Advertisement

ಅಧಿಕಾರಿಗಳು-ಪಿಡಿಒಗಳ ಕಾರ್ಯವೈಖರಿಗೆ ಕಿಡಿ

12:51 PM Mar 01, 2020 | Team Udayavani |

ಚಿತ್ರದುರ್ಗ: ಹಣಕಾಸು ವರ್ಷ ಮುಗಿಯುತ್ತಾ ಬಂದಿದ್ದರೂ 14ನೇ ಹಣಕಾಸು ಯೋಜನೆಯಡಿ ನಿರ್ಮಾಣವಾಗಬೇಕಿದ್ದ ಶೌಚಾಲಯ ಮತ್ತಿತರ ಕಾಮಗಾರಿಗಳಿಗೆ ಅನುಮೋದನೆ ದೊರೆತಿಲ್ಲ. ಆದರೆ ಯಾವ ಅನುದಾನವೂ ಬಾಕಿ ಉಳಿದಿಲ್ಲ ಎಂದು ಸಭೆಯ ದಾರಿ ತಪ್ಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

Advertisement

ಶನಿವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿ.ಆರ್‌. ಹಳ್ಳಿ ಕ್ಷೇತ್ರದ ಸದಸ್ಯ ಗುರುಮೂರ್ತಿ ಎತ್ತಿದ ಪ್ರಶ್ನೆಗೆ ಬಹುತೇಕ ಸದಸ್ಯರು ಧ್ವನಿಗೂಡಿಸಿದರು. ಅಧಿಕಾರಿಗಳು, ಪಿಡಿಒಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

ಮದಕರಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 50 ಲಕ್ಷ ರೂ. ವೆಚ್ಚದ ಶೌಚಾಲಯ ಕಾಮಗಾರಿಗಳಿಗೆ ಅನುಮೋದನೆ ನೀಡಲು ಮನವಿ ಮಾಡಲಾಗಿತ್ತು. ಆದರೆ ಆ ಕಡತಕ್ಕೆ ಜಿಪಂ ಸಿಇಒ ಸತ್ಯಭಾಮಾ ಅವರು ನವೆಂಬರ್‌ನಲ್ಲೇ ಇನಿಶಿಯಲ್‌ ಹಾಕಿ ಪಿಡಿಒ ಜತೆ ಚರ್ಚಿಸಲು ಕರೆದಿದ್ದಾರೆ. ಆದರೆ ಇದುವರೆಗೂ ಪಿಡಿಒ ಸಿಕ್ಕಿಲ್ಲವೇ, ಹಾಗಾದರೆ ಪಿಡಿಒ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದಿರಿ ಎಂದು ಸಿಇಒ ಅವರನ್ನು ಪ್ರಶ್ನಿಸಿದರು.

ಬೇಸ್‌ಲೈನ್‌ ಸಮೀಕ್ಷೆಯಲ್ಲಿ ಬಿಟ್ಟು ಹೋಗಿರುವ ಕುಟುಂಬಗಳಿಗೆ ಸಂಬಂ ಧಿಸಿದಂತೆ ಇನ್ನೂ 18 ಸಾವಿರ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಈ ಪೈಕಿ 10 ಸಾವಿರ ಶೌಚಾಲಯ ನಿರ್ಮಾಣವಾಗಿದ್ದು, ಇನ್ನೂ 8 ಸಾವಿರ ಬಾಕಿ ಇದೆ. ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ತೋರಿಸದ ಜಿಲ್ಲೆಯ 5 ಗ್ರಾಮ ಪಂಚಾಯತ್‌ ಗಳನ್ನು ಹೊರತುಪಡಿಸಿ ಉಳಿದ ಎಲ್ಲ ಗ್ರಾಪಂಗಳಿಗೆ 14ನೇ ಹಣಕಾಸು ಆಯೋಗದ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಸಿಇಒ ಸತ್ಯಭಾಮ ಪ್ರತಿಕ್ರಿಯಿಸಿದರು.

ಮದಕರಿಪುರ ಪಿಡಿಒ ಈ ವಿಚಾರದಲ್ಲಿ ಆಸಕ್ತಿ ತೋರಿಸಿಲ್ಲ. ಯಾಕೆ
ಕರೆದು ಚರ್ಚಿಸಿಲ್ಲ ಎಂದು ಪ್ರಶ್ನಿಸಬೇಡಿ. ಕರೆದು ಮಾತನಾಡಿದ್ದೇವೆ. ನಮ್ಮ ಸಮಸ್ಯೆ ನಮಗೇ ಗೊತ್ತು. ಮದಕರಿಪುರ ಪಿಡಿಒ ಹಠಕ್ಕೆ ಬಿದ್ದಿದ್ದಾರೆ ಎಂದು ಸಿಇಒ ಅಸಹಾಯಕತೆ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪಿ. ಪ್ರಕಾಶ್‌ಮೂರ್ತಿ ಮಾತನಾಡಿ, ಜಿಲ್ಲೆಯ ಯಾವುದೇ ಗ್ರಾಮ ಪಂಚಾಯತ್‌ಗಳಲ್ಲಿ ಅನುದಾನ ಬಾಕಿ ಉಳಿದಿಲ್ಲ ಎಂದು ಸಭೆಗೆ ಸಿಇಒ ಮಾಹಿತಿ ನೀಡಿದ್ದಾರೆ. ಆದರೆ ಇಲ್ಲಿ ಶೌಚಾಲಯ ಕಟ್ಟಲು ಮಂಜೂರಾದ 50 ಲಕ್ಷ ರೂ. ಹಣ ಹಾಗೆಯೇ ಇದೆ. ಇನ್ನೂ ಎಷ್ಟು ಪಂಚಾಯತ್‌ಗಳಲ್ಲಿ ಈ ಸ್ಥಿತಿ ಇದೆಯೋ ಗೊತ್ತಾಗುತ್ತಿಲ್ಲ. ಅಧಿಕಾರಿಗಳು ಸಿಇಒ ಅವರಿಗೆ ತಪ್ಪು ಮಾಹಿತಿ ಕೊಟ್ಟಿದ್ದಾರೋ ಅಥವಾ ಸಿಇಒ ಅವರೇ ತಪ್ಪು ವರದಿ ನೀಡುತ್ತಿದ್ದಾರೋ ತಿಳಿಯದು. ಇದರಿಂದ ಜಿಲ್ಲೆಗೆ ನಷ್ಟವಾಗುತ್ತದೆ. ತಪ್ಪು ಮಾಹಿತಿ ಕೊಟ್ಟು ಸಭೆಯನ್ನು ತಪ್ಪು ದಾರಿಗೆಳೆಯುವುದು ಸರಿಯಲ್ಲ. ಶೌಚಾಲಯ ನಿರ್ಮಾಣಕ್ಕೆ ಸಂಬಂ ಸಿದಂತೆ ಸ್ಪಂದಿಸದ ಪಿಡಿಒ ವಿರುದ್ಧ ಕ್ರಮ ಜರುಗಿಸಿ ಅಮಾನತು ಮಾಡಿ. ನೀವೇ ಅಸಹಾಯಕತೆ ವ್ಯಕ್ತಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಇಒ ತಿಳಿಸಿದರು.

Advertisement

ಸದಸ್ಯೆ ಆರ್‌. ಗೀತಾ ಮಾತನಾಡಿ, ಜಿಲ್ಲೆಯಲ್ಲಿ ಶೌಚಾಲಯ ನಿರ್ಮಿಸಿದರೆ ಸಾಲದು. ಹೋಬಳಿಗೊಂದು ಸಕ್ಕಿಂಗ್‌ ಮಿಷನ್‌ ನೀಡಬೇಕು. ಹಿರಿಯೂರು ತಾಲೂಕು ವ್ಯಾಪ್ತಿಯಲ್ಲಿ ಕೇವಲ 2 ಸಕ್ಕಿಂಗ್‌ ಮಿಷನ್‌ ಇದ್ದು, ಸಾರ್ವಜನಿಕರು 2500 ರೂ. ನೀಡಿ ಸಕ್ಕಿಂಗ್‌ ಮಿಷನ್‌ ಉಪಯೋಗಿಸುವ ಸ್ಥಿತಿ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಕ್ಕಿಂಗ್‌ ಮಿಷನ್‌ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿದರು. ಇದಕ್ಕೆ ಸಿಇಒ ಅವರು ಸಮ್ಮತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next