ಚಿತ್ರದುರ್ಗ: ಇಲ್ಲೊಬ್ಬರು ಬರೋಬ್ಬರಿ 153 ಪುಟಗಳ ವಿವಾಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. ಇದು ಅಂತಿಂಥಾ ವಿವಾಹ ಕರೆಯೋಲೆ ಅಲ್ಲ. ಮದುವೆಗೆ ಬನ್ನಿ ಎಂಬುದರ ಜತೆಗೆ ಭಾರತೀಯ ಆಡಳಿತಾತ್ಮಕ ಸೇವೆ, ಕರ್ನಾಟಕ ಆಡಳಿತಾತ್ಮಕ ಸೇವೆ ಸೇರಿ 52 ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳ ಉದ್ಯೋಗ ಮಾರ್ಗದರ್ಶಿ ಈ ಕರೆಯೋಲೆಯಲ್ಲಿದೆ.
Advertisement
ತಮ್ಮ ಪುತ್ರನ ವಿವಾಹದ ನೆಪದಲ್ಲಿ ಸಮಾಜಕ್ಕೇನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಹಿರಿಯ ವಕೀಲ ಬಿ.ಎನ್.ತಿಪ್ಪೇಸ್ವಾಮಿ ಮತ್ತು ಪತ್ನಿ ಟಿ. ಸುರೇಖಾ 153 ಪುಟಗಳ ವಿವಾಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ. ಈ ದಂಪತಿಯ ಮೊದಲ ಪುತ್ರ ಟಿ.ಸಂಜಯ್ ಅವರ ವಿವಾಹ ಜೂನ್ 8 ಮತ್ತು 9 ರಂದು ಮೈಸೂರಿನ ಆರ್. ಶಿವರಂಜನಿ ಜತೆ ನಡೆಯಲಿದೆ. ವರ ಸಂಜಯ್ ಹಾಗೂ ಅವರ ಸ್ನೇಹಿತ ಮಹೇಶ್ ಶ್ರಮದಿಂದ ಇಂತಹ ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ ಸಿದ್ಧಗೊಂಡಿದೆ.
Related Articles
Advertisement
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಯಾವ ಯಾವ ಇಲಾಖೆಗಳಿವೆ, ಖಾಲಿ ಹುದ್ದೆಗಳ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಪ್ರಶ್ನೆಗಳು, ಪರೀಕ್ಷೆಗಳನ್ನು ಹೇಗೆ ಆತ್ಮವಿಶ್ವಾಸದಿಂದ ಎದುರಿಸಬೇಕೆಂಬ ಸಂಪೂರ್ಣ ಮಾಹಿತಿ ಇದೆ.
ಮದುವೆ ನೆಪದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶವಿತ್ತು. ಈ ವಿಷಯವನ್ನು ಸ್ನೇಹಿತ ಮಹೇಶ್ ಅವರಲ್ಲಿ ಪ್ರಸ್ತಾಪಿಸಿದೆ. ನಿರುದ್ಯೋಗಿಗಳಿಗೆ ಸಮಗ್ರವಾದ ಉದ್ಯೋಗ ಮಾಹಿತಿ ದೊರೆಯಬೇಕೆಂದು ತಿಳಿಸಿದಾಗ ಅವರು ಮತ್ತಷ್ಟು ಉತ್ಸಾಹದಿಂದ ನಿರುದ್ಯೋಗಿಗಳಿಗೆ ಜೀವನ ಪರ್ಯಂತ ಉಪಯೋಗಕ್ಕೆ ಬರುವಂತಹ ಮಾಹಿತಿಯನ್ನು ಹೆಕ್ಕಿ ತೆಗೆದು ಸುಂದರ ಪುಸ್ತಕ ಹೊರಬರಲು ಶ್ರಮಿಸಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ನೇಹಿತರು, ಬಂಧುಗಳಿಗೆ ಹಂಚಿಕೆ ಮಾಡಲಾಗಿದ್ದು, ನಿರುದ್ಯೋಗಿಗಳು ತಮಗೂ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಗೂ ನೀಡುತ್ತಿದ್ದೇವೆ.● ಟಿ. ಸಂಜಯ್ ಬಬ್ಬೂರು.