ಚಿತ್ರದುರ್ಗ: ಕೆಲವೇ ದಿನಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಇದೀಗ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.
ಮೊದಲನೇ ಪೋಕ್ಸೋ ಪ್ರಕರಣದಲ್ಲಿ ನ.16 ರಂದು ಹೈಕೋರ್ಟ್ ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ ಮುರುಘಾ ಶ್ರೀಗಳಿಗೆ ಎರಡನೇ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಜಾಮೀನು ರಹಿತ ಬಂಧನಕ್ಕೆ ಆದೇಶಿಸಿದೆ.
ನ.16 ರಂದು ಮುರುಘಾ ಶರಣರು ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಆಗಿದ್ದರು. ಬಿಡುಗಡೆಗೆ ಮೊದಲು ಎರಡನೇ ಪೋಕ್ಸೋ ಪ್ರಕರಣದ ಬಾಡಿ ವಾರೆಂಟ್ ಕುರಿತ ವಿಚಾರಣೆ ನಡೆಯುತ್ತಿತ್ತು. ಬೆಳಗ್ಗೆ ಕಾರಾಗೃಹದಿಂದ ವೀಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಶ್ರೀಗಳು, ಮಧ್ಯಾಹ್ನದ ವಿಚಾರಣೆಗೆ ಮೊಬೈಲ್ ಮೂಲಕ ವಿಸಿಗೆ ಬಂದಿದ್ದರು.
ಇದನ್ನೂ ಓದಿ:Kantara 2: ಪಂಜುರ್ಲಿ ದೈವದ ಮೂಲದ ಸುತ್ತ ಸಾಗಲಿದೆ ʼಕಾಂತಾರ-2ʼ ಸಿನಿಮಾದ ಕಥೆ?
ವಿಚಾರಣೆ ನಡುವೆಯೇ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನ.18 ರಂದು ನಡೆದ ನ್ಯಾಯಾಲಯ ಕಲಾಪದ ವೇಳೆ ಜಿಲ್ಲಾ ಕಾರಾಗೃಹದ ಬಿಡುಗಡೆ ಪ್ರಕ್ರಿಯೆ ಕುರಿತು ತನಿಖೆಗೆ ಆದೇಶಿಸಲಾಗಿತ್ತು.
ಇದೇ ಪ್ರಕರಣದ ಆದೇಶವನ್ನು ನ.20 ಸೋಮವಾರಕ್ಕೆ ಕಾಯ್ದಿರಿಸಿದ್ದ ನ್ಯಾಯಾಲಯ ನಾಳೆಯೊಳಗೆ ಬಂಧಿಸಿ ಕರೆತರುವಂತೆ ಆದೇಶಿಸಿದೆ.