ಚಿತ್ತಾಪುರ: ಪಟ್ಟಣ ಹೊರವಲಯದ ಮೋಗಲಾ ರಸ್ತೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಕ್ರಾಸಿಂಗ್ ಹತ್ತಿರ 200 ಟಿಪ್ಪರ್ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅನೇಕ ಬಾರಿ ಅಕ್ರಮ ಮರಳು ಸ್ಥಗಿತಗೊಳಿಸುವ ಬಗ್ಗೆ ಹೋರಾಟ ನಡೆಸಿದ್ದೇನೆ. ಆದರೂ ಸಚಿವರು ಅಕ್ರಮ ಮರಳು ದಂಧೆ ನಡೆದಿಲ್ಲ, ಬಿಜೆಪಿಯವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡುತ್ತಾ ಬರುತ್ತಿದ್ದರು. ಆದರೆ ಇದೀಗ ತಮ್ಮ ಪಕ್ಷದ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರೇ ಅಕ್ರಮವಾಗಿ ದಾಸ್ತಾನು ಮಾಡಿದನ್ನು ಬಹಿರಂಗ ಪಡಿಸಿದ್ದಾರೆ.
ಈಗಲಾದರೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಇಲ್ಲಿಯವರೆಗೆ ದಂಡೋತಿ, ಮುಡಬೂಳ, ಕುನ್ನೂರು, ಹೊನಗುಂಟಾ, ಕಾಟಮದೇವರಹಳ್ಳಿ, ಮತ್ತಗಾ, ಭಾಗೋಡಿ ನದಿಗಳಲ್ಲಿ ಅಕ್ರಮ ಮರಳು ಸಾಗಾಟ ನಿರಂತರವಾಗಿ ನಡೆಯುತ್ತಿದೆ. ನದಿಯಲ್ಲಿ ಮರಳು ಕಡಿಮೆಯಾಗಿ ತೇವಾಂಶ ಕಡಿಮೆಯಾಗಿದೆ. ಮುಂದೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದರು.
ಅಕ್ರಮ ಮರಳು ದಂಧೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದ್ದರಿಂದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಮರಳು ದಂಧೆಕೋರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಮರಳು ದಂಧೆಯಲ್ಲಿ ತೋಡಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಬಡ ರೈತರು, ಕೋಲಿ ಕಾರ್ಮಿಕರು ತಮ್ಮ ಮನೆ ಕಟ್ಟಲು ಮರಳು ಪಡೆದರೆ ಅಕ್ರಮ ಎಂದು ಅಮಾಯಕರ ಮೇಲೆ ಪ್ರಕರಣ ದಾಖಲೆ ಮಾಡಿ ಜನ ಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆ. ಮರಳು ದಾಸ್ತಾನು ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು.
ಇಲ್ಲದಿದ್ದರೆ ಬಿಜೆಪಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಮುಖಂಡರಾದ ಚಂದ್ರಶೇಖರ ಅವಂಟಿ, ನಾಗರಾಜ ಹೂಗಾರ, ಬಾಲಾಜಿ ಬುರಬುರೆ, ಸುರೇಶ ಬೆನಕನಹಳ್ಳಿ, ಮಲ್ಲಿಕಾರ್ಜುನರೆಡ್ಡಿ ಇಜಾರ್, ಪುರಸಭೆ ಸದಸ್ಯರಾದ ಶ್ಯಾಮ ಮೇದಾ, ರಮೇಶ ಬೋಮ್ಮನಹಳ್ಳಿ, ದೀಪಕ್ ಹೊಸ್ಸೂರಕರ್ ಇದ್ದರು.