ಚಿತ್ರಾಪುರ: ಭಾರತ ದೇವರ ಕೋಣೆಯಿದ್ದಂತೆ, ಇಡೀ ಪ್ರಪಂಚಕ್ಕೆ ಇಲ್ಲಿಂದಲೇ ಅಧ್ಯಾತ್ಮದ ಬೆಳಕು ಹರಿಯುತ್ತಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು. ಚಿತ್ರಾಪುರ ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳವಾರ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹಿಂದೆ ನಮ್ಮ ಮನೆ ಮನೆಯಲ್ಲೂ ದೇವರ ಕೋಣೆಗಳಿದ್ದವು, ಕಾಲ ಬದಲಾದಂತೆ ಮನೆ ವಾಸ್ತು ಬದಲಾವಣೆಯಾದರೂ ಈಗಲೂ ಕಾಣಬಹುದು. ನಿತ್ಯ ಭಜನೆ, ಅಧ್ಯಾತ್ಮದ ಪ್ರವಚನ ಹೀಗೆ ಸಂಸ್ಕಾರಯುತ ಜೀವನ ನಮ್ಮ ದೇಶದಲ್ಲಿ ಕಾಣಬಹುದಾಗಿದೆ. ದೇವಸ್ಥಾನ, ದೈವಸ್ಥಾನ, ನಾಗಬನಗಳಲ್ಲಿ ನಿತ್ಯ ಪೂಜೆ, ಪುರಸ್ಕಾರಗಳ ಮೂಲಕ ನಮ್ಮ ದೇಶದ ಜನರು ಲೌಕಿಕ ಸುಖ ಭೋಗಕ್ಕಿಂತ ಮಿಗಿಲಾಗಿ ದೇವ ಶಕ್ತಿಯೊಂದಿದೆ ಎಂದು ನಂಬಿಕೊಂಡು ಪೂಜಿಸುತ್ತಾ ಬರುತ್ತಿದ್ದಾರೆ. ನಮ್ಮ ಪರಂಪರೆ, ಆಚಾರವಿಚಾರವನ್ನು ವಿದೇಶಿಗರು ಆನುಸರಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭ ಚಿತ್ರಾಪುರ ದೇವಸ್ಥಾನವು ಸರ್ವ ಭಕ್ತರ, ವಿವಿಧ ಸಮಿತಿಗಳ, ಅಹೋ ರಾತ್ರಿ ದುಡಿಯುವ ಕಾರ್ಯಕರ್ತರ ಎಲ್ಲರ ಕರಸೇವೆಯಿಂದ ಅತ್ಯಂತ ಸುಂದರವಾಗಿ ಎದ್ದು ನಿಂತಿದೆ. ಇದಕ್ಕೆ ಎಲ್ಲರೂ ಅಭಿನಂದನಾರ್ಹರು ಎಂದರು.
ವೇ| ಮೂ| ಪಂಜ ಭಾಸ್ಕರ ಭಟ್ ಅವರು ಬ್ರಹ್ಮಕಲಶದ ಮಹತ್ವ, ಪೂಜಾದಿ ವಿಧಾನಗಳ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು. ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅನಂತ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ, ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಸಶಿಕುಮಾರ್ ಬೆಂಗ್ರೆ, ಉದ್ಯಮಿ ನವೀನ್, ಚಿತ್ರಾಪುರ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಮೇಶ್ ಅಂಚನ್, ಚಿತ್ರಾಪುರ ಶ್ರೀ ಮಹಾಂಕಾಳಿ ದೈವಸ್ಥಾನದ ಮೊಕ್ತೇಸರ ಸುಕುಮಾರ್ ದೇವಾಡಿಗ, ಕುಸ್ತಿ ಸಂಘದ ಸುಖಪಾಲ್ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಹರಿಶ್ಚಂದ್ರ ಆರ್. ಬೈಕಂಪಾಡಿ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬುಧವಾರ ನಾಗಪ್ರತಿಷ್ಠೆ, ಕಾಳ್ದಿ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಗಣಪತಿ ಶಾಸ್ತಾ ದೇವರ ಬಿಂಬಶುದ್ಧಿ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಾಮೂಹಿಕ ಕುಂಕುಮಾರ್ಚನೆ ನೆರವೇರಿತು.
ಗುರುವಾರ ಬೆಳಗ್ಗೆ 7ಕ್ಕೆ ಧೂಮಾವತಿ ದೈವದ ಪ್ರತಿಷ್ಠೆ, ಗಣಪತಿ, ಶಾಸ್ತಾ ದೇವರ ಪ್ರತಿಷ್ಠೆ ಮಹಾಪೂಜೆ, ಅನ್ನಸಂತರ್ಪಣೆ, ಭಜನೆ, ದೇರೆಬೈಲು ಶಿವಪ್ರಸಾದ ತಂತ್ರಿಯವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ರಾತ್ರಿ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.