ಚಿತ್ತಾಪುರ: ಮುಂಗಾರು ಈಗಾಗಲೇ ರಾಜ್ಯ ಪ್ರವೇಶಿಸಿದ್ದು, ಜೂ.1 ರಿಂದ ತಾಲೂಕಿಗೆ ಮಳೆ ಲಗ್ಗೆಯಿಟ್ಟಿದೆ. ಹೀಗಾಗಿ ರೈತರು ಬಿತ್ತನೆಗೆ ಪೂರಕ ಮಳೆ ಎದುರು ನೋಡುತ್ತಿದ್ದರೆ, ಕೃಷಿ ಇಲಾಖೆ ಅಗತ್ಯ ಬೀಜ ದಾಸ್ತಾನು ಮಾಡಿಕೊಂಡಿದೆ. ಬಿಸಿಲ ನಾಡು ಹಾಗೂ ತೊಗರಿ ಖಣಜ ಎಂದೇ ಖ್ಯಾತಿ ಪಡೆದ ತಾಲೂಕಿನ ರೈತಾಪಿ ವರ್ಗ ಈ ಬಾರಿಯಾದರೂ ಉತ್ತಮ ಮುಂಗಾರು ಮಳೆ ಸುರಿಯಲಿ ಎಂಬ ಅಶಾಭಾವದೊಂದಿಗೆ ಮುಂಗಾರು ಬಿತ್ತನೆಗೆ ಜಮೀನು ಹದಗೊಳಿಸಲು ಮುಂದಾಗಿದ್ದಾರೆ.
ಕಳೆದ ವರ್ಷ ಮಳೆಯ ಅಭಾವದಿಂದ ಹತ್ತಿ ಬಿತ್ತನೆಯಲ್ಲಿ ಹಿನ್ನಡೆಯಾಗಿತ್ತು. ಕಳೆದ ವರ್ಷ 77.525 ಹೆಕ್ಟೇರ್ ಭೂಮಿಯಲ್ಲಿ 89,000 ಹೆಕ್ಟೇರ್‌ನಷ್ಟು ತೊಗರಿ, 10,250 ಹೆಕ್ಟೇರ್ ಹೆಸರು, 4560 ಹೆಕ್ಟೇರ್ ಉದ್ದು, 600 ಹೆಕ್ಟೇರ್ ಭತ್ತ, 210 ಹೆಕ್ಟೇರ್ ಸಜ್ಜೆ, 10 ಹೆಕ್ಟೇರ್ ಸೂರ್ಯಕಾಂತಿ, 50 ಹೆಕ್ಟೇರ್ ನವಣೆ ಹಾಗೂ 5 ಹೆಕ್ಟೇರ್ ಔಡಲ ಬಿತ್ತನೆ ಮಾಡಲಾಗಿತ್ತು. ಆದರೆ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ತೊಗರಿ, ಹೆಸರು ಬಿತ್ತನೆ ಹೆಚ್ಚಳವಾಗುವ ಸಾಧ್ಯತೆ ವ್ಯಕ್ತಪಡಿಸಿರುವ ಕೃಷಿ ಇಲಾಖೆ, ಹತ್ತಿ ಬಿತ್ತನೆಯಲ್ಲಿ ಇಳಿಮುಖವಾಗುವ ಲೆಕ್ಕಾಚಾರ ಇಟ್ಟುಕೊಂಡಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ 1.20 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ನಿರೀಕ್ಷೆಯಿಟ್ಟುಕೊಂಡಿದೆ. 89,300 ಹೆಕ್ಟೇರ್ ತೊಗರಿ, 13,000 ಹೆಕ್ಟೇರ್ ಹೆಸರು, 7,000 ಹೆಕ್ಟೇರ್ ಉದ್ದು, 3,000 ಹೆಕ್ಟೇರ್ ಹತ್ತಿ, 1,900 ಹೆಕ್ಟೇರ್ ಸಜ್ಜೆ, 800 ಹೆಕ್ಟೇರ್ ಭತ್ತ, 1,500 ಹೆಕ್ಟೇರ್ ಸೂರ್ಯಕಾಂತಿ, 15 ಹೆಕ್ಟೇರ್ ಔಡಲ ಬೆಳೆಯಬಹುದು ಎಂದು ನಿರೀಕ್ಷಿಸಿದೆ. 1,800 ಹೆಕ್ಟೇರ್‌ನಷ್ಟು ಸೋಯಾಬಿನ್, 1,000 ಹೆಕ್ಟೇರ್ ಎಳ್ಳು ಬಿತ್ತನೆಯಾಗುವ ಸಾಧ್ಯತೆಯಿದೆ.
ಮುಂಗಾರಿಗೆ ಪೂರಕವಾಗುವಂತೆ 600 ಕ್ವಿಂಟಲ್ ತೊಗರಿ ಬೀಜ. 2 ತಳಿಯ ತೊಗರಿಯನ್ನು ರಾಷ್ಟ್ರೀಯ ಮತ್ತು ರಾಜ್ಯ ಬೀಜ ನಿಗಮದಿಂದ ಸಂಗ್ರಹಿಸಿದೆ. 400 ಕ್ವಿಂಟಲ್ ಟಿಎಸ್ 3 ಆರ್ ತಳಿಯ ತೊಗರಿ, 200 ಕ್ವಿಂಟಲ್ ಜಿಆರ್‌ಬಿ ತಳಿಯ ತೊಗರಿ, 120 ಬಿಜಿಎಸ್9 ತಳಿಯ ಹೆಸರು, 2 ಕ್ವಿಂಟಲ್ ಸಜ್ಜೆ, 6 ಕ್ವಿಂಟಲ್ ಸೂರ್ಯಕಾಂತಿ, 100 ಕ್ವಿಂಟಲ್ ಸೋಯಾಬಿನ್, 60 ಕ್ವಿಂಟಲ್ ಉದ್ದು, 64 ಕ್ವಿಂಟಲ್ ಭತ್ತವನ್ನು ಈಗಾಗಲೇ ಆರ್‌ಎಸ್‌ಕೆ ಹಾಗೂ ಹೆಚ್ಚುವರಿ ಬೀಜ ಕೇಂದ್ರಗಳಲ್ಲಿ ಸಂಗ್ರಹಿಸಿ ರೈತರಿಗೆ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ.
ಚಿತ್ತಾಪುರ, ಮಾಡಬೂಳ, ನಾಲವಾರ, ಶಹಾಬಾದ, ಕಾಳಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ. ಸರ್ಕಾರ ಅನುಮೋದಿಸಿದ ಸಂಸ್ಥೆಗಳಿಂದ ಬೀಜ ಪಡೆದು ರೈತರಿಗೆ ನೀಡುತ್ತಿದ್ದಾರೆ. ರೈತರು ರಾಸಾಯನಿಕ ಗೊಬ್ಬರಕ್ಕೆ ಹೆಚ್ಚು ಮೊರೆ ಹೋಗದೆ, ಹಸಿರೆಲೆ ಹಾಗೂ ಸಾವಯವ ಗೊಬ್ಬರ ಬಳಸಬೇಕು. ಈಗಾಗಲೇ ತೊಗರಿಯಲ್ಲಿ ಅಂತರ ಬೆಳೆಯಾಗಿ ತೃಣ ಧಾನ್ಯ ಬೆಳೆಯಲು ಜಾಗೃತಿ ಮೂಡಿಸಲಾಗುತ್ತಿದೆ. ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಪಡೆಯಬಹುದು. ಕೊರೊನಾ ವೈರಸ್‌ನಿಂದಾಗಿ ಹೋಬಳಿ ಮಟ್ಟದಿಂದ ಈ ಭಾರಿ ಕೃಷಿ ಅಭಿಯಾನ ಕೈಗೊಂಡಿಲ್ಲ. ರೈತರು ತೊಗರಿ ಬಿತ್ತನೆ ಬದಲಿಗೆ ನಾಟಿ ಕಾಳು ಊರಲು ಪ್ರೋತ್ಸಾಹ, ಬಿಟಿ ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ರೈತರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತದೆ ಕೃಷಿ ಇಲಾಖೆ.
ಕಳೆದ ವರ್ಷ ಮಳೆ ಅಭಾವದ ಹಿನ್ನೆಲೆಯಲ್ಲಿ ಮುಂಗಾರಿನಲ್ಲಿ ಬಿತ್ತನೆಯದ್ದೇ ತಲೆನೋವಾಗಿ ಪರಿಣಮಿಸಿತ್ತು. ಆದರೆ ಪ್ರಸಕ್ತ ವರ್ಷ ಉತ್ತಮ ಮಳೆ ನಿರೀಕ್ಷಿಸಲಾಗಿದ್ದು, ಭೂಮಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರಿಗೆ ಸಕಾಲಕ್ಕೆ ಗುಣಮಟ್ಟದ ಬೀಜ ಪೂರೈಕೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಸಕ್ತ ವರ್ಷ ತೊಗರಿ ಬೆಳೆಯನ್ನು ಕೈಗಾರು ಬಿತ್ತನೆ ಪದ್ಧತಿಗೆ ರೈತರು ಮುಂದಾಗಬೇಕು. ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ಆರ್‌ಎಸ್‌ಕೆ ಹಾಗೂ ಹೆಚ್ಚುವರಿ ಬೀಜ ಕೇಂದ್ರಗಳಲ್ಲಿ ಸಂಗ್ರಹಿಸಿ ರೈತರಿಗೆ ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ. ರೈತರು ಸಹ ಅಂತರ ಕಾಪಾಡಿಕೊಂಡು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬೀಜ, ರಸಗೊಬ್ಬರ ಖರೀದಿಸಬೇಕು.
ಸಂಜೀವಕುಮಾರ ಮಾನಕರ್,
ಸಹಾಯಕ ಕೃಷಿ ನಿರ್ದೇಶಕರು
ಎಂ.ಡಿ. ಮಶಾಖ