ಚಿತ್ರದುರ್ಗ: ಮಠ, ಮಂದಿರ, ಗುರುಗಳಿಲ್ಲದ ಭಾರತವನ್ನು ಊಹಿಸಲಾಗದು. ಈ ದೇಶದ ಮಣ್ಣಿನ ಕಣ ಕಣದಲ್ಲೂ ದೈವತ್ವವಿದೆ ಎಂದು ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಜೆ.ಎನ್. ಕೋಟೆ ಗ್ರಾಮದಲ್ಲಿ ನಡೆದ ಶ್ರೀ ಕರಿಯಮ್ಮದೇವಿ ದೇವಾಲಯ ಕಳಶ ಸ್ಥಾಪನೆ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಆಚಾರ, ವಿಚಾರ, ಕಲೆ, ಸಂಸ್ಕೃತಿ, ಮಠ, ಮಂದಿರ ಹಾಗೂ ಗುರುಗಳು ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿವೆ. ದೇವಸ್ಥಾನವಿಲ್ಲದ ಗ್ರಾಮಗಳೇ ಇಲ್ಲ ಎಂದರು.
ಹಿಂದೆ ನ್ಯಾಯಾಲಯಗಳಿಲ್ಲದ ಸಂದರ್ಭದಲ್ಲಿ ದೇವಸ್ಥಾನಗಳೇ ಕೋರ್ಟ್‌ನಂತೆ ಕೆಲಸ ಮಾಡಿವೆ. ಮಠ, ಮಂದಿರಗಳಿಂದಾಗಿ ಅಪರಾಧ ಮನೋಭಾವ ಕಡಿಮೆಯಾಗಿತ್ತು. ಇಂದಿಗೂ ಭಾರತೀಯರು ಉಪವಾಸ, ಉರುಳು ಸೇವೆ, ವ್ರತಾಚರಣೆ, ಜಾತ್ರೆ ಮಹೋತ್ಸವಗಳನ್ನು ಕೈಬಿಟ್ಟಿಲ್ಲ. ಮಾತಿಗೆ ತಪ್ಪಿ ಎಂದು ನಡೆಯುತ್ತಿರಲಿಲ್ಲ. ಸತ್ಯವೇ ತಂದೆ, ತಾಯಿ, ಸತ್ಯವೇ ದೇವರು ಎನ್ನುವ ಮನಃಸ್ಥಿತಿ ಭಾರತೀಯರಲ್ಲಿತ್ತು ಎಂದು ತಿಳಿಸಿದರು.
ದೇಶದ ಅಧ್ಯಾತ್ಮ ಪರಂಪರೆ ಮೇಲೆ ಅನೇಕ ವಿದೇಶಿಯರ ದಾಳಿ ನಡೆದರೂ ಇಲ್ಲಿನ ಸನಾತನ ಪರಂಪರೆಗೆ ಕಿಂಚಿತ್ತೂ ಧಕ್ಕೆಯಾಗಿಲ್ಲ. ಯಾರು ಬಂದು ಯಾವ ಸಂಸ್ಕೃತಿ ಹರಡಿದರೂ ಇಲ್ಲಿನ ಜನತೆ ಭೂಮಿ, ನೀರು, ಆಹಾರ, ಪರಿಸರವನ್ನು ಇಂದಿಗೂ ದೇವರೆಂದು ಪೂಜಿಸುತ್ತಿದ್ದಾರೆ. ಅತ್ಯಂತ ಶ್ರೀಮಂತವಾಗಿರುವ ಈ ಪರಂಪರೆಯನ್ನು ಮುಂದುವರೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಸಾಹಿತಿ ನಿರಂಜನ ದೇವರಮನೆ ವಿಶೇಷ ಉಪನ್ಯಾಸ ನೀಡಿ, ಆಧುನಿಕತೆಯ ನಾಗಾಲೋಟದಲ್ಲಿ ನಮ್ಮ ಸಂಸ್ಕೃತಿ ಜರ್ಜರಿತವಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮದ ಆಚಾರ, ವಿಚಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ದುಶ್ಚಟ, ದುರ್ಗುಣ, ಕೆಟ್ಟ ಭಾವನೆಗಳನ್ನು ತೊರೆದು ಸಾತ್ವಿಕ ಮನೋಭಾವ ಬೆಳೆಸಲು, ಸಾಮರಸ್ಯ, ಸದ್ಭಾವನೆಯನ್ನು ಬೆಳೆಸುವುದು ನಮ್ಮ ಸಂಸ್ಕೃತಿಯ ಆಚರಣೆಗಳ ಉದ್ದೇಶ ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಉಜ್ಜಯಿನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆ ಒಳ್ಳೆಯ ಕಾರ್ಯಕ್ರಮ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ತಾಪಂ ಸದಸ್ಯೆ ಸಿದ್ದಮ್ಮ, ಗ್ರಾಪಂ ಅಧ್ಯಕ್ಷೆ ಪಾಪಮ್ಮ, ಮಾಜಿ ಅಧ್ಯಕ್ಷ ಗುರುಸಿದ್ದಪ್ಪ ಮತ್ತಿತರರು ಇದ್ದರು.