ಚಿತ್ತಾಪುರ: ಕಳೆದ 1 ವಾರದಿಂದ ಸತತವಾಗಿ ಸುರಿಯುತ್ತಿದ್ದ ಮಳೆ ಸೆ.3ರ ಮಂಗಳವಾರ ಬಿಡುವು ನೀಡಿದೆ.
ಕಾಗಿಣಾ ನದಿಯಲ್ಲಿ ಪ್ರವಾಹ ತಗ್ಗಿದ್ದು 24 ಗಂಟೆಗಳಿಂದ ಮುಳುಗಡೆಯಾಗಿದ್ದ ದಂಡೋತಿ ಹತ್ತಿರದ ಕಾಗಿಣಾ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಸೇತುವೆ ಮೇಲೆ ನಿರ್ಮಿಸಿದ ಸಿಮೆಂಟ್ ರಸ್ತೆ ಸಂಪೂರ್ಣ ಕಿತ್ತು ಹೋಗಿ ಗುಂಡಿಗಳು ಬಿದ್ದಿವೆ.
ಕಳೆದ ಹಲವು ತಿಂಗಳುಗಳ ಹಿಂದಷ್ಟೆ ಸೇತುವೆ ಮೇಲೆ ಸಿಮೆಂಟ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿ ಮಾಡಿದ್ದರಿಂದ ಮೊದಲ ಬಾರಿಗೆ ಉಂಟಾದ ಪ್ರವಾಹದ ರಭಸಕ್ಕೆ ರಸ್ತೆ ಕಿತ್ತು ಹೋಗಿದೆ.
ಸೇತುವೆ ಮೇಲೆ ನಿರ್ಮಿಸಿದ ಸಿಮೆಂಟ್ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟು ಉಬ್ಬಿ ನಿಂತಿವೆ. ಅಕ್ಕ ಪಕ್ಕದಲ್ಲಿ ವಾಹನ ಸವಾರರ ಯಾವುದೇ ರೀತಿಯ ತೊಂದರೆಯಾಗದಂತೆ ನಿರ್ಮಿಸಲಾದ ಕಂಬಗಳು ಸಹ ಕಿತ್ತಿಕೊಂಡು ಹೋಗಿವೆ ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸೇತುವೆ ಮೇಲೆ ಅಳವಡಿಸಿದ್ದ ಕುಡಿಯುವ ನೀರಿನ ಪೈಪ್ ಕಿತ್ತು ಹಾನಿಯಾಗಿದೆ. ವಿವಿಧ ಮೊಬೈಲ್ ನೆಟ್ ವರ್ಕ್ ಕೇಬಲ್ ತುಂಡಾಗಿ ಹಾಳಾಗಿದೆ.
ಎಸ್.ಪಿ. ಭೇಟಿ:
ತಾಲೂಕಿನ ದಂಡೋತಿ ಗ್ರಾಮದ ಕಾಗಿಣಾ ನದಿ ಸೇತುವೆ ಮೇಲಿನ ಸಿಮೆಂಟ್ ರಸ್ತೆ ಕಿತ್ತು ಹೋಗಿದೆ ಎನ್ನುವ ಮಾಹಿತಿ ಆಧರಿಸಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಭೇಟಿ ನೀಡಿ ಪರೀಶಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆ ಮೇಲೆ ವಾಹನ ಸವಾರರು ಸಂಚಾರ ಮಾಡಬೇಕೋ ಬೇಡವೋ ಎನ್ನುವ ಮಾಹಿತಿ ಕೊಡುವರೆಗೂ ಸೇತುವೆ ಮೇಲಿಂದ ವಾಹನಗಳು ಸಂಚಾರ ಮಾಡದಂತೆ ಮಾಡಬೂಳ ಹಾಗೂ ಚಿತ್ತಾಪುರ ಪೊಲೀಸ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಚಿವ ಶರಣಪ್ರಕಾಶ ಪಾಟೀಲ್ ಭೇಟಿ:
ಕಾಗಿಣಾ ನದಿ ಸೇತುವೆ ಮೇಲೆ ಪ್ರವಾಹ ಉಂಟಾಗಿದ್ದರಿಂದ ಸಿಮೆಂಟ್ ರಸ್ತೆ ಕಿತ್ತು ಹೋಗಿರುವ ಮಾಹಿತಿ ತಿಳಿಯುತ್ತಿದ್ದಂತೆ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಕೂಡಲೇ ಅಧಿಕಾರಿಗಳು ರಸ್ತೆಯ ಗುಣಮಟ್ಟ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಜಗದೇವಪ್ಪ ಪಾಳಾ, ಚಂದ್ರಶೇಖರ ತಿಗಡಿ, ಮಾಡಬೂಳ ಪಿಎಸ್’ಐ ಚೇತನ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.