ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಬಯಲುಸೀಮೆ, ಮಧ್ಯ ಕರ್ನಾಟಕ, ಬರದ ನಾಡು, ಕೋಟೆ ನಾಡು ಎಂಬ ಹಲವು ವಿಶೇಷತೆ ಹೊಂದಿರುವ ಚಿತ್ರದುರ್ಗ ಜಿಲ್ಲೆ ಅಪ್ಪಟ ಪಶುಪಾಲಕರ ನಾಡು. ಹೌದು, ಬುಡಕಟ್ಟುಗಳ ತವರಾಗಿರುವ ಈ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಗಳು ಸಾಕಷ್ಟಿವೆ. ಸರ್ಕಾರಿ ನೌಕರಿ, ಕೈಗಾರಿಕೆ ಮತ್ತಿತರೆ ಉದ್ಯೋಗಗಳಿಗಿಂತ ಕೃಷಿ, ಪಶುಪಾಲನೆ ನಂಬಿ ಬದುಕುತ್ತಿರುವವರೇ ಹೆಚ್ಚು.
ಈ ರೀತಿಯ ಭೂಮಿಕೆ ಹೊಂದಿರುವ ಜಿಲ್ಲೆಗೆ ಅತ್ಯಂತ ಅಗತ್ಯವಾಗಿ ಆಗಬೇಕಾದ ಕೆಲಸ ಪಶು ಸಂಗೋಪನಾ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ. ಕೆಲ ವರ್ಷಗಳ ಹಿಂದೆ ಈ ಕಾಲೇಜು ಬೇಡಿಕೆ ಕುರಿತು ಸಣ್ಣ ಮಟ್ಟದ ಕೂಗು ಎದ್ದಿತ್ತಾದರೂ ಅದಕ್ಕೆ ಅಷ್ಟೇನೂ ಮನ್ನಣೆ ಸಿಗಲಿಲ್ಲ. ಆದರೆ ಮಿತಿ ಮೀರುತ್ತಿರುವ ನಿರುದ್ಯೋಗ ಸಮಸ್ಯೆಯ ನಡುವೆ ಜಿಲ್ಲೆಯ ಜನತೆ ಇನ್ನೂ ಜೀವ ಹಿಡಿದಿದ್ದಾರೆ ಎಂದರೆ ಅದಕ್ಕೆ ಕಾರಣ ನಂಬಿರುವ ಪಶುಗಳು. ಈಗ ಅದೇ ವಿಚಾರದಲ್ಲಿ ಒಂದು ಕಾಲೇಜು ಆರಂಭವಾದರೆ ಪರಂಪರಾಗತವಾಗಿ ಬಂದಿರುವ ಪಶುಪಾಲನೆಯನ್ನು ಮತ್ತಷ್ಟು ಅಚ್ಚುಕಟ್ಟಾಗಿ, ಮತ್ತಷ್ಟು ಲಾಭದಾಯಕವಾಗಿ ಮಾಡುವ ಕೌಶಲ್ಯ ಪಶು ಸಂಗೋಪನಾ ಡಿಪ್ಲೋಮಾ ಕೋರ್ಸ್‌ನಿಂದ ಬರುತ್ತದೆ.
ಇತ್ತೀಚೆಗೆ ಕುರಿಗಳಿಗೆ ನೀಲಿ ನಾಲಿಗೆ ರೋಗ ಬಂದು ಸಾವಿರಕ್ಕೂ ಹೆಚ್ಚು ಕುರಿಗಳು ಮೃತಪಟ್ಟವು. ಒಂದು ವೇಳೆ ಪಶು ಸಂಗೋಪನಾ ಪಾಲಿಟೆಕ್ನಿಕ್ ಕಾಲೇಜು ಇದ್ದಿದ್ದರೆ ತಕ್ಷಣ ಅಲ್ಲಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಮೂಲಕ ರೋಗ ಪತ್ತೆ ಮಾಡಿ ಲಸಿಕೆ ಹಾಕಿಸಲು ಸಾಧ್ಯವಾಗುತ್ತಿತ್ತು. ಆದರೆ ಅದ್ಯಾಕೋ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಭರಾಟೆಯಲ್ಲಿ ಅಪ್ಪಟ ಗ್ರಾಮೀಣ ಮಕ್ಕಳು ಅಧ್ಯಯನ ಮಾಡುವ ಪಶು ಸಂಗೋಪನೆಯಂತಹ ಕಾಲೇಜುಗಳನ್ನು ಜಿಲ್ಲೆಗೆ ತರುವ ಪ್ರಯತ್ನ ಸರಿಯಾಗಿ ನಡೆಯದೇ ಇರುವುದು ವಿಪರ್ಯಾಸ.
ಏನಿದು ಪಶುಸಂಗೋಪನಾ ಪಾಲಿಟೆಕ್ನಿಕ್?: ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಗ್ರಾಮೀಣ ಭಾಗದ 20 ವರ್ಷದೊಳಗಿನ ಅಭ್ಯರ್ಥಿಗಳಿಗೆ ಸೀಮಿತವಾಗಿ ಪಶು ಸಂಗೋಪನಾ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗಿದೆ. 2 ವರ್ಷದ ಅವಧಿಗೆ 8 ಸೆಮಿಸ್ಟರ್‌ನಲ್ಲಿ ಈ ಕೋರ್ಸ್ ಪೂರ್ಣಗೊಳ್ಳಲಿದೆ. ಪಶುಪಾಲನೆ, ಮೇವು ಉತ್ಪಾದನೆ, ಹೈನುಗಾರಿಕೆ, ಕುರಿ, ಮೊಲ, ಕೋಳಿ ಹಾಗೂ ಕೋಳಿ ಸಾಕಾಣಿಕೆ, ಪ್ರಯೋಗಾಲಯ ತಂತ್ರಗಳು, ಪ್ರಾಣಿಗಳಿಗೆ ಪ್ರಥಮ ಚಿಕಿತ್ಸೆ, ಲಸಿಕೆ ಹಾಕುವುದು, ಕೃತಕ ಗರ್ಭಧಾರಣೆ, ಉತ್ಪನ್ನಗಳ ತಯಾರಿಕೆ ಕಲಿಸಲಾಗುತ್ತದೆ.
ಎರಡು ವರ್ಷದ ಅಧ್ಯಯನದ ಅವಧಿಯಲ್ಲಿ ಪ್ರತಿ ತಿಂಗಳು ಒಂದು ಸಾವಿರ ರೂ. ಶಿಷ್ಯ ವೇತನ ನೀಡುವ ವ್ಯವಸ್ಥೆಯೂ ಇದೆ. ಹಾಗಾಗಿ ಪಶುಪಾಲನೆಯೇ ಮುಖ್ಯವಾಗಿರುವ ಜಿಲ್ಲೆಯಲ್ಲಿ ಪಶು ಸಂಗೋಪನಾ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೆ ಸರ್ಕಾರ ಮನಸ್ಸು ಮಾಡಬೇಕಿದೆ.