. ಹೀಗಾಗಿ ಚೆನ್ನೈನ ಲೋಯೋಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಪದವಿ. ನಂತರ ಎಂಬಿಎ ಪದವಿ ಪಡೆದಿದ್ದರು.
ಕಾಲೇಜು ವಿದ್ಯಾಭ್ಯಾಸದ ವೇಳೆಯೇ ಉತ್ತಮ ನಟ ಪ್ರಶಸ್ತಿ ಪಡೆದಿದ್ದ ವಿಕ್ರಮ್:
ಕಾಲೇಜು ವಿದ್ಯಾಭ್ಯಾಸದ ವೇಳೆ ನಾಟಕಗಳಲ್ಲಿ ವಿಕ್ರಮ್ ಅಭಿನಯಿಸುತ್ತಿದ್ದರು. ದ ಕೈನೆ ಮುಟಿನಿ ಕೋರ್ಟ್ ಮಾರ್ಷಲ್, ಪೀಟರ್ ಷಫರ್ಸ್ಸ್ ಬ್ಲ್ಯಾಕ್ ಕಾಮಿಡಿ ನಾಟಕದಲ್ಲಿನ ನಟನೆಗೆ ವಿಕ್ರಮ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಐಐಟಿ ಮದ್ರಾಸ್ ನಲ್ಲಿ ನಡೆದ ಸಮಾರಂಭದಲ್ಲಿ ಪಡೆದಿದ್ದರು.
ಅಂದು ಸಾವಿನ ದವಡೆಯಿಂದ ಪಾರಾಗಿದ್ದ ವಿಕ್ರಮ್ ಮೂರು ವರ್ಷ ಹಾಸಿಗೆ ಹಿಡಿದುಬಿಟ್ಟಿದ್ದರು!
ನಾಟಕದಲ್ಲಿನ ಅದ್ಭುತ ನಟನೆಗಾಗಿ ವಿಕ್ರಮ್ ಸಾವಿರಾರು ಜನರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಖುಷಿಯಲ್ಲಿಯೇ ಬೈಕ್ ನಲ್ಲಿ ಮನೆಯತ್ತ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದುಬಿಟ್ಟಿತ್ತು. ಆ ಅಪಘಾತ ವಿಕ್ರಮ್ ಕನಸನ್ನು ನುಚ್ಚು ನೂರು ಮಾಡಿಬಿಟ್ಟಿತ್ತು. ಬಲಕಾಲು ಗಂಭೀರವಾಗಿ ನಜ್ಜುಗುಜ್ಜಾಗಿತ್ತು..ಈ ಕಾಲನ್ನು ಉಳಿಸುವ ಭರವಸೆ ಇದ್ದಿದ್ದು ಬರೇ ಶೇ.2ರಷ್ಟು ಮಾತ್ರವಾಗಿತ್ತು! ಶತಾಯಗತಾಯ ಕಾಲನ್ನು ಉಳಿಸಲೇಬೇಕು ಎಂದು ಹಠಕ್ಕೆ ಬಿದ್ದ ಪರಿಣಾಮ 23 ಆಪರೇಶನ್ ಮಾಡಲಾಗಿತ್ತು. ಮೂರು ವರ್ಷಗಳ ಕಾಲ ಹಾಸಿಗೆಯಲ್ಲಿದ್ದ ವಿಕ್ರಮ್ ಒಂದು ವರ್ಷಗಳ ಕಾಲ ವಾಕಿಂಗ್ ಸ್ಟಿಕ್ ಆಧಾರದ ಮೇಲೆ ಒಂದು ವರ್ಷ ನಡೆದಾಡಿದ್ದರು. ಕೊನೆಗೂ ಛಲ ಬಿಡದ ತನ್ನ ಕನಸನ್ನು ಸಾಕಾರಗೊಳಿಸುವತ್ತ ದಾಪುಗಾಲು ಇಟ್ಟಿದ್ದರು.
ಸಿನಿಮಾರಂಗದಲ್ಲಿ ಯಶಸ್ಸಿಗಾಗಿ ಹತ್ತು ವರ್ಷ ಸವೆಸಿದ್ದ ವಿಕ್ರಮ್:
ಮಾಡೆಲಿಂಗ್ ಮೂಲಕ ಜೀವನ ಆರಂಭಿಸಿದ್ದ ವಿಕ್ರಮ್ ಜಾಹೀರಾತುಗಳಲ್ಲಿ ನಟಿಸುತ್ತಿದ್ದರು. ಚೋಲಾ ಟೀ, ಟಿವಿಎಸ್ ಎಕ್ಸೆಲ್ ಅಲ್ವಿನ್ ವಾಚ್ ಜಾಹೀರಾತುಗಳಲ್ಲಿ ಮಿಂಚಿದ್ದರು. ಟಿವಿ ಸೀರಿಯಲ್ ಗಳು. ಸಿನಿಮಾರಂಗದಲ್ಲಿ ಮಿಂಚಬೇಕು, ಹೀರೋ ಆಗಬೇಕು ಎಂದು ಕನಸು ಕಂಡಿದ್ದ ವಿಕ್ರಮ್ ಸುಮಾರು ಹತ್ತು ವರ್ಷಗಳ ಕಾಲ ಸಣ್ಣ, ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಅದರಲ್ಲಿಯೂ ಕೆಲವು ಸಿನಿಮಾಗಳನ್ನು ತಿರಸ್ಕರಿಸಿದ್ದರು. ಹೀಗೆ ಹತ್ತು ಹಲವು ಏಳು ಬೀಳುಗಳನ್ನು ಕಂಡ ವಿಕ್ರಮ್ ಕೊನೆಗೆ ಹಿರಿಯ ನಿರ್ದೇಶಕ ಸಿವಿ ಶ್ರೀಧರ್ ತಮ್ಮ ಸಿನಿಮಾದಲ್ಲಿ ಹೀರೋ ಪಾತ್ರ ಕೊಡುವುದಾಗಿ ಆಫರ್ ಕೊಟ್ಟಿದ್ದರು. ಹೀಗೆ 1990ರಲ್ಲಿ ಎನ್ ಕಾದಲ್ ಕಣ್ಮಣಿ ಸಿನಿಮಾದಲ್ಲಿ ನಟಿಸುವ ಮೂಲಕ ವಿಕ್ರಮ್ ಬೆಳ್ಳಿ ತೆರೆ ಪ್ರವೇಶಿಸಿದ್ದರು. ನಂತರ ಪಿಸಿ ಶ್ರೀರಾಮ್ ಅವರ ಕಾಲೇಜು ಲವ್ ಸ್ಟೋರಿಯ ಮೀರಾ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾಗಳೆಲ್ಲ ವಿಕ್ರಮ್ ನಿರೀಕ್ಷೆಗಳನ್ನೆಲ್ಲಾ ತಲೆಕೆಳಗೆ ಮಾಡಿತ್ತು. ಏತನ್ಮಧ್ಯೆ ಮಣಿರತ್ನಂ ನಿರ್ದೇಶನದ ಬಾಂಬೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದರು. ಆದರೆ ತನ್ನ ಮುಂದಿನ ಸಿನಿಮಾಕ್ಕೆ ತೊಂದರೆಯಾಗಲಿದೆ ಎಂಬ ದೃಷ್ಟಿಯಲ್ಲಿ ಗಡ್ಡ ತೆಗೆಯಲು ನಿರಾಕರಿಸಿದ್ದರಿಂದ ಆ ಅವಕಾಶವನ್ನೂ ವಿಕ್ರಮ್ ಕಳೆದುಕೊಂಡಿದ್ದರು.
ಟರ್ನಿಂಗ್ ಪಾಯಿಂಟ್ ಕೊಟ್ಟ ಸೇತು ಸಿನಿಮಾ:
ಹೀಗೆ ಸುಮಾರು ಹತ್ತು ವರ್ಷಗಳ ಕಾಲ ನಟಿಸಿದ್ದ ವಿಕ್ರಮ್ ಗೆ ಹೇಳಿಕೊಳ್ಳುವ ಸ್ಟಾರ್ ಪಟ್ಟವಾಗಲಿ, ಯಶಸ್ಸು ತಂದುಕೊಡಲಿಲ್ಲ. ನಂತರ 1999ರಲ್ಲಿ ತೆರೆಕಂಡ ಸೇತು(ಛಿಯಾನ್) ಸಿನಿಮಾ ವಿಕ್ರಮ್ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. ಈ ಸಿನಿಮಾವನ್ನು ಎರಡು ವರ್ಷಗಳ ಕಾಲ ಚಿತ್ರೀಕರಿಸಲಾಗಿತ್ತು. ಸೇತು ಸಿನಿಮಾ ವಿಕ್ರಮ್ ಇಮೇಜ್ ಅನ್ನು ಇಮ್ಮಡಿಗೊಳಿಸಿತ್ತು. ನಂತರ ದಿಲ್, ಕಾಸಿ, ಜೆಮಿನಿ, ಕಿಂಗ್, ಧೂಳ್, ಸಾಮಿ, ಪಿತಾಮಗನ್, ಅರುಲ್, ಅನ್ನಿಯನ್, ಕಾಂತಾಸ್ವಾಮಿ, ರಾವನನ್, ದೈವ ತಿರುಮಗಳ್ ಹೀಗೆ ಒಂದಕ್ಕಿಂತ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡುಬಿಟ್ಟಿದ್ದಾರೆ. ಇಂತಹ ವಿಭಿನ್ನ ಪಾತ್ರಗಳ ಮೂಲಕವೇ ವಿಕ್ರಮ್ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.