Advertisement

ಚಿತ್ರಾವತಿ ಸುಬ್ರಹ್ಮಣ್ಯೇಶ್ವರಸ್ವಾಮಿ ಬ್ರಹ್ಮರಥೋತ್ಸವ ಇಂದು

07:21 AM Feb 10, 2019 | |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪುರಾಣ ಪ್ರಸಿದ್ಧ ಹಾಗೂ 3 ಶತಮಾನಗಳ ಐತಿಹಾಸಿಕ ಹಿನ್ನೆಲೆ ಇರುವ ಚಿಕ್ಕಬಳ್ಳಾಪುರ ನಗರದ ಹೊರ ವಲಯದಲ್ಲಿರುವ ಚಿತ್ರಾವತಿಯ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

Advertisement

ಚಿತ್ರಾವತಿ ದೇವಾಲಯ ನವ ವಧುವಿನಂತೆ ಸಿಂಗಾರಗೊಂಡಿದ್ದು, ದೇವಾಲಯ ಟ್ರಸ್ಟ್‌ ಜಾತ್ರೆ ಭಾಗವಾಗಿ ಇಡೀ ದೇವಾಲಯಗಳನ್ನು ಸುಣ್ಣ, ಬಣ್ಣಗಳಿಂದ ಅಲಂಕರಿಸುವ ಕಾರ್ಯವನ್ನು ಪೂರ್ಣಗೊಳಿಸಿದೆ. ಕಳೆದ ಶುಕ್ರವಾರದಿಂದಲೇ ಜಾತ್ರೆ ಮಹೋತ್ಸವದ ಪ್ರಯುಕ್ತ ಸುಬ್ರಹ್ಮಣ್ಯೇಶ್ವರ ದೇವರಿಗೆ ವಿವಿಧ ಧಾರ್ಮಿಕ ಕೈಂಕಾರ್ಯಗಳನ್ನು ನೆರವೇರಿಸಲಾಗಿದ್ದು, ಭಾನುವಾರ ಮಧ್ಯಾಹ್ನ 1 ರಿಂದ 2ಗಂಟೆಯವರೆಗೂ ಮಾಘ ಶುದ್ಧ ಷಷ್ಠಿಯಂದು ರಥೋತ್ಸವಕ್ಕೆ ಚಾಲನೆ ದೊರೆಯಲಿದೆ.

ಪೊಲೀಸ್‌ ಇಲಾಖೆ ನಿಗಾ: ಚಿತ್ರಾವತಿ ಜಾತ್ರೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಜಾತ್ರೆಗೆ ಬರುವ ಭಕ್ತರಿಗೆ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಲು ತಾಲೂಕು ಆಡಳಿತ ಅದರಲ್ಲೂ ವಿಶೇಷವಾಗಿ ತಾಪಂ, ಗ್ರಾಪಂಗಳು ಮುತುವರ್ಜಿ ವಹಿಸಿವೆ. ಪೊಲೀಸ್‌ ಇಲಾಖೆ ಹೆಚ್ಚಿನ ನಿಗಾ ವಹಿಸಿದ್ದು, ಹಲವು ಭದ್ರತಾ ಕಾರ್ಯಗಳನ್ನು ಕೈಗೊಂಡಿದೆ.

ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಮಠಮುದ್ರೆ ಎಸ್‌.ಕೃಷ್ಣಮೂರ್ತಿ ಹಾಗೂ ಸಹೋದರರು ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಕೊಡುತ್ತಿದ್ದು, ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಕೈಗೊಳ್ಳಬೇಕಾದ ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಾಲಯ ಟ್ರಸ್ಟಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ.

ಗಮನ ಸೆಳೆಯುತ್ತಿದೆ ಮಕ್ಕಳ ಆಟಿಕೆ: ಚಿತ್ರಾವತಿ ಜಾತ್ರೆ ಹಿನ್ನಲೆಯಲ್ಲಿ ಆರ್‌ಟಿಒ ಕಚೇರಿ ಪಕ್ಕದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸಿದ್ದು, ವಿಶೇಷವಾಗಿ ಮಕ್ಕಳ ಆಟಿಕೆ ವಸ್ತುಗಳ ಮಾರಾಟ, ಭಕ್ತರಿಗೆ ಬರಗು, ಬತ್ತಾಸು ಮತ್ತಿತರ ಸಿಹಿ ಪದಾರ್ಥಗಳನ್ನು ಮಾರಾಟ ಮಾಡುವ ಮಳಿಗೆಗಳು ತಲೆ ಎತ್ತಿವೆ.

