ಚಿತ್ರದುರ್ಗ: ಗಂಡು ಮೆಟ್ಟಿದ ನಾಡು ಚಿತ್ರದುರ್ಗ ಜಿಲ್ಲೆಯ ಇಡೀ ಆಡಳಿತ ವ್ಯವಸ್ಥೆ ಈಗ ಮಹಿಳಾ ಅಧಿಕಾರಿಗಳ ಕೈ ತುದಿಯಲ್ಲಿದೆ. ಈವರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮಾತ್ರ ಪ್ರಮುಖ ಮಹಿಳಾ ಅಧಿಕಾರಿಗಳಿದ್ದರು. ಆದರೆ, ಈಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಹಿಳಾ ಅಧಿಕಾರಿಯೇ ಅಧಿಕಾರ ಸ್ವೀಕರಿಸಿದ್ದು, ಇಡೀ ಜಿಲ್ಲಾಡಳಿತ ವನಿತೆಯರ ಕೈ ಸೇರಿದಂತಾಗಿದೆ.
ಜ.31 ರಾತ್ರಿ ರಾಜ್ಯ ಸರ್ಕಾರ ಹೊರಡಿಸಿದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶದಲ್ಲಿ ಚಿತ್ರದುರ್ಗದ ಎಸ್ಪಿ ಡಾ|ಕೆ. ಅರುಣ್ ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ವಿಭಾಗಕ್ಕೆ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಜಿ. ರಾಧಿಕಾ ಬೆಂಗಳೂರಿನಿಂದ ಬಂದು ಅಧಿಕಾರ ವಹಿಸಿಕೊಂಡಿದ್ದಾರೆ. ರಾಧಿಕಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂಬ ಆದೇಶ ಹೊರ ಬೀಳುತ್ತಲೇ ಸೋಶಿಯಲ್ ಮೀಡಿಯಾಗಳಲ್ಲಿ ಓಬವ್ವನ ನಾಡಿನಲ್ಲಿ ವನಿತೆಯರ ಪಾರಮ್ಯ ಎಂಬರ್ಥದಲ್ಲಿ ನೂರಾರು ಕಮೆಂಟ್, ಮೀಮ್ಸ್ ಓಡಾಡುತ್ತಿವೆ. ಜಿಲ್ಲೆಯ ಕೆಲ ಮಹಿಳಾ ಮುಖಂಡರಂತು ಯಾವೆಲ್ಲಾ ಇಲಾಖೆಗಳಲ್ಲಿ ಮಹಿಳಾ ಅಧಿಕಾರಿಗಳಿದ್ದಾರೆ ಎಂಬ ಪಟ್ಟಿ ಮಾಡಿ ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿ ಸಂಭ್ರಮಿಸುತ್ತಿದ್ದಾರೆ.
ಹೆಣ್ಣು ಅಡುಗೆ ಮನೆಗೆ ಸೀಮಿತ ಎಂಬ ಮಾತುಗಳಿದ್ದವು. ಆದರೆ, ಈಗ ಇಡೀ ಚಿತ್ರದುರ್ಗ ಜಿಲ್ಲಾಡಳಿತದ ಆಡಳಿತ ವ್ಯವಸ್ಥೆ ಇರುವುದು ಮಹಿಳೆಯರ ಕೈಯಲ್ಲಿ ಅನ್ನೋದು ವಿಶೇಷವಾಗಿದೆ.
ಮಹಿಳಾ ಅಧಿಕಾರಿಗಳ ಪಟ್ಟಿ: ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಪಂ ಸಿಇಒ ಸಿ. ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಭಾರತಮ್ಮ, ಸಂಚಾರಿ ಠಾಣೆ ವೃತ್ತ ನಿರೀಕ್ಷಕಿ ರೇವತಿ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿ ಕಾರಿ ವೈಶಾಲಿ, ನಗರಸಭೆ ವ್ಯವಸ್ಥಾಪಕಿ ಮಂಜುಳಾ, ಜಿಲ್ಲಾ ಕಾರಾಗೃಹ ಅಧೀಕ್ಷಕಿ ಅಪೇಕ್ಷಾ ಸೇರಿದಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ, ಅಬಕಾರಿ ನಿರೀಕ್ಷಕಿ ಹೀಗೆ ಸಾಲು ಸಾಲು ಮಹಿಳಾ ಅಧಿಕಾರಿಗಳ ಪಟ್ಟಿಯೇ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಜನಪ್ರತಿನಿಧಿಗಳೂ ಇದ್ದಾರೆ: ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾದ ಮಹಿಳಾ ಶಾಸಕಿ ಹಿರಿಯೂರು ಕ್ಷೇತ್ರದ ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಕೂಡಾ ಪ್ರಮುಖ ಸ್ಥಾನಗಳಲ್ಲಿದ್ದಾರೆ.
ಮೂವರು ಮಹಿಳಾ ಅಧಿಕಾರಿಗಳಿಂದ ಜಿಲ್ಲೆ ಸುಭದ್ರವಾಗಿರುತ್ತೆ. ಇದೊಂದು ಬೆಸ್ಟ್ ಆಫ್ ದಿ ಬೆಸ್ಟ್ ಟೈಮ್ ಎನ್ನುವಂತೆ ಕೆಲಸ ಮಾಡುತ್ತೇವೆ.
.
ಜಿ. ರಾಧಿಕಾ, ಎಸ್ಪಿ, ಚಿತ್ರದುರ್ಗ