ಬಾಗೇಪಲ್ಲಿ: ಪಟ್ಟಣದ ಚಿತ್ರಾವತಿ ನದಿ ದಡದಲ್ಲಿರುವ ನಿರ್ಮಲ ಭಕ್ತಿ ತಾಣ, ಪ್ರಸಿದ್ಧ ಜಡಲಭೈರವೇಶ್ವರ ದೇವಾಲಯದ ಚಿತ್ರಾವತಿ ಇಕೋ ಉದ್ಯಾನ ಸಮರ್ಪಕ ನಿರ್ವಹಣೆ ಇಲ್ಲದೆ, ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಜನರ ಬಹುದಿನಗಳ ಕನಸಿನಂತೆ, ಹಲವು ಜನಪ್ರತಿನಿಧಿಗಳ ಒತ್ತಾಸೆಯಿಂದ ಈ ಚಿತ್ರಾವತಿ ಇಕೋ ಉದ್ಯಾನ ನಿರ್ಮಾಣವಾಗಿದೆ. ಸಮರ್ಪಕ ನಿರ್ವಹಣೆ ಮಾಡದ ಕಾರಣ, ಸೊರಗುತ್ತಿದೆ. ಗಿಡಗಂಟಿಗಳನ್ನು ಕತ್ತರಿಸದ ಕಾರಣ ಮನಬಂದಂತೆ ಬೆಳೆದುಕೊಂಡು ಉದ್ಯಾನದ ಹೊರಗಡೆಗೂ ಚಾಚಿಕೊಂಡಿವೆ. ಉದ್ಯಾನ ಸರಿಯಾದ ನಿರ್ವಹಣೆ ಇಲ್ಲದೆ, ಬೀಗ ಹಾಕಿದ್ದರೂ ಪುಂಡಪೋಕರಿಗಳು ಕಬ್ಬಿಣದ ಬಾಗಿಲು ಹತ್ತಿ ಒಳಗೆ ಪ್ರವೇಶಿಸಿ, ಮದ್ಯಪಾನ ಮಾಡಿ ಬಾಟಲಿ, ಬೀಡಿ, ಸಿಗರೆಟ್, ತಿಂಡಿ ತಿಂದ ಕವರ್‌ಗಳನ್ನು ಅಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಭದ್ರತಾ ಸಿಬ್ಬಂದಿ ನೇಮಕ ಮಾಡದ ಕಾರಣ ಕೊಠಡಿಗೆ ಬೀಗ ಹಾಕಲಾಗಿದೆ.
ಪಾರ್ಕ್‌ಗೆ ಭೂಮಿ ಪೂಜೆ: ಪಟ್ಟಣದ ಹೊರವಲಯದ ಚಿತ್ರಾವತಿ ನದಿ ದಡದ ಐತಿಹಾಸಿಕ ಜಡಲಬೈರವೇಶ್ವರ ದೇಗುಲದ ಪಕ್ಕದಲ್ಲಿ ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಯ 8.20 ಎಕರೆ ಪ್ರದೇಶದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ 2004ರಲ್ಲಿ ಚಿತ್ರಾವತಿ ಇಕೋ ಉದ್ಯಾನಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.
25 ಲಕ್ಷ ರೂ.ನಲ್ಲಿ ನಿರ್ಮಾಣ: ಪಟ್ಟಣದಲ್ಲಿ ಯಾವುದೇ ಉದ್ಯಾನ ಇಲ್ಲದ ಕಾರಣ, 2011ರಲ್ಲಿ ಮಾಜಿ ಶಾಸಕ ಎನ್.ಸಂಪಂಗಿ ಅವಧಿಯಲ್ಲಿ ಈ ಉದ್ಯಾನ ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಗೆ ಸೇರಿದ್ದರೂ, ಪುರಸಭೆಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಾಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ 25 ಲಕ್ಷ ರೂ. ಅನುದಾನದಲ್ಲಿ ಈ ಸುಂದರ ಉದ್ಯಾನ ನಿರ್ಮಾಣ ಮಾಡಿ, ಪುರಸಭೆಯಿಂದ ಇದರ ನಿರ್ವಹಣೆಗೆ ಸಿಬ್ಬಂದಿ ನೇಮಿಸಲಾಯಿತು. ಹಾಲಿ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಅವರ ಅಧಿಕಾರಾವಧಿಯಲ್ಲಿ ಮುಖ್ಯರಸ್ತೆಯಿಂದ ಶ್ರೀಜಡಲಬೈರವೇಶ್ವರ ದೇಗುಲದವರಿಗೂ ಡಾಂಬರು ರಸ್ತೆ ನಿರ್ಮಿಸಲಾಯಿತು. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಚಿತ್ರಾವತಿ ಇಕೋ ಉದ್ಯಾನದಲ್ಲಿ ಸೂಕ್ತ ನಿರ್ವ ಹಣೆ, ದಿನದ 24 ಗಂಟೆ ಕಾರ್ಯನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್, ಪೊಲೀಸ್ ಬಂದೋಬಸ್ತ್ ಗೆ ನೇಮಿಸ ಬೇಕಾಗಿದೆ. ಅನೈತಿಕ ಚಟುವಟಿಕೆ ತಡೆಯಲು ಕ್ರಮ ವಹಿಸಬೇಕಾಗಿದೆ ಎಂದು ಜನರು ಒತ್ತಾಯಿಸಿದ್ದಾರೆ.
ಹಲವು ಪ್ರಯತ್ನದ ನಂತರ ಉದ್ಯಾನ ನಿರ್ಮಾಣವಾಗಿದೆ. ಅದನ್ನು ತುಂಬಾ ಜೋಪಾನವಾಗಿ ಕಾಪಾಡಿಕೊಳ್ಳಬೇಕಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಪುರಸಭೆ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.
– ಬಿ.ಆರ್.ಕೃಷ್ಣ, ಸಂಶೋಧಕ.
ಚಿತ್ರಾವತಿ ಇಕೋ ಉದ್ಯಾನ ಘಂಟಂ ವಾರಿಪಲ್ಲಿ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಅದರ ನಿರ್ವಹಣೆ ಅವರೇ ಮಾಡಬೇಕು. ಈ ವಿಚಾರವನ್ನು ಸಹಾಯಕ ಅಭಿಯಂತರರಲ್ಲಿ ಚರ್ಚೆ ಮಾಡಿ, ಉದ್ಯಾನದಲ್ಲಿನ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗು ವುದು, ಸ್ವತ್ಛತೆಗೆ ಆದ್ಯತೆ ನೀಡಲಾಗುವುದು.
– ಮಧುಕರ್, ಪುರಸಭೆ ಮುಖ್ಯಾಧಿಕಾರಿ.