•ಎಂ.ಡಿ. ಮಶಾಖ
ಚಿತ್ತಾಪುರ: ಕಿರಾಣಿ ಅಂಗಡಿ, ಟೀ ಅಂಗಡಿ, ಹೋಟೆಲ್, ಪಾನ್ ಡಬ್ಟಾಗಳಲ್ಲೂ ಮದ್ಯ ಮಾರಾಟ, ರಾತ್ರೋ ರಾತ್ರಿ ಹಳ್ಳಿಗಳಿಗೆ ಮನಸೋಇಚ್ಛೆ ಸರಬರಾಜು, ಬಾರ್ ಮಾಲೀಕರಾದ ಪ್ರಭಾವಿಗಳು ಆಡಿದ್ದೇ ಆಟ. ಕಡಿಮೆ ಬೆಲೆ ಮದ್ಯ, ಹೆಚ್ಚಿನ ದರಕ್ಕೆ ಮಾರಾಟ.. ಇವು ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವುದಕ್ಕೆ ಉದಾಹರಣೆಗಳು.
ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ವಿವಿಧ ಸನ್ನದುದಾರರ ಹೆಸರಿನಲ್ಲಿ 32 ಮದ್ಯದ ಅಂಗಡಿಗಳಿವೆ. ಇದರಲ್ಲಿ ಸಿಎಲ್-2 ಪರವಾನಗಿ ಪಡೆದ 18, ಸಿಎಲ್-7 ಪರವಾನಗಿ ಪಡೆದ-5, ಸಿಎಲ್-9 ಪರವಾನಗಿ ಪಡೆದ-9 ಬಾರ್‌ಗಳಿವೆ. ಬಹುತೇಕ ಬಾರ್ ಹಾಗೂ ಬ್ರ್ಯಾಂಡಿ ಅಂಗಡಿಗಳು ಪ್ರಭಾವಿಗಳ ಒಡೆತನದಲ್ಲಿವೆ. ಬಹುತೇಕ ಮದ್ಯದಂಗಡಿಗಳಲ್ಲಿ ಅಬಕಾರಿ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿವೆ.
ತಾಲೂಕಿನ ಇಟಗಾ, ದಂಡೋತಿ, ಹೊಸ್ಸುರ್, ಸಾತನೂರ, ಭಂಕಲಗಾ, ಡೋಣಗಾಂವ, ರಾಮತೀರ್ಥ, ಅಲ್ಲೂರ (ಬಿ), ಅಲ್ಲೂರ (ಕೆ), ಆಲೂರ, ರಾವೂರ, ಮುಡಬೂಳ, ಮರಗೋಳ, ದಿಗ್ಗಾಂವ, ಭೀಮನಳ್ಳಿ, ಕರದಳ್ಳಿ, ದಂಡಗುಂಡ, ಸಂಕನೂರ, ಕದ್ದರಗಿ, ಯರಗಲ್, ಭಾಗೋಡಿ, ಮೋಗಲಾ, ಮೋಗಲಾ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಜೋರಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ದೂರುತ್ತಾರೆ.
ಪ್ರತಿ ಬಾಟಲ್ಗೆ 30ರಿಂದ 40 ರೂ. ವರೆಗೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಇನ್ನು ಸಿಎಲ್-7, ಸಿಎಲ್-9 ಪರವಾನಗಿ ಪಡೆದುಕೊಂಡಿರುವ ಸನ್ನದುದಾರರು ಗ್ರಾಹಕರಿಗೆ ಬೇಕಾಬಿಟ್ಟಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸಿಎಲ್-7, ಸಿಎಲ್-9 ಸನ್ನದುದಾರರು ಚಿಲ್ಲರೆ ವ್ಯಾಪಾರ ನಡೆಸುವಂತಿಲ್ಲ. ಆದರೆ ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಬಾರ್ ಹಾಗೂ ರೆಸ್ಟೋರೆಂಟ್ ಪರವಾನಗಿ ಪಡೆದುಕೊಂಡವರು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ರಾಜಾರೋಷವಾಗಿಯೇ ಚಿಲ್ಲರೆ ವ್ಯಾಪಾರ ನಡೆಸುತ್ತಿದ್ದಾರೆ. ಕೆಲವು ಬಾರ್‌ಗಳು ಬೆಳಗ್ಗೆಯೇ ತೆರೆಯುತ್ತವೆ. ಬಾರ್ ಮಾಲೀಕರು ನಿಯಮ ಉಲ್ಲಂಘಿಸುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಸಚಿವ ಪಿಯಾಂಕ್ ಖರ್ಗೆ ತರಾಟೆ: ಪಾನ್‌ಶಾಪ್‌ಗ್ಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಅಬಕಾರಿ ಇಲಾಖೆ ಯಾಕೆ ಕ್ರಮ ಕೈಗೊಂಡಿಲ್ಲ? ತಾಲೂಕಿಗೆ ಒಳ್ಳೆಯದಾಗಲಿ ಎಂದು ನಿಮ್ಮನ್ನು ಇಲ್ಲಿಗೆ ಕರೆಸಿಕೊಂಡರೇ ಅಕ್ರಮ ತಡೆದು ಒಳ್ಳೆಯದನ್ನು ಮಾಡುವ ಬದಲು ಅಕ್ರಮ ಅವ್ಯವಹಾರ ನಡೆದರೂ ಸುಮ್ಮನಿರುವುದು ಯಾಕೆ? ಅಕ್ರಮ ತಡೆಯುವರೇ ತಡೆಯಲ್ಲ ಅಂದರೆ ಹೇಗೆ? ಇಂತಹ ಅಕ್ರಮಗಳನ್ನು ಇನ್ನು ಮುಂದೇ ಸಹಿಸಲಾಗಲ್ಲ ಎಂದು ಜೂನ್ 26ರಂದು ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ಆದರೂ ಅಬಕಾರಿ ಇಲಾಖೆ ಅಧಿಕಾರಿಗಳು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವ ಚಾಳಿಗೆ ಅಂಟ್ಟಿಕೊಂಡಿರುವಂತೆ ಕಾಣುತ್ತಿದ್ದಾರೆಯೇ ಎಂಬ ಪ್ರಶ್ನೆ ನಾಗಕರಿಲ್ಲಿ ಕಾಡತೊಡಗಿದೆ.
ತಾಲೂಕು ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳ ಮಾಲೀಕರು ಅಬಕಾರಿ ಇಲಾಖೆ ನಿಯಮ ಗಾಳಿಗೆ ತೂರಿ ಮಾರಾಟದಲ್ಲಿ ತೊಡಗಿದ್ದಾರೆ. ಅಕ್ರಮ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನ ವಹಿಸಿದ್ದಾರೆ.
•
ಹೆಸರು ಹೇಳಲು ಇಚ್ಛಿಸದ ಪಟ್ಟಣದ ನಿವಾಸಿ.
ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಆದೇಶದಂತೆ ಇಲ್ಲಿಯವೆರೆಗೆ 15 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಕ್ರಮ ಮದ್ಯ ತಡೆಗಟ್ಟಲು ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸಹಭಾಗಿತ್ವ ಕೂಡ ಮುಖ್ಯವಾಗಿದೆ. ಅಬಕಾರಿ ಇಲಾಖೆ ಸಿಬ್ಬಂದಿ ಕೊರತೆ ನಡುವೆಯೂ ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ಸಿಬ್ಬಂದಿ ಕೊರತೆ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಕುರಿತು ದೂರುಗಳು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಅಂಗಡಿಗಳ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
•ಕೇದಾರನಾಥ, ಅಬಕಾರಿ ನಿರೀಕ್ಷಕ