Advertisement

ಮಕ್ಕಳಿಗೆ ತೂಗೂಯ್ನಾಲೆ, ಪುಟಾಣಿ ರೈಲು ಮತ್ತಿತರ ಆಟಗಳನ್ನು ಏರ್ಪಡಿಸಲಾಗಿದೆ. ಚಿತ್ರಾವತಿ ಈಗ ಜಾತ್ರೆಯಿಂದ ಕಂಗೊಳಿಸುತ್ತಿದ್ದು, ವಿವಿಧ ಅಲಂಕಾರಿಕ ಹಾಗೂ ಗೃಹಪಯೋಗಿ ವಸ್ತುಗಳು, ಮಕ್ಕಳ ಆಟದ ಸಾಮಾನುಗಳ ಮಾರಾಟ ಭರದಿಂದ ಸಾಗಿದೆ.

ಕಲ್ಯಾಣಿಗೆ ನೀರು: ಚಿತ್ರಾವತಿ ದೇವಾಲಯದ ಆವರಣದಲ್ಲಿರುವ ಚಕ್ರ ಆಕಾರದ ಕಲ್ಯಾಣಿ ನೋಡಲು ಸುಂದರವಾಗಿದ್ದು, ಜಾತ್ರೆಯ ವೇಳೆ ಭಕ್ತರು ಸ್ನಾನ ಮಾಡಲೆಂದು ಈಗ ಕಲ್ಯಾಣಿಯನ್ನು ನೆರೆಹೊರೆಯ ರೈತರ ಸಹಕಾರದಿಂದ ಕೊಳವೆ ಬಾವಿಗಳ ಮೂಲಕ ಪುಷ್ಕರಣಿಗೆ ನೀರು ತುಂಬಿಸಲಾಗಿದೆ.

ದೇವರ ವಾರ್ಷಿಕ ಬ್ರಹ್ಮರಥೋತ್ಸವದ ವೇಳೆ ಸಹಸ್ರಾರು ಭಕ್ತರು ಈ ಕಲ್ಯಾಣಿಯಲ್ಲಿ ಸ್ನಾನ ಮಾಡುವುದರಿಂದ ದೇವಾಲಯ ಸಮಿತಿ ಈಗಾಗಲೇ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ನೀರು ಹಾಯಿಸುತ್ತಿದೆ. ಜಾತ್ರೆಗೆ ಬರುವ ಸಹಸ್ರಾರು ಮುಖಂಡರು ದೇವರಿಗೆ ಹರಕೆ ಹೊತ್ತು ಬಂದು ಇಲ್ಲಿ ಕೇಶ ಮುಂಡನ ಮಾಡಿಸುವುದರಿಂದ ಕಲ್ಯಾಣಿಯಲ್ಲಿ ಪುಣ್ಯ ಸ್ನಾನ ಮಾಡಿ ತೆರಳುತ್ತಾರೆ.

ಚಿತ್ರಾವತಿ ಜಾತ್ರೆಗೆ 3 ಶತಮಾನಗಳ ಇತಿಹಾಸ: ಐತಿಹಾಸಿಕ ಚಿತ್ರಾವತಿ ಜಾತ್ರೆ ವೀಕ್ಷಣೆಗೆ ನೆರೆಯ ಆಂಧ್ರ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಸಹಸ್ರಾರು ಸಂಖ್ಯೆಯ್ಲಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ವಿಶೇಷವಾಗಿ 3 ಶತಮಾನಗಳ ಇತಿಹಾಸ ಇರುವ ಚಿತ್ರಾ ವತಿಯ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಈ ಭಾಗದ ಸಹಸ್ರಾರು ಭಕ್ತರ ಆರಾಧ್ಯ ದೈವ.

ವಿಶೇಷವಾಗಿ ಕಿವಿ ಹಾಗೂ ಚರ್ಮ ಕಾಯಿಲೆಯಿಂದ ಬಳಲುವ ರೋಗಿಗಳು ಇಲ್ಲಿ ಹರಕೆ ಮಾಡಿಕೊಂಡರೆ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ ಜಾತ್ರೆ ವೇಳೆ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಪ್ರಸಾದ ವಿತರಣೆ, ದಾಸೋಹ ಕಾರ್ಯ ನಡೆಯಲಿದೆ. ವಿಧೆವೆಯೊಬ್ಬರು ತಮ್ಮ ಚಿನ್ನಾಭರಣಗಳನ್ನು ಮಾರಾಟ ಮಾಡಿ ಪುಷ್ಕರಣಿಯೊಂದನ್ನು ದೇವಾಲಯದ ಮುಂದೆ ಕಟ್ಟಿಸಿದ್ದು, ಇದು ಹಲಸೂರಮ್ಮ ಕಲ್ಯಾಣಿ ಎಂದು ಪ್ರಸಿದ್ಧವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next