ಚಿತ್ತಾಪುರ: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಇದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಹಸಿರು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು.
ಪಟ್ಟಣದ ನೀರಿನ ಶುದ್ಧೀಕರಣ ಘಟಕದ ಆವರಣದಲ್ಲಿ ತಾಲೂಕು ಆಡಳಿತ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಪುರಸಭೆ ಹಾಗೂ ರೆಡ್‌ಕ್ರಾಸ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ನಾಶ ಮತ್ತು ಮಾಲಿನ್ಯವು ಈಚೆಗೆ ವಿವಿಧ ಕಾರಣದಿಂದ ಹೆಚ್ಚುತ್ತಿದೆ. ಆದರೆ ಜೀವ ಸಂಕುಲದ ಅಳಿವು, ಉಳಿವು ನಿರ್ಧರಿಸುವ ಪರಿಸರದ ಕುರಿತು ಕಾಳಜಿ ಬೆಳೆಸಿಕೊಳ್ಳುವುದು ಅವಶ್ಯಕ ಎಂದರು.
ರೆಡ್‌ಕ್ರಾಸ್ ಸೊಸೈಟಿ ಚೇರ್‌ಮನ್ ಸೈಯದ್ ನಿಜಾಮೋದ್ದಿನ್ ಚಿಸ್ತಿ ಮಾತನಾಡಿ, ಸಸಿಗಳನ್ನು ನೆಟ್ಟರೆ ಸಾಲದು, ಅವುಗಳನ್ನು ಸೂಕ್ತ ರೀತಿಯಲ್ಲಿ ಪೋಷಿಸಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು. ಪ್ರತಿಯೊಬ್ಬರೂ ಭೂಮಿಯಲ್ಲಿ ಸಸಿ ನೆಡುವುದರ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಲು ಮುಂದಾಗಬೇಕಾಗಿದೆ ಎಂದು ಹೇಳಿದರು. ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮಾತನಾಡಿ, ಅರಣ್ಯ ನಾಶದಿಂದ ಪರಿಸರದ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಇದನ್ನು ತಡೆಯಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಶಾಲೆಗಳಲ್ಲಿ, ಮನೆಯ ಮುಂದಾಗಲಿ ಒಂದಾದರೂ ಸಸಿ ನೆಟ್ಟು ಪೋಷಿಸಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಸಿದ್ಧಣ್ಣ ಅಣಬಿ, ಉಪ ವಲಯ ಅರಣ್ಯಾಧಿಕಾರಿಗಳಾದ ಅನಿಲಕುಮಾರ, ಸಂತೋಷ, ಅರಣ್ಯ ರಕ್ಷಕ ರಮೇಶ ಹಾದಿಮನಿ, ಚಂದ್ರಕಾಂತ, ಎಂ.ಡಿ ವಸೀಂ ಖಾನ್, ಸೈಯದ್ ನಯಿಮೋದ್ದಿನ್ ಸೇರಿದಂತೆ ಇತರರು ಇದ್ದರು.