Advertisement

ಓಬವ್ವನ ಸಾಹಸಗಾಥೆ; ಹಾಡಲ್ಲಿ ವೀರನಾರಿಯ ಗುಣಗಾನ

09:13 AM May 31, 2019 | Nagendra Trasi |

ಚಿತ್ರದುರ್ಗ ಅಂದಾಕ್ಷಣ ಮೊದಲು ನೆನಪಾಗೋದೇ ಅಲ್ಲಿನ ಕಲ್ಲಿನಕೋಟೆ, ರಾಜವೀರ ಮದಕರಿನಾಯಕ ಮತ್ತು ವೀರವನಿತೆ ಒನಕೆ ಓಬವ್ವ. ಈಗ ಇದೇ ಚಿತ್ರದುರ್ಗ ಮತ್ತು ಅಲ್ಲಿ ವೀರ ವನಿತೆಯಾಗಿ ಮಡಿದ ಒನಕೆ ಓಬವ್ವನ ಜೀವನಗಾಥೆ ಚಿತ್ರರೂಪದಲ್ಲಿ ತೆರೆಮೇಲೆ ಬರುತ್ತಿದೆ. ಅಂದಹಾಗೆ, ಆ ಚಿತ್ರಕ್ಕೆ “ಚಿತ್ರದುರ್ಗದ ಒನಕೆ ಓಬವ್ವ’ ಎಂದು ಹೆಸರಿಡಲಾಗಿದೆ. ಈ ಹಿಂದೆ ಅನೇಕ ಭಕ್ತಿ ಪ್ರಧಾನ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಬಿ. ಎ ಪುರುಷೋತ್ತಮ್‌, ಈ ಐತಿಹಾಸಿಕ ಕಥನ ಹೊಂದಿರುವ “ಚಿತ್ರದುರ್ಗದ ಒನಕೆ ಓಬವ್ವ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

Advertisement

ಇನ್ನು ಇದು ಖ್ಯಾತ ಲೇಖಕ ಡಾ.ಬಿ.ಎಲ್‌ ವೇಣು ಅವರ ಕಥೆ ಆಧರಿಸಿದ ಚಿತ್ರ. ಹಾಗಾಗಿ ಅವರೇ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. “ಚಿತ್ರದುರ್ಗದ ಒನಕೆ ಓಬವ್ವ’ ಚಿತ್ರದಲ್ಲಿ ಓಬವ್ವನ ಬಾಲ್ಯ, ಯೌವ್ವನ, ಗಂಡ, ಆಕೆಯ ವ್ಯಕ್ತಿತ್ವ, ಸಾಧನೆಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆಯಂತೆ. ಕೋಟೆ ಕಾಯುವವನ ಹೆಂಡತಿಯಾಗಿ ಓಬವ್ವ ಹೇಗಿದ್ದಳು, ಛಲವಾದಿ ಹೆಣ್ಣಾಗಿ ಎದುರಾಳಿ ಸೈನಿಕರನ್ನು ಒನಕೆಯಿಂದ ಹೇಗೆ ಬಡಿದು ಕೊಂದಳು. ಅಂದಿನ ಯುದ್ದ ಹೇಗೆ ನಡೆಯಿತು ಹೀಗೆ ಇಂಥ ಹತ್ತಾರು ಸನ್ನಿವೇಶಗಳು ಈ ಚಿತ್ರದ ಮೂಲಕ ತೆರೆದುಕೊಳ್ಳಲಿದೆಯಂತೆ.

“ಚಿತ್ರದುರ್ಗದ ಒನಕೆ ಓಬವ್ವ’ ಚಿತ್ರದಲ್ಲಿ ನವನಟಿ ತಾರಾ ಓಬವ್ವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಓಬವ್ವಳ ತಂದೆಯಾಗಿ ಬಾಲಕೃಷ್ಣ, ಓಬವ್ವಳ ಗಂಡನಾಗಿ ಅಕ್ಷಯ್‌, ಹೈದರಾಲಿಯಾಗಿ ಗಣೇಶ್‌ ರಾವ್‌ ಕೇಸರ್ಕರ್‌, ಕಳ್ಳ ನರಸಯ್ಯನಾಗಿ ವಿಕ್ರಂ ಉದಯ ಕುಮಾರ್‌, ಮದಕರಿನಾಯಕನಾಗಿ ಚೇತನ್‌, ಸಿರಿ ಅಜ್ಜಿ ಆಗಿ ಪುಷ್ಪಾಸ್ವಾಮಿ, ಮಹಾರಾಣಿ ಪಾತ್ರಕ್ಕೆ ಶಿಲ್ಪಾಗೌಡ, ದಿವಾನ್‌ ಪೂರ್ಣಯ್ಯನಾಗಿ ಜಿಮ್‌ ಶಿವು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

“ಚಿತ್ರದುರ್ಗದ ಒನಕೆ ಓಬವ್ವ’ ಚಿತ್ರದ ಹಾಡುಗಳಿಗೆ ಎಸ್‌. ನಾಗು ಸಂಗೀತ ಸಂಯೋಜಿಸಿದ್ದು, ವಿಜಯ್‌ ಭರಮಸಾಗರ, ಕುಮಾರ್‌, ಬಿ.ಎ ಪುರುಷೋತ್ತಮ್‌ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಗೌರಿ ವೆಂಕಟೇಶ್‌ ಛಾಯಾಗ್ರಹಣ, ಬೇಬಿ ನಾಗರಾಜ್‌ ಸಂಕಲನ, ಜಿ.ಕುಮಾರ್‌ ವಸ್ತ್ರ ವಿನ್ಯಾಸ ಕಾರ್ಯ ನಿರ್ವಹಿಸಿದ್ದಾರೆ. ನಿರ್ಮಾಪಕ ಎ. ದೇವರಾಜ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರೀಕರಣ ಬಹುಭಾಗ ಚಿತ್ರದುರ್ಗದ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಓಬವ್ವ ಇದ್ದಂತಹ ಕೋಟೆ, ಚಂದವಳ್ಳಿ ತೋಟ ಮತ್ತು ಅರಮನೆಗಳನ್ನು ವಿಶೇಷ ಸೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಬಿಡುಗಡೆಯ ತಯಾರಿಯಲ್ಲಿರುವ “ಚಿತ್ರದುರ್ಗದ ಒನಕೆ ಓಬವ್ವ’ ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ, ಪ್ರಚಾರ ಕಾರ್ಯಕ್ಕೆ ಮುಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next