ವಾಡಿ: ಚಿತ್ತಾಪುರ ಮೀಸಲು ಮತಕ್ಷೇತ್ರಕ್ಕೆ ಬಿಜೆಪಿಯಿಂದ ಮಣಿಕಂಠ ರಾಠೋಡ್ ಹೆಸರು ಪ್ರಕಟವಾಗುತ್ತಿದ್ದಂತೆ ಕಮಲ ಪಾಳೆಯದಲ್ಲಿ ಅತೃಪ್ತಿಯ ಹೊಗೆ ಭುಗಿಲೆದ್ದಿದೆ.
ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು ಕಳೆದ ಎಂಟು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್ ಚೌಹಾಣ್ ಕೊನೆಗಳಿಗೆಯಲ್ಲಿ ತಮಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯದ ಬಾವುಟ ಹಾರಿಸಿದ್ದಾರೆ.
ಚಿತ್ತಾಪುರ ಮೀಸಲು ಮತಕ್ಷೇತ್ರದ ಬಿಜೆಪಿ ಟಿಕೆಟ್ ಮಾರಾಟವಾಗಿದೆ ಎಂದು ಬಹಿರಂಗವಾಗಿ ಆರೋಪಿಸುವ ಮೂಲಕ ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಅರವಿಂದ್ ಚೌಹಾಣ್ ಅವರ ಬೆಂಬಲಕ್ಕೆ ನಿಂತಿದ್ದ ಅನೇಕ ಹಿರಿಯ ಮುಖಂಡರು ಬಿಜೆಪಿಯ ಅಭ್ಯರ್ಥಿ ಆಯ್ಕೆ ವಿರುದ್ಧ ತೀವ್ರ ಸಮಾಧಾನಗೊಂಡಿದ್ದರು. ಪರಿಣಾಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಈ ಕಾರಣಕ್ಕೆ ಅತೃಪ್ತರ ಸಭೆಯಲ್ಲಿ ಭಾರಿ ಗದ್ದಲವೇ ನಡೆದಿತ್ತು.
ಅಪರಾದ ಹಿನ್ನಲೆಯ ವ್ಯಕ್ತಿಗೆ ಟಿಕೆಟ್ ನೀಡಿದ್ದು, ಯಾವ ನ್ಯಾಯ ಎಂದು ಅರವಿಂದ ಚವ್ಹಾಣ ಬೆಂಬಲಿಗರು ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್.ರವಿಕುಮಾರ ಸೇರಿದಂತೆ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದರು.
ಈ ಮಧ್ಯೆ ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿಯಲ್ಲಿರುವ ಸ್ವಾಭಿಮಾನಿಗಳು ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ ಆಗುವಂತೆ ಬಹಿರಂಗ ಆಹ್ವಾನ ನೀಡಿದ್ದಾರೆ. ಪ್ರಿಯಾಂಕ್ ಕೊಟ್ಟ ಆತಿಥ್ಯದ ಸ್ವಾಗತಕ್ಕೆ ಹಲವು ಜನ ಬಿಜೆಪಿ ಮುಖಂಡರು ಈಗ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಬಿಜೆಪಿಯ ಚಿತ್ತಾಪುರ ಮೀಸಲು ಮತಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಅರವಿಂದ್ ಚೌಹಾಣ್ ಹಾಗೂ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಶನಿವಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಭಾವುಟ ಹಿಡಿದ ಹಿರಿಯ ಮುಖಂಡರೊಂದಿಗೆ ಕ್ಷೇತ್ರದ ಕೋಲಿ ಸಮಾಜದ ಮುಖಂಡರಾದ ಶರಣಪ್ಪ ನಾಟೀಕಾರ, ಶಿವಕುಮಾರ ಯಾಗಾಪುರ, ಬಂಜಾರಾ ಮುಖಂಡ ಬೋರು ರಾಠೋಡ ಸೇರಿದಂದೆ ಇತರರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.
ಪಕ್ಷ ಸೇರ್ಪಡೆಯಾದ ಚಿತ್ತಾಪುರ ಬಿಜೆಪಿ ಮುಖಂಡರನ್ನು ದೆಹಲಿಗೆ ಕರೆಯಿಸಿಕೊಳ್ಳುವ ಮೂಲಕ ಅಭಿನಂದನೆ ಸಲ್ಲಿಸಿದ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಹೂಗುಚ್ಚ ನೀಡಿ ಬರಮಾಡಿಕೊಂಡರು.
ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಲು ಪಣತೊಟ್ಟಿದ್ದ ಬಿಜೆಪಿಯ ಹಿರಿಯ ಮುಖಂಡರೇ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಬಿಜೆಪಿ ವಲಯದಲ್ಲಿ ಭಾರಿ ತಳಮಳ ಸೃಷ್ಟಿಸಿದೆ. ಬಿಜೆಪಿ ಅಭ್ಯರ್ಥಿಯ ಆಯ್ಕೆ ವಿರುದ್ಧ ಸಿಡಿದೆದ್ದ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.