ಚಿತ್ತಾಪುರ: ಇಲ್ಲಿಯ ಎಪಿಎಂಸಿ ನೂತನ ಅಧ್ಯಕ್ಷರಾಗಿ ಶಿವರೆಡ್ಡಿಗೌಡ, ಉಪಾಧ್ಯಕ್ಷರಾಗಿ ಜಯಶ್ರೀ ಸಾಲಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಮಲ್ಲೇಶಾ ತಂಗಾ ಘೋಷಣೆ ಮಾಡಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಶಿವರೆಡ್ಡಿಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಯಶ್ರೀ ಸಾಲಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಆದರೆ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಸದಸ್ಯರಾದ ಬಸವರಾಜ ಸಜ್ಜನ, ಭೀಮರಾವ ಮಾವನೂರ್, ಮನ್ಸೂರ್ ಪಟೇಲ್ ತೊಂಚಿ, ದೇವಿಂದ್ರಮ್ಮ, ಸಿದ್ದುಗೌಡ ಅಫಜಲಪುರಕರ್, ವಿಶ್ವರಾಧ್ಯ ಬಿರಾಳ, ಶಾಮ ಅಂತಣ್ಣಗೌಡ, ಗೀತಾ ಬೊಮ್ಮನಳ್ಳಿ, ತಿಮ್ಮಯ್ಯ ಕುರುಕುಂಟಾ, ರಾಮಶೆಟ್ಟಿ ಪಾಟೀಲ ಚುನಾವಣೆ ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ಚನ್ನಬಸಯ್ಯ ಹಿರೇಮಠ ಇದ್ದರು.
ವಿಜಯೋತ್ಸವ: ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಿವರೆಡ್ಡಿಗೌಡ, ಜಯಶ್ರೀ ಸಾಲಿ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಚಿತ್ತಾಪುರ ತಾಲೂಕಿಗೆ ಸಂಬಂಧಿಸಿದಂತೆ ತಾಪಂ, ಪುರಸಭೆ, ಎಪಿಎಂಸಿ ಯಾವುದೇ ಚುನಾವಣೆಗಳಾಗಲಿ ಅಧ್ಯಕ್ಷ ಉಪಾಧ್ಯಕ್ಷರಾಗಲು ಹಿಂದೇ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮೋಜು ಮಸ್ತಿ ಮಾಡಿಸಿ ಹಣ ಖರ್ಚು ಮಾಡುತ್ತಿದ್ದರು. ಆದರೆ ಚಿತ್ತಾಪುರ ಮತಕ್ಷೇತ್ರದಿಂದ ಪ್ರಿಯಾಂಕ್ ಖರ್ಗೆ ಅವರು ಶಾಸಕರಾದ ಕೂಡಲೇ ಇದೆಲ್ಲದ್ದಕ್ಕೂ ಕಡಿವಾಣ ಹಾಕಿ ಯಾವುದೇ ಹಣ ಖರ್ಚಿಲ್ಲದೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತಿರುವುದು ದಾಖಲೆ ಮಾಡಿದಂತಾಗಿದೆ ಎಂದು ಹೇಳಿದರು. ಜಿಪಂ ಸದಸ್ಯರಾದ ಶಿವಾನಂದ ಪಾಟೀಲ, ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಪ್ರಮುಖರಾದ ರಮೇಶ ಮರಗೋಳ, ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ಪ್ರದೀಪರೆಡ್ಡಿ ಪಾಟೀಲ, ಅಣ್ಣಾರಾವ ಸಣ್ಣೂರಕರ್, ಶೀಲಾ ಕಾಶಿ, ಸುನೀಲ ದೊಡ್ಮನಿ, ಗುರುಗೌಡ ಇಟಗಿ, ಶರಣು ಡೋಣಗಾಂವ, ಪಾಶಾಮಿಯ್ಯ ಖುರೇಷಿ, ನಾಗರೆಡ್ಡಿ ಗೋಪಶೇನ್, ಶಿವಕಾಂತ ಬೆಣ್ಣೂರಕರ್, ಭೀಮಣ್ಣ ಹೋತಿನಮಡಿ, ಶಾಂತಪ್ಪ ಚಾಳಿಕಾರ್, ಶಿವರಾಜ ಪಾಟೀಲ, ನಾಗಯ್ಯ ಗುತ್ತೇದಾರ, ಹಣಮಂತ ಸಂಕನೂರ ಇದ್ದರು